ಬೆಂಗಳೂರು: “ನಾನು ಯಾವತ್ತೂ ಜಾತಿ ಆಧಾರದ ಮೇಲೆ ಕೆಲಸ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ತುರಹಳ್ಳಿಯ ಆದಿಚುಂಚನಗಿರಿ ಮಠದ ಆವರಣದಲ್ಲಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿನಿಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
“ಆಡಳಿತ ಬಿಗಿಗೊಳಿಸಿ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ನನಗೆ ಎಲ್ಲಕ್ಕಿಂತ ಮುಖ್ಯವೆನಿಸುತ್ತದೆ. ಹೀಗಾಗಿ ಜಾತಿವಾರು ಪ್ರಭಾವ ಬಳಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದೇನೆ. ಜಾತಿಗಿಂತ ಜನರ ಪರಿಸ್ಥಿತಿ ಆಧರಿಸಿ ಕೆಲಸ ಮಾಡುತ್ತೇನೆ’ ಎಂದರು.
ರೈತರ ಸಾಲ ಮನ್ನಾ ಜತೆಗೆ ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಹಾಗೂ ದುರ್ಬಲ ವರ್ಗದ ವ್ಯಕ್ತಿಗಳು ಖಾಸಗಿಯವರಿಂದ ಪಡೆದಿರುವ ಸಾಲ ಮನ್ನಾ ಮಾಡಿ ಅವರನ್ನು ಋಣ ಮುಕ್ತಗೊಳಿಸುವ ಉದ್ದೇಶದಿಂದ ಋಣ ಪರಿಹಾರ ಅಧಿನಿಯಮ ಜಾರಿಗೊಳಿಸಲಾಗುತ್ತಿದೆ.
ಇದರೊಂದಿಗೆ ಚಕ್ರಬಡ್ಡಿ ಮತ್ತು ಮೀಟರ್ ಬಡ್ಡಿ ದಂಧೆಗೂ ಕಡಿವಾಣ ಹಾಕುವ ಆಲೋಚನೆ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತಂದು, ಸರ್ಕಾರದಿಂದಲೇ ಬಡ್ಡಿ ರಹಿತ ಸಾಲ ನೀಡುವ ಆಲೋಚನೆ ಇದೆ ಎಂದು ಹೇಳಿದರು.
ಪ್ರತಿ ಶನಿವಾರ ಜನತಾ ದರ್ಶನ: ಇದೇ ವೇಳೆ ಜನತಾ ದರ್ಶನದ ಬಗ್ಗೆ ಪ್ರಸ್ತಾಪಿಸಿದ ಸಿಎಂ, “ಪ್ರತಿದಿನ ಸಾವಿರಾರು ಜನ ಸಮಸ್ಯೆ ಹೊತ್ತು ನನ್ನ ಭೇಟಿಯಾಗಲು ಮನೆ ಹಾಗೂ ಕೃಷ್ಣಾ ಬಳಿ ಬರುತ್ತಿ¨ªಾರೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಬೆಂಗಳೂರಿನಲ್ಲಿದ್ದಾಗ ಪ್ರತಿ ಶನಿವಾರ ಜನತಾದರ್ಶನ ಮಾಡಲು ನಿರ್ಧರಿಸಿದ್ದೇನೆ. ಅಂದು ಬೆಳಗ್ಗಿನಿಂದ ಸಂಜೆಯವರಗೆ ಜನರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವ ಕೆಲಸ ಮಾಡುತ್ತೇನೆ,’ ಎಂದು ತಿಳಿಸಿದರು.
ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ: ಸರ್ಕಾರಿ ನೌಕರರ 6ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ 16,000 ಕೋಟಿ ರೂ., ರೈತರ ಸಾಲ ಮನ್ನಾ ಯೋಜನೆಗೆ 36,000 ಕೋಟಿ ರೂ. ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಇರುವಷ್ಟು ದಿನದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.
ಇದೇ ತಿಂಗಳು ನಮ್ಮ ಸರ್ಕಾರ ನೂರು ದಿನ ಪೂರೈಸಲಿದೆ. ಅಧಿಕಾರಿಗಳು ಇಷ್ಟು ದಿನ ಏನು ಮಾಡಿದ್ದಾರೆ ಎಂಬುದು ನನಗೆ ಬೇಕಾಗಿಲ್ಲ. ಆದರೆ ಇನ್ನುಮುಂದೆ ಜಾತಿ, ಗುಂಪು ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ನನ್ನೊಂದಿಗೆ ಕೈಜೋಡಿಸಬೇಕು.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ