Advertisement

ನಾನು ಒಬ್ಬ ಹಿಂದೂ, 400 ದೇವಾಲಯ ಜೀರ್ಣೋದ್ಧಾರ ಮಾಡಿಸಿದ್ದೇನೆ : ಡಿ.ಕೆ.ಶಿವಕುಮಾರ್

07:28 PM Jun 19, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ಪರಿಷ್ಕರಸಿರುವ ಪಠ್ಯದಲ್ಲಿ ಬಾಲಗಂಗಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಕುವೆಂಪು, ನಾರಾಯಣಗುರುಗಳ ಇತಿಹಾಸ ಸೇರಿದಂತೆ ಅನೇಕ ಗಣ್ಯರ ವಿಚಾರ ತಿರುಚಿ ಅಪಮಾನ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Advertisement

ಪತ್ರಿಕಾ ಹೇಳಿಕೆ ನೀಡಿದ ಅವರು ಹಿಂದೂ ವಿರೋಧಿ ಎಂಬ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ನನ್ನ ಕ್ಷೇತ್ರದಲ್ಲಿ 350ರಿಂದ 400 ದೇವಾಲಯ ಜೀರ್ಣೋದ್ಧಾರ ಮಾಡಿಸಿದ್ದೇನೆ. ಬಂದು ನೋಡಲಿ. ನಾನು ಒಬ್ಬ ಹಿಂದೂ. ನಾವು ಎಲ್ಲರಿಗೂ ಗೌರವ ನೀಡುತ್ತೇವೆ. ನಾವು ಯಾರಿಗಾದರೂ ಅಧಿಕಾರ ನೀಡುತ್ತೇವೆ, ಅವರಿಗೇನು? ನಮ್ಮ ಯುವಕರ ಸಂಘಟನೆ ಬಗ್ಗೆ ಇವರಿಗೆ ಭಯ ಇದೇ ಎಂಬುದು ಸ್ಪಷ್ಟವಾಗಿದೆ ‘ ಎಂದು ತಿರುಗೇಟು ಕೊಟ್ಟರು.

ಸಿದ್ದಗಂಗಾ ಶ್ರೀಗಳು, ಮುರುಘಾ ಮಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಹಲವಾರು ಸ್ವಾಮೀಜಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪರಿಷ್ಕರಣೆ ಮಾಡಿದ ಪಠ್ಯಕ್ಕೆ ವಿರೋಧ ಎಂದರೆ ಅದು ನಮ್ಮ ರಾಜಕಾರಣಕ್ಕೆ ಬೆಂಬಲ ನೀಡುವ ವಿಚಾರವಲ್ಲ. ಅಥವಾ ಕೇವಲ ಹೇಳಿಕೆಯ ವಿಚಾರವಲ್ಲ. ಸ್ವಾಮೀಜಿಗಳು ಇರುವುದೇ ಈ ದೇಶದ ಧರ್ಮ, ಸಂಸ್ಕೃತಿ, ನ್ಯಾಯ, ನೀತಿ ಉಳಿಸಲು. ಎಲ್ಲವನ್ನೂ ತ್ಯಾಗ ಮಾಡಿ, ಮಠಗಳನ್ನು ಆರಂಭಿಸಿ ಸಮಾಜ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಆದರೆ ಇಂತಹ ವಿಚಾರಗಳು ಬಂದಾಗ ಸರ್ಕಾರಕ್ಕೆ ಹೆದರಿ ಕೂರಬಾರದು. ಸರ್ಕಾರ ಏನು ಮಾಡುತ್ತದೆ? ಏನು ಮಾಡಲು ಸಾಧ್ಯ? ಹೀಗಾಗಿ ಸ್ವಾಮೀಜಿಗಳು ಈ ವಿಚಾರದಲ್ಲಿ ಧ್ವನಿ ಎತ್ತಬೇಕು. ಅವರಿಗೆ ಹಾಗೂ ಈ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಬೇಕು. ಇದು ಒಂದು ಜಾತಿ, ಸಮುದಾಯದ ವಿಚಾರವಲ್ಲ. ಒಟ್ಟು ಸಮಾಜದ ವಿಚಾರ. ಎಲ್ಲರೂ ಸಂವಿಧಾನ ಒಪ್ಪಿ ಶಾಂತಿಯಿಂದ ಇರಬೇಕು. ಆದರೆ ಸರ್ಕಾರ ಈಗ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದಿದ್ದಾರೆ.

ಹಿಂದೆ ನಮ್ಮ ಸರ್ಕಾರದ ನಿರ್ಧಾರಗಳ ವಿರುದ್ಧ ಇದೇ ಬಿಜೆಪಿಯವರು ಎಷ್ಟು ದೊಡ್ಡ ಹೋರಾಟ ಮಾಡಿದ್ದರು? ಎಷ್ಟು ವಿಚಾರ ಹೇಳಿದ್ದರು.ಸರ್ಕಾರ ಸ್ವಾಮೀಜಿಗಳನ್ನು ಹೆದರಿಸುತ್ತಿದೆಯೆ ಅಥವಾ ಸ್ವಾಮೀಜಿಗಳು ಸರ್ಕಾರವನ್ನು ಹೆದರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ ನೀವು ಸ್ವಾಮೀಜಿಗಳನ್ನೇ ಕೇಳಿ. ಬುದ್ಧ, ಬಸವಣ್ಣ, ಕುವೆಂಪು, ಅಂಬೇಡ್ಕರ್, ನಾರಾಯಣಗುರುಗಳಿಗೆ ಅಪಮಾನ ಆಗಿರುವ ಬಗ್ಗೆ ಅವರನ್ನು ಕೇಳಬೇಕು. ಬಾಲಗಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದು ಆರಾಧಿಸುತ್ತೇವೆ. ಅಂತವರಿಗೆ ಈ ರೀತಿ ಅಪಮಾನ ಮಾಡಿರುವಾಗ ಸಂಬಂಧಪಟ್ಟ ಸಮುದಾಯದ ಸಂಘಟನೆಗಳಿಗೆ ಏನಾಗಿದೆ? ಒಕ್ಕಲಿಗರ ಸಂಘ ಇರಲಿ, ವೀರಶೈವ ಸಂಘ ಇರಲಿ, ಇತರ ಸಂಘಗಳಿಗೆ ಏನಾಗಿದೆ? ಅವರೇಕೆ ಧ್ವನಿ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

Advertisement

ರಾಜಕೀಯ ನಾಯಕರ ವಿಚಾರ ಬಿಡಿ. ಕೆಲವರು ಒಪ್ಪಂದ ಮಾಡಿಕೊಂಡು ಅವರವರ ರಾಜಕಾರಣ ಮಾಡುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಮಠಗಳು ಆ ರೀತಿ ಆಗಬಾರದು. ನಮಗೆ ರಾಜಕೀಯ ಬೆಂಬಲ ನೀಡಿ ಎಂದು ನಾನು ಮಠಗಳನ್ನು ಕೇಳುತ್ತಿಲ್ಲ ಎಂದರು.

ವಿವಿಧ ಕನ್ನಡ ಸಂಘಟನೆಗಳು ನಿನ್ನೆ ಪ್ರತಿಭಟನೆ ಹಮ್ಮಿಕೊಂಡಿದ್ದವು. ಅವರಿಗೆ ಯಾವುದೇ ರಾಜಕೀಯದ ಅಗತ್ಯವಿಲ್ಲ. ಅದೇ ರೀತಿ ಸ್ವಾಮೀಜಿಗಳು ಈ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಅವರ ಪಾದಕ್ಕೆ ನಮಸ್ಕರಿಸುತ್ತಾ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

ಮುಖ್ಯಮಂತ್ರಿಗಳು ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ, ಆದರೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ, ‘ ಅವರು ಸುಮ್ಮನೆ ಹೇಳುತ್ತಿದ್ದಾರೆ. ಅವರಿಗೆ ಎಷ್ಟು ಭಯ ಇದೇ ಎಂದರೆ ಪ್ರಧಾನಮಂತ್ರಿಗಳು ಪ್ರಯಾಣ ಮಾಡುವ ದಾರಿಯಲ್ಲಿನ ಕಾಲೇಜುಗಳಿಗೆ ರಜೆ ಕೊಟ್ಟಿದ್ದಾರೆ. ಯಾಕೆ ಕೊಡಬೇಕು? ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರೇ? ಅವರೇನು ಗಲಾಟೆ ಮಾಡುತ್ತಾರಾ? ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆ ಸಂಸ್ಕೃತಿ ಇಲ್ಲ. ಪ್ರಧಾನಿಗಳು ಬರುತ್ತಾರೆ, ಹೋಗುತ್ತಾರೆ. ಅವರಿಗೆ ಅಗತ್ಯವಿರುವ ಭದ್ರತೆ ನೀಡಿ. ಹುಡುಗರು ಅವರು ಹೋಗುವ ದಾರಿಯಲ್ಲಿ ಕೈ ಬೀಸಬೇಕಾ? ರೋಡ್ ಶೋ ಮಾಡಿಸಬೇಕಾ? ಇನ್ನು ಸಚಿವರೊಬ್ಬರು ಅಗ್ನಿಪಥ್ ಯೋಜನೆ ಕುರಿತು, ಸೆಕ್ಯೂರಿಟಿ ಗಾರ್ಡ್, ಫೈರ್ ಫೋರ್ಸ್ ಎಂದು ಹೇಳುತ್ತಿದ್ದಾರೆ. ನಮ್ಮ ಹುಡುಗರು ವಿದ್ಯಾಭ್ಯಾಸ ಮಾಡುವುದು ಬೇಡವೇ? ಪದವಿ ಶಿಕ್ಷಣ ಪಡೆಯುವುದು ಬೇಡವೇ? ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ನಾವು ಹೋರಾಟ ಮಾಡುತ್ತಿದ್ದು, ಇವರು 17 ವರ್ಷಕ್ಕೆ ಯುವಕರನ್ನು ಸೇನೆಗೆ ಆಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ ಗಾರ್ಡ್ ಕೆಲಸಕ್ಕೆ ಹಾಕುತ್ತಾರಂತೆ. ಇಷ್ಟು ವರ್ಷಗಳ ಕಾಲ ನಮ್ಮ ಯುವಕರು ತರಬೇತಿ ಪಡೆದು ಕಷ್ಟ ಕಾಲದಲ್ಲಿ ದೇಶ ರಕ್ಷಣೆ ಮಾಡಿದ್ದಾರಲ್ಲವೆ? ಅವರಿಗೆ ಈ ರೀತಿ ಅಪಮಾನ ಮಾಡಬಹುದೇ? ಎಂದು ಪ್ರಶ್ನಿಸಿದರು.

ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಮಂತ್ರಿಗಳು ತಮ್ಮ ಮಕ್ಕಳನ್ನು ಇದಕ್ಕೆ ಸೇರಿಸುತ್ತಾರೆಯೇ? ನಿಮ್ಮ ಶಾಸಕರ ಮಕ್ಕಳನ್ನು ಕಳುಹಿಸಿ. ನಿಮ್ಮ ಮಕ್ಕಳು ಮಾತ್ರ ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್ ಗಳಾಗ ಬೇಕು. ಬೇರೆ ಬಡವರ ಮಕ್ಕಳು ಗಾರ್ಡ್ ಕೆಲಸ ಮಾಡಬೇಕಾ? ಇದಕ್ಕೆ ನಮ್ಮ ವಿರೋಧವಿದೆ. ಯುವಕರು ನಮ್ಮ ಆಸ್ತಿ. ವಿಶ್ವದಲ್ಲೇ ಅತ್ಯಂತ ಪ್ರತಿಭಾವಂತರೆನಿಸಿದ್ದಾರೆ. ಬೇರೆ ದೇಶಗಳು ನಮ್ಮ ಯುವಕರನ್ನು ಗುರುತಿಸಿ ಕೆಲಸ ಕೊಡುತ್ತಿದ್ದಾರೆ. ನೀವು ನಮ್ಮ ಯುವಕರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next