ಹಾವೇರಿ: ಮೀಸಲಾತಿ ವಿಚಾರದಲ್ಲಿ ಗುರುಗಳ ಮೇಲೆ ಸಿಎಂ ಒತ್ತಡ ಹಾಕಿದ್ದಾರೆಂದು ವಿರೋಧ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಆದರೆ ಅಂತಹ ಕೆಲಸ ಮಾಡುವ ಅಗತ್ಯ ನನಗಿಲ್ಲ. ರಾಜಕಾರಣದಿಂದಲೇ ಮೀಸಲಾತಿ ತಡವಾಗಿದೆ. ಪ್ರಮಾಣ ಮಾಡಿ ಹೇಳುತ್ತೇನೆ ನಾನು ಯಾರಿಗು ಒತ್ತಡ ಹಾಕಿಲ್ಲ. ನಾನು ಯಾರಿಗೂ ಹೆದರುವುದಿಲ್ಲ ಎಂದು ಮುಖ್ಯಂಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿಯಲ್ಲಿ ಪಂಚಮಸಾಲಿ ಸಮಾಜದ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯ ಸಮ್ಮತವಾಗಿ ಮೀಸಲಾತಿ ತೀರ್ಮಾನ ಮಾಡಿದ್ದೇವೆ. ಈ ಬೇಡಿಕೆಗೆ ಸದಾ ಕಾಲ ನಮ್ಮ ಜೊತೆಗೆ ಚರ್ಚೆ ಮಾಡಿಕೊಂಡು ಬಂದಿದ್ದಾರೆ ವಚನಾನಂದ ಶ್ರೀ. ಈ ವಿಚಾರದಲ್ಲಿ ಬಹಳ ದೊಡ್ಡ ಪಾತ್ರ ವಚನಾನಂದ ಶ್ರೀಗಳದ್ದು ಇದೆ. ಮತ್ತೊಬ್ಬ ಗುರುಗಳು ಹೋರಾಟ ಮಾಡಿದ್ದರು, ಆ ಹೋರಾಟದ ಒತ್ತಡವು ಇತ್ತು ಎಂದರು.
ಎಲ್ಲಾ ಸಮುದಾಯದವರಿಗೆ ನ್ಯಾಯ ಕೊಡಬೇಕು. ಯಾವುದೇ ದಿಟ್ಟ ಕ್ರಮ ಕೈಗೊಳ್ಳಲು ಬೊಮ್ಮಾಯಿ ಹಿಂದೆ ಮುಂದೆ ನೊಡಲ್ಲ. ಹಿಂದೆ 2016 ರಲ್ಲಿ ಈ ಅರ್ಜಿ ಕಾಂಗ್ರೆಸ್ ನವರು ತಿರಸ್ಕಾರ ಮಾಡಿದ್ದರು. ಇದು ಒಂದು ಸಮುದಾಯದ ಪ್ರಶ್ನೆ ಅಲ್ಲ ಚುನಾವಣೆಗಾಗಿ ಸಣ್ಣ ರಾಜಕಾರಣ ಮಾಡುವುದು ನಮ್ಮ ಡಿಕ್ಷನರಿಯಲ್ಲಿಲ್ಲ. ಜೇನುಗೂಡಿಗೆ ಕೈ ಹಾಕಿ, ಜೇನು ಕಡಿದರು ಪರವಾಗಿಲ್ಲವೆಂದು ನ್ಯಾಯ ಕೊಟ್ಟಿದ್ದೇನೆ. ನಾನು ಮೀಸಲಾತಿ ನೀಡುವುದನ್ನು ಮುಂದಕ್ಕೆ ಹಾಕಬಹುದಾಗಿತ್ತು, ನನ್ನ ಜಾಯಮಾನ ಅದಲ್ಲ, ಸಮಸ್ಯೆ ಬಗೆಹರಿಸುವುದು ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಋಣ ನನ್ನ ಮೇಲಿದೆ. ಹಲವು ನಿಗಮಗಳನ್ನು ಮಾಡಿದ್ದೇನೆ. ಸರ್ವರಿಗೂ ಸಮಪಾಲು ತತ್ವದಡಿ ಕೆಲಸ ಮಾಡುತ್ತಿದ್ದೆನೆ. ಆಶೀರ್ವಾದ ಇರಲಿ. ಇದು ಅಭಿವೃದ್ಧಿ ಪಯಣ, ಇಲ್ಲಿಗೆ ನಿಂತಿಲ್ಲ ಮುಂದುವರಿಯುತ್ತದೆ ಎಂದು ಹೇಳಿದರು.