Advertisement

ದೇಶ ವಿಭಜಿಸಲು ನಾನು ಬಿಡುವುದಿಲ್ಲ

09:17 AM Apr 16, 2019 | Team Udayavani |

ಹೊಸದಿಲ್ಲಿ: “ಜಮ್ಮು ಮತ್ತು ಕಾಶ್ಮೀರದ ಮೂರು ತಲೆಮಾರುಗಳನ್ನು ಈ ಅಬ್ದುಲ್ಲಾಗಳು ಮತ್ತು ಮುಫ್ತಿಗಳ ಕುಟುಂಬವು ನಾಶ ಮಾಡಿದ್ದು, ಭಾರತವನ್ನು ವಿಭಜಿಸುವ ಇವರ ಯತ್ನ ಸಫ‌ಲವಾಗಲು ನಾನು ಬಿಡುವುದಿಲ್ಲ.’

Advertisement

ಕಣಿವೆ ರಾಜ್ಯದಲ್ಲಿನ ಎರಡು ಪ್ರಭಾವಿ ಪಕ್ಷಗಳಾದ ಎನ್‌ಸಿ ಹಾಗೂ ಪಿಡಿಪಿ ವಿರುದ್ಧ ಕಥುವಾದಲ್ಲಿ ಪ್ರಧಾನಿ ಮೋದಿ ವಾಗ್ಧಾಳಿ ನಡೆಸಿದ ಪರಿಯಿದು.

ಇಲ್ಲಿನ ಉಧಾಂಪುರ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸುತ್ತಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಪರ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, “ಪಾಕಿಸ್ಥಾನ ಹಾಕಿದ್ದ ಅಣ್ವಸ್ತ್ರ ದಾಳಿಯ ಬೆದರಿಕೆಯ ಬೆಂಕಿಯನ್ನು ಹೇಗೆ ಆರಿಸಲಾಯಿತೋ, ಅದೇ ರೀತಿ ಭಾರತದಿಂದ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸಲು ಬಯಸುವ ಎನ್‌ಸಿ, ಪಿಡಿಪಿ, ಕಾಂಗ್ರೆಸ್‌ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳ ನಿಜ ಬಣ್ಣವನ್ನು ಬಯಲು ಮಾಡಿದ್ದೇವೆ’ ಎಂದಿದ್ದಾರೆ.

ಈ ಎಲ್ಲ ಪಕ್ಷಗಳೂ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸುವ ಬೆದರಿಕೆ ಹಾಕುತ್ತಿವೆ. ರಕ್ತಪಾತದ ಬಗ್ಗೆ, ಪ್ರತ್ಯೇಕ ಪ್ರಧಾನಿಯ ಬಗ್ಗೆ ಮಾತನಾಡುತ್ತಿವೆ. ಜಮ್ಮು-ಕಾಶ್ಮೀರದ ಜನರನ್ನು ಕೆಲವೇ ಕೆಲವು ಬೆರಳೆಣಿಕೆಯ ಜನರು ಒತ್ತೆಯಲ್ಲಿಟ್ಟುಕೊಳ್ಳಲು ಬಿಡುವುದಿಲ್ಲ. ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಮುಫ್ತಿಗಳು ಹಾಗೂ ಅಬ್ದುಲ್ಲಾಗಳನ್ನು ಅಧಿಕಾರದಿಂದ ದೂರವಿಡಬೇಕು. ಇಂಥವರು ನಮ್ಮ ದೇಶವನ್ನು ವಿಭಜಿಸಲು ಬಿಡುವುದಿಲ್ಲ ಎಂದೂ ಮೋದಿ ವಾಗ್ಧಾನ ಮಾಡಿದ್ದಾರೆ.

ಮೆಹಬೂಬಾ ತಿರುಗೇಟು: ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, “ಮುಸ್ಲಿಮರನ್ನು ಮತ್ತು ಅಲ್ಪಸಂಖ್ಯಾತರನ್ನು ನಿರ್ಮೂಲನೆ ಮಾಡುವಂಥ ವಿಷಕಾರಿ ಅಜೆಂಡಾದ ಮೂಲಕ ದೇಶ ಒಡೆಯುತ್ತಿರುವುದು ಬಿಜೆಪಿಯೇ ಹೊರತು ಬೇರ್ಯಾರೂ ಅಲ್ಲ’ ಎಂದಿದ್ದಾರೆ. ಅಲ್ಲದೆ, ಚುನಾವಣೆಗೆ ಮುನ್ನ ರಾಜಕೀಯ ಕುಟುಂಬಗಳ ವಿರುದ್ಧ ಟೀಕೆ ಮಾಡುವ ಮೋದಿಯವರು, ಚುನಾವಣೆಯ ಫ‌ಲಿತಾಂಶ ಬಂದೊಡನೆ ಅದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತನ್ನ ರಾಯಭಾರಿಗಳನ್ನು ಕಳುಹಿಸಿಕೊಡುವುದೇಕೆ? 1999ರಲ್ಲಿ ಎನ್‌ಸಿ ಜತೆ, 2015ರಲ್ಲಿ ಪಿಡಿಪಿ ಜತೆ ಕೈಜೋಡಿಸಿದ್ದೇಕೆ ಎಂದೂ ಮೆಹಬೂಬಾ ಪ್ರಶ್ನಿಸಿದ್ದಾರೆ.

Advertisement

ಚಾಯ್‌ವಾಲಾ ಪ್ರಧಾನಿಯಾಗಲು ಸಂವಿಧಾನ ಕಾರಣ: ಉತ್ತರಪ್ರದೇಶದ ಅಲಿಗಢದಲ್ಲೂ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳ ಮಹಾಮೈತ್ರಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ದೇಶದಿಂದ ಬಡತನ, ಭಯೋತ್ಪಾದನೆ ನಿರ್ಮೂಲನೆ ಮಾಡಲು ಹೊರಟರೆ, ಈ ಮಹಾಕಲಬೆರಕೆಯ ಪಕ್ಷಗಳು ನನ್ನನ್ನೇ ನಿರ್ಮೂಲನೆ ಮಾಡಲು ಹೊರಟಿವೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ, ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿಯನ್ನು ಸ್ಮರಿಸಿದ ಮೋದಿ, “ಬಾಬಾ ಸಾಹೇಬ್‌ರ ಸಂವಿಧಾನದ ಶಕ್ತಿಯಿಂದಲೇ ಒಬ್ಬ ಚಾಯ್‌ವಾಲಾ ಪ್ರಧಾನಿಯಾಗಲು ಸಾಧ್ಯವಾಯಿತು. ಬಡ ಕುಟುಂಬದಿಂದ ಬಂದ ವ್ಯಕ್ತಿಗಳು ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗೇರಲು ಸಾಧ್ಯವಾಯಿತು’ ಎಂದೂ ಹೇಳಿದ್ದಾರೆ.

6 ಅಭ್ಯರ್ಥಿಗಳ ಹೊಸ ಪಟ್ಟಿ ಬಿಡುಗಡೆ
ಲೋಕಸಭೆ ಚುನಾವಣೆಗೆ 6 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಜೆಪಿ ರವಿವಾರ ಬಿಡುಗಡೆ ಮಾಡಿದೆ. ಹರಿಯಾಣಕ್ಕೆ ಇಬ್ಬರು, ಮಧ್ಯಪ್ರದೇಶಕ್ಕೆ ಮೂವರು ಮತ್ತು ರಾಜಸ್ಥಾನಕ್ಕೆ ಒಬ್ಬ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಕೇಂದ್ರ ಸಚಿವ ಬೀರೇಂದರ್‌ ಸಿಂಗ್‌ ಪುತ್ರ ಬೃಜೇಂದ್ರ ಸಿಂಗ್‌ಗೆ ಹರಿಯಾಣದ ಹಿಸಾರ್‌ನ ಟಿಕೆಟ್‌ ನೀಡಲಾಗಿದೆ. ವಿಶೇಷವೆಂದರೆ, ಭೂಪಾಲ, ವಿದಿಶಾ ಮತ್ತು ಇಂದೋರ್‌ನಂಥ ಮೂರು ಪ್ರಮುಖ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಯನ್ನು ಘೋಷಿಸದೇ ಇರುವ ಮೂಲಕ ಬಿಜೆಪಿ ಸಸ್ಪೆನ್ಸ್‌ ಕಾಯ್ದುಕೊಂಡಿದೆ.

ಬೀರೇಂದರ್‌ ರಾಜೀನಾಮೆ: ಹರಿಯಾಣ ಬಿಜೆಪಿ ಹಿರಿಯ ನಾಯಕ, ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದರ್‌ ಸಿಂಗ್‌ ರವಿವಾರ ಸಂಪುಟ ಹಾಗೂ ರಾಜ್ಯಸಭೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.

ಅವರ ಪುತ್ರ ಬೃಜೇಂದ್ರ ಸಿಂಗ್‌ ಅವರಿಗೆ ಬಿಜೆಪಿ ಹರಿಯಾಣದ ಹಿಸಾರ್‌ನಿಂದ ಟಿಕೆಟ್‌ ಘೋಷಿಸಿದ ಬೆನ್ನಲ್ಲೇ ಅವರು ಈ ಘೋಷಣೆ ಮಾಡಿದ್ದಾರೆ. ವಂಶಾಡಳಿತ ವಿರೋಧಿ ನೀತಿಯನ್ನು ಪಕ್ಷ ಅನುಸರಿಸುತ್ತಿದ್ದು, ಈಗ ಪುತ್ರನಿಗೆ ಟಿಕೆಟ್‌ ನೀಡಿರುವ ಕಾರಣ ನಾನು ಹುದ್ದೆ ತ್ಯಜಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ರವಿವಾರ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೈಲು ಸೇರಿರುವ ಗ್ಯಾಂಗ್‌ಸ್ಟರ್‌ ಮುಖಾ¤ರ್‌ ಅನ್ಸಾರಿಯ ಸಹೋದರ ಅಫ‌jಲ್‌ ಅನ್ಸಾರಿಗೆ ಗಾಜಿಪುರ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.

ಸರಕಾರವನ್ನು ಶ್ಲಾಘಿಸಿ: ವಿಎಚ್‌ಪಿ
ಬಾಲಾಕೋಟ್‌ನಲ್ಲಿ ವಾಯುಪಡೆ ನಡೆಸಿದ ವೈಮಾನಿಕ ದಾಳಿಯನ್ನು ಮತ್ತು ಅದಕ್ಕೆ ಅವಕಾಶ ಕಲ್ಪಿಸಿದ ದೇಶದ ನಾಯಕತ್ವವನ್ನು ಎಲ್ಲರೂ ಸಂಭ್ರಮಿಸಬೇಕು ಮತ್ತು ಶ್ಲಾ ಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ. ಮಹಾರಾಷ್ಟ್ರದ ಠಾಣೆಯಲ್ಲಿ ಈ ಕುರಿತು ಮಾತನಾಡಿದ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ಭಾರತೀಯ ವಾಯುಪಡೆಯು 1971ರ ಬಳಿಕ ಯಾವತ್ತೂ ಗಡಿ ದಾಟಿ ಹೋಗಿ ದಾಳಿ ನಡೆಸಿಲ್ಲ. ಈ ಬಾರಿ ಅದನ್ನು ಮಾಡಿದೆ. ಆದರೆ, ಈ ವಿಚಾರವನ್ನು ಚುನಾವಣೆ ವೇಳೆ ಪ್ರಸ್ತಾಪಿಸಬಾರದು ಎಂದು ವಿಪಕ್ಷಗಳು ಹೇಳುತ್ತಿವೆ. ದಾಳಿ ನಡೆಸುವ ಸಾಮರ್ಥ್ಯ ದೇಶದ ವಾಯುಪಡೆಗೆ ಯಾವತ್ತೂ ಇತ್ತು. ಆದರೆ, ಈಗಿರುವ ರಾಜಕೀಯ ನಾಯಕತ್ವಕ್ಕೆ ಇಚ್ಛಾಶಕ್ತಿ ಇದ್ದ ಕಾರಣ ದಾಳಿ ನಡೆಸಲು ಸೂಚಿಸಿತು. ಅದನ್ನು ನಾವು ಶ್ಲಾಘಿಸಬೇಕು ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next