Advertisement

Dr. K Sudhakar: ಕೋವಿಡ್‌ ಸಮಯದಲ್ಲಿ ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ

04:44 PM Sep 01, 2024 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್‌ ಸಮಯದಲ್ಲಿ ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕೆಲಸ ಮಾಡಿದ್ದೇನೆಯೇ ಹೊರತು, ಕಾನೂನುಬಾಹಿರ ಕೆಲಸ ಮಾಡಿಲ್ಲ. ಈ ಸವಾಲನ್ನು ನಾನು ಎದುರಿಸುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವ ಸಮಯದಲ್ಲೇ ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹೇರಿ ಕೋವಿಡ್‌ ಹಗರಣದ ಮಧ್ಯಂತರ ವರದಿ ರೂಪಿಸಲಾಗಿದೆ. ಬಿಜೆಪಿ ಉತ್ತಮ ಪ್ರತಿಪಕ್ಷವಾಗಿ ಹೋರಾಟ ಆರಂಭಿಸಿದ ನಂತರ ಮಧ್ಯಂತರ ವರದಿ ತಯಾರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಂಬಿಕಸ್ಥ ಸಚಿವರು ಹಾಗೂ ಆಪ್ತರು ಗುಣಾಕಾರ, ಭಾಗಾಕಾರ ಮಾಡಿ ವರದಿ ರೂಪಿಸಿದ್ದಾರೆ. ನಾನು ಕೋವಿಡ್‌ ಸಮಯದಲ್ಲಿ ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕೆಲಸ ಮಾಡಿದ್ದೇನೆಯೇ ಹೊರತು, ಕಾನೂನುಬಾಹಿರ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿತ್ತು. ಯಾವುದೇ ತೀರ್ಮಾನವನ್ನು ಮುಖ್ಯ ಕಾರ್ಯದರ್ಶಿಯವರ ತಂಡ, ಮುಖ್ಯಮಂತ್ರಿಯವರ ತಂಡ ಕೂಡ ಪರಿಶೀಲಿಸುತ್ತಿತ್ತು. ಆರೋಗ್ಯ ತುರ್ತು ಪರಿಸ್ಥಿತಿಯ ಆ ಸಮಯದಲ್ಲಿ ನಾಳೆ ಏನು ಎನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಅಂತಹ ಸಮಯದ ಬಗ್ಗೆ ವರದಿ ನೀಡಲಾಗಿದೆ. ತನಿಖಾ ಸಮಿತಿಯವರು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಸತ್ಯಾಂಶ ಇದೆ ಎಂದು ಭಾವಿಸಿದ್ದೇನೆ. ಇದನ್ನು ಸೋರಿಕೆ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.

ರಾಜಕಾರಣದಲ್ಲಿ ಎಲ್ಲರನ್ನೂ ಟಾರ್ಗೆಟ್‌ ಮಾಡಲಾಗುತ್ತದೆ. ವಿಧಾನಸೌಧ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮೊದಲಾದ ನಾಯಕರನ್ನೂ ಈ ವ್ಯವಸ್ಥೆ ಬಿಡಲಿಲ್ಲ, ಶುದ್ಧ ಹಿನ್ನೆಲೆ ಇದೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಈ ವರದಿ ವಿಚಾರದಲ್ಲಿ ಸರ್ಕಾರದ ಹೇಳಿಕೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದರು.

ನಾನು ಆರೋಗ್ಯ ಸಚಿವನಾಗಿ ನನ್ನ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಈ ಕಾಂಗ್ರೆಸ್‌ ಸರ್ಕಾರಕ್ಕೆ ನಾನು ಏನನ್ನೂ ಸಾಬೀತುಪಡಿಸಬೇಕಿಲ್ಲ. ಇವರ ದಿನಗಳು ಮುಗಿಯುತ್ತಿವೆ. ಬಹಳ ಆಯಸ್ಸಿದ್ದರೂ ಕೇವಲ ಮೂರು ವರ್ಷ ಈ ಸರ್ಕಾರ ಇರಲಿದೆ. ಕಾಂಗ್ರೆಸ್‌ಗೆ ಮಾತ್ರ ದ್ವೇಷ ರಾಜಕಾರಣ ಬರುತ್ತದೆ ಎಂದುಕೊಳ್ಳಬೇಕಿಲ್ಲ. ಇದು ದರೋಡೆಕೋರರ ಸರ್ಕಾರವಾಗಿದ್ದು, ಪ್ರತಿ ಇಲಾಖೆಯಲ್ಲಿ ಪರ್ಸೆಂಟೇಜ್‌ ಮಾತ್ರವಲ್ಲದೆ, ಪಾರ್ಟ್‌ನರ್‌ಶಿಪ್‌ ಬಗ್ಗೆ ಮಾತಾಡಲಾಗುತ್ತಿದೆ ಎಂದು ದೂರಿದರು.

Advertisement

ಕೋವಿಡ್‌ ಸಮಯದಲ್ಲಿ ಕಾಂಗ್ರೆಸ್‌ನವರು ಮನೆಯಲ್ಲಿ ಕೂತಿದ್ದರು ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ತನ್ನ ರಾಜಕೀಯ ದಿವಾಳಿತನವನ್ನು ತೋರಿದೆ. ಅಂತಿಮ ವರದಿ ನೀಡಲು ಇನ್ನೂ ಆರು ತಿಂಗಳು ಕಾಲಾವಕಾಶ ಕೇಳಲಾಗಿದೆ. ಈ ವರದಿಗೆ ನಾನು ಕೂಡ ಕಾಯುತ್ತಿದ್ದೇನೆ. ಹಾಗೆಯೇ ತನಿಖೆಯನ್ನು ಕೂಡ ಸ್ವಾಗತಿಸುತ್ತೇನೆ ಎಂದರು.

ನ್ಯಾ.ಕೆಂಪಣ್ಣ ಅವರ ಆಯೋಗದ ವರದಿ ಬಂದು ಎಷ್ಟೋ ವರ್ಷವಾಗಿದೆ. ಈ ವರದಿಯಲ್ಲೇನಿದೆ ಎಂಬುದು ಬಿಜೆಪಿಗೂ ಗೊತ್ತಿದೆ. ನಾವು ದ್ವೇಷ ರಾಜಕಾರಣ ಮಾಡಿದ್ದರೆ, ಕಾಂಗ್ರೆಸ್‌ನ ಅರ್ಧ ನಾಯಕರು ಜೈಲಿಗೆ ಹೋಗುತ್ತಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next