Advertisement

ಜಿಲ್ಲೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದೇನೆ: ಸಲೀಂ ಅಹ್ಮದ್‌

06:22 PM Nov 29, 2021 | Team Udayavani |

ಹಾವೇರಿ: ನಾನು ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ಜಿಲ್ಲೆಯನ್ನೇ ನೋಡಲ್‌ ಆಗಿಟ್ಟುಕೊಂಡು ಹೆಚ್ಚಿನ ಅನುದಾನ ಜಿಲ್ಲೆಗೆ ಕೊಟ್ಟಿದ್ದೇನೆ. ಪಕ್ಷದ ಕಾರ್ಯಕರ್ತರ, ಮುಖಂಡರ ಒತ್ತಾಸೆಯಂತೆ ಈ ಬಾರಿ ಜಿಲ್ಲೆಗೆ ಪಕ್ಷ ಟಿಕೆಟ್‌ ಕೊಟ್ಟಿದೆ. ಹೀಗಾಗಿ ಮೊದಲ ಪ್ರಾಶಸ್ತ್ಯವಾಗಿ ಹೆಚ್ಚು ಮತ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಮನವಿ ಮಾಡಿದರು.

Advertisement

ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ನಗರದ ಸಜ್ಜನರ ಫಂಕ್ಷನ್‌ ಹಾಲ್‌ನಲ್ಲಿ ರವಿವಾರ ನಡೆದ ಹಾವೇರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.

ಗ್ರಾಪಂಗಳಿಗೆ ಅನುದಾನ ಕೊಟ್ಟಿಲ್ಲ. ಗ್ರಾಪಂ ಸದಸ್ಯರಿಗೆ ಗೌರವಧನವನ್ನೂ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಬದಲಾದರೂ ಭ್ರಷ್ಟಾಚಾರ ನಿಂತಿಲ್ಲ, ಮಂತ್ರಿಗಳು ಬದಲಾಗಿಲ್ಲ. ಅಕಾಲಿಕ ಮಳೆ ಬಂದು ಹಾನಿಗೀಡಾದರೂ ಸರ್ಕಾರ ಸ್ಪಂದಿಸಿಲ್ಲ. ಈ ಸರ್ಕಾರಕ್ಕೆ ಹೃದಯ ಇಲ್ಲ. ಈ ಸರ್ಕಾರ ರಾಜ್ಯಕ್ಕೆ ಮಾರಕವಾಗಿದ್ದು,ಸರ್ಕಾರ ಅಧಿಕಾರದಲ್ಲಿ ಇರಬಾರದು ಎಂದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ನಮ್ಮ ಪಕ್ಷದ ಮತಗಳನ್ನು ನಾವು ಮೊದಲು ಗಟ್ಟಿಮಾಡಿಕೊಂಡರೆ ಮೊದಲ ಸುತ್ತಿನಲ್ಲೇ ಗೆಲುವು ಸಾಧಿ ಸಲು ಅನುಕೂಲವಾಗಲಿದೆ. ಈ ಚುನಾವಣೆಯ ಗೆಲುವು ಮುಂಬರುವ ಜಿಪಂ, ತಾಪಂ, ವಿಧಾನಸಭೆ ಚುನಾವಣೆಗೆ ಭದ್ರ ಬುನಾದಿಯಾಗಲಿದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಹಾನಗಲ್ಲ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ನಮಗೆ ಬಲದಂತಾಗಿದೆ. ಈ ಚುನಾವಣೆಯಲ್ಲೂ ಸಲೀಂ ಅಹ್ಮದ್‌ ಅವರನ್ನು ಮೊದಲ ಸುತ್ತಿನಲ್ಲೇ ಗೆಲ್ಲಿಸಲು ಶ್ರಮಿಸೋಣ ಎಂದರು.

Advertisement

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸ್ಥಳೀಯ ಸಂಸ್ಥೆಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರ ವಿಕೇಂದ್ರಿಕರಣ ಮೂಲಕ ಸ್ಥಳೀಯ ಸರ್ಕಾರವನ್ನಾಗಿ ಮಾಡಿದೆ. ಆದರೆ ಪ್ರಸ್ತುತ ಸರ್ಕಾರ ಅಧಿಕಾರಿಗಳು, ಶಾಸಕರ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ದೂರಿದರು. ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಗ್ರಾಪಂ ಅಧ್ಯಕ್ಷರಿಗೆ ಸಹಿ ಹಾಕುವ ಅಧಿಕಾರಿ ಹಾಗೂ ಎಂನರೇಗಾ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಕೊಟ್ಟಿದೆ. ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕ, ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು. ವಿಪ ಸದಸ್ಯ ನಾರಾಯಣಸ್ವಾಮಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಆರ್‌. ಎಂ. ಕುಬೇರಪ್ಪ, ಡಾ| ಸಂಜಯ ಡಾಂಗೆ, ಪ್ರೇಮಾ ಪಾಟೀಲ, ಈರಪ್ಪ ಲಮಾಣಿ, ಶ್ರೀನಿವಾಸ ಹಳ್ಳಳ್ಳಿ, ಎಂ.ಎಂ.ಮೈದೂರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next