ಮುಂಬೈ: ಹಿಂದಿ ಭಾಷೆಯ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಟ ಸುನಿಲ್ ನಗರ ಸದ್ಯ ಸಂಕಷ್ಟದಲ್ಲಿದ್ದಾರೆ. ದುಡಿಮೆಯ ಎಲ್ಲ ಹಣ ಬರಿದಾಗಿದ್ದು, ಜೀವನೋಪಾಯಕ್ಕಾಗಿ ನೆರವಿನ ಹಸ್ತದ ಎದುರು ನೋಡುತ್ತಿದ್ದಾರೆ. ಸದ್ಯದ ಅವರ ಈ ದುಸ್ಥಿತಿಗೆ ಕಾರಣ ಕೋವಿಡ್ ಎನ್ನುವ ಮಹಾಮಾರಿ.
‘ಶ್ರೀಕೃಷ್ಣ’ ಧಾರಾವಾಹಿಯಲ್ಲಿ ಪಿತಾಮಹ ಭೀಷ್ಮನ ಪಾತ್ರಕ್ಕೆ ಜೀವ ತುಂಬಿದ್ದ ಸುನಿಲ್, ಈಗ ನಿರ್ಗತಿಕರಾಗಿದ್ದಾರೆ. ಕಳೆದ ವರ್ಷದ ಹಾಗೂ ಸದ್ಯ ರಣಕೇಕೆ ಹಾಕುತ್ತಿರುವ ಕೋವಿಡ್ ಸೋಂಕು ಇವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.
ಕೋವಿಡ್ ಪಿಡುಗಿನಿಂದಾಗಿ ಸಿನಿಮಾ ರಂಗದ ಚಟುವಟಿಕೆಗಳು ಮೊಟಕುಗೊಂಡಿವೆ. ಪರಿಣಾಮ ಸಿನಿಮಾಗಳಿಂದ ಬರುವ ಅವಕಾಶಗಳು ಇಲ್ಲದಂತಾಗಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸುನಿಲ್, ಮುಂಬೈನ ಓಶಿವಾರಾದಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಬೇಕಾಯಿತು. ಸದ್ಯ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಅವರ ಜೀವಮಾನವಿಡೀ ದುಡಿದು ಕೂಡಿಟ್ಟದ್ದ ಹಣವೂ ಖಾಲಿಯಾಗಿದೆ.
ಸುನಿಲ್, ತನ್ನ ಕಷ್ಟದ ದಿನಗಳನ್ನು ಸ್ನೇಹಿತರ ಎದುರು ಹಂಚಿಕೊಂಡಿದ್ದಾರಂತೆ. ಈ ಬಗ್ಗೆ ಪತ್ರಿಕೆಯೊಂದು ಸುನಿಲ್ ಅವರನ್ನು ಸಂಪರ್ಕಿಸಿ ನಿಜಾಂಶ ಅರಿಯುವ ಪ್ರಯತ್ನ ಮಾಡಿದೆ. ಈ ವೇಳೆ ಪತ್ರಿಕೆ ಎದುರು ತನ್ನ ನೋವು ತೆರೆದಿಟ್ಟಿರುವ ಅವರು, ಸದ್ಯದ ಪರಿಸ್ಥಿತಿ ( ಕೋವಿಡ್)ಗೆ ಯಾರನ್ನೂ ದೋಷಿಸಬೇಕೆಂಬುದು ತಿಳಿಯದಂತಾಗಿದೆ. ನಾನು ದುಡಿಯುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಹಣ ಗಳಿಸಿದೆ. ಆದರೆ, ಇಂದು ನನಗೆ ಕೆಲಸ ಇಲ್ಲದಂತಾಗಿದೆ. ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿದೆ. ಇನ್ನೊಬ್ಬರ ಎದುರು ಕೈಚಾಚಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಕೋವಿಡ್ ಮೊದಲ ಅಲೆಯ ಪರಿಣಾಮ ಅವಕಾಶಗಳು ಕಡಿಮೆಯಾಗಿದ್ದರಿಂದ ರೆಸ್ಟೋರೆಂಟ್ ವೊಂದರಲ್ಲಿ ಗಾಯಕರಾಗಿ ಸುನಿಲ್ ಸೇರಿಕೊಂಡಿದ್ದರಂತೆ. ಆದರೆ, ಈ ಬಾರಿಯ ಕೋವಿಡ್‍ನಿಂದಾಗಿ ಆ ರೆಸ್ಟೋರೆಂಟ್ ಬಾಗಿಲು ಮುಚ್ಚಿದೆ. ಪರಿಣಾಮ ಮತ್ತೆ ಕೆಲಸ ಇಲ್ಲದಂತಾಗಿದೆ.
ಇನ್ನು ಸುನಿಲ್ ಅವರು 1999 ರಲ್ಲಿ ಬಿಡುಗಡೆಯಾದ ‘ತಾಲ್’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಶ್ರೀಕೃಷ್ಣ,ಓಂ ನಮ ಶಿವಾಯ ಹಾಗೂ ಶ್ರೀ ಗಣೇಶ ಸೇರಿದಂತೆ ಹಲವು ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.