ಯಾವತ್ತೂ ನಾವು ಪಾರ್ಕ್‌ನಲ್ಲಿ ಗಂಟೆಗಟ್ಟಲೆ ಕೂರಲಿಲ್ಲ. ನಿನಗೆ ಪೂಸಿ ಹೊಡೆದು ಬೈಕ್ ರೈಡ್ ಹೋಗಲಿಲ್ಲ. ಕರೆನ್ಸಿ ಖಾಲಿ ಆಗುವಷ್ಟು ಹೊತ್ತು ಮೊಬೈಲ್‌ನಲ್ಲಿ ಹರಟಲಿಲ್ಲ. ಇನ್ನು ಸಿನಿಮಾ, ಟ್ರೀಪ್ ಅಂತೂ ದೂರದ ಮಾತು.
ಮನದಲ್ಲಿ ಸಾವಿರ ಮಾತುಗಳಿವೆ, ಹೇಳ್ಳೋಕಾಗ್ತಿಲ್ಲ. ಕಣ್ಣ ತುಂಬಾ ನೀರಿದೆ, ಅಳ್ಳೋಕೂ ಆಗ್ತಿಲ್ಲ. ಯಾಕಂದ್ರೆ, ನಾನು ಅಂದುಕೊಂಡ ಹಾಗೆ ಏನೂ ನಡೆಯುತ್ತಿಲ್ಲ. ನನ್ನನ್ನು ದೂರ ಮಾಡಿ ನೀನು ಖುಷಿಯಾಗಿದ್ದೀಯ. ಆದರೆ, ನಾನು ಹೊರ ಜಗತ್ತಿನ ಕಣ್ಣಿಗೆ ಮಾತ್ರ ಬದುಕಿದ್ದೇನೆ. ಒಡಲೊಳಗೆ ಜೀವಂತಿಕೆ ಅನ್ನೋದೇ ಸತ್ತು ಹೋಗಿದೆ.
ನಿಂಗೆ ನೆನಪಿದೆಯಾ, ನಾನು ಯಾವಾಗಲೂ “ಪ್ರೀತಿ ಅಂದ್ರೇನು?’ ಅಂತ ಪೆದ್ದುಪೆದ್ದು ಪ್ರಶ್ನೆ ಕೇಳುತ್ತಿದ್ದೆ. ನಿಂಗೆ ನನ್ನ ಮೇಲೆ ಚೂರೂ ಪ್ರೀತಿಯಿಲ್ಲ ಅಂತ ಹುಸಿ ಮುನಿಸು ತೋರುತ್ತಿದ್ದೆ. ಆದರೆ, ಅವೆಲ್ಲವನ್ನೂ ನೀನು ನಿಜ ಮಾಡಿಬಿಟ್ಟೆ. ಈಗ ಅರ್ಥವಾಗುತ್ತಿದೆ, ನಿಂಗೆ ನನ್ಮೆàಲೆ ಪ್ರೀತಿ ಇರಲೇ ಇಲ್ಲ ಅಂತ. ಪ್ರೀತಿ ಅಂದರೇನು ಎಂಬ ಪ್ರಶ್ನೆಗೆ ನಿನ್ನಿಂದ ಸಿಕ್ಕಿರುವ ಉತ್ತರ “ಮೋಸ’!
ನಿನ್ನನ್ನು ಮರೆಯೋದು ಹೇಗೆ?- ಈ ಪ್ರಶ್ನೆಯನ್ನು ದಿನಕ್ಕೆ ಸಾವಿರ ಬಾರಿ ಕೇಳಿಕೊಳ್ಳುತ್ತಾ, ಮತ್ತೆ ನಿನ್ನದೇ ನೆನಪಿನ ಕೂಪದೊಳಗೆ ಹೂತು ಹೋಗುತ್ತೇನೆ. ಯಾಕಂದ್ರೆ, ಪ್ರೀತಿಗೆ ನೆನೆಯುವುದು ಮಾತ್ರ ಗೊತ್ತೇ ವಿನಃ ಮರೆಯುವುದನ್ನು ಅದು ಕಲಿತಿಲ್ಲ. ಆ ದಿನ ನಿನ್ನ ಎದೆಯ ಮೇಲೆ ಕಿವಿಯಿಟ್ಟು ಹೃದಯ ಬಡಿತ ಕೇಳಿದ್ದೆ. ಆ ಬಡಿತ ನನ್ನ ಹೆಸರು ಹೇಳುತ್ತಿದೆ ಅಂತ ಸುಳ್ಳು ಸುಳ್ಳೇ ಸಂಭ್ರಮಪಟ್ಟಿದ್ದೆ. ಆದರೆ, ಒಡೆದ ನನ್ನ ಹೃದಯ ಬಡಿತದಲ್ಲಿ ಕೇಳಿಸೋದು ನಿನ್ನ ಹೆಸರೇ.
ನನ್ನ ಕನಸುಗಳನ್ನೆಲ್ಲಾ ನೀನು ದೋಚಿಕೊಂಡೆ. ಈಗ ಕನಸುಗಳೇ ಬೀಳುತ್ತಿಲ್ಲ. ನಗುವನ್ನು ಕಸಿದುಕೊಂಡುಬಿಟ್ಟೆ, ಈಗ ಕಣ್ಣಿನಲ್ಲಿ ಕಂಬನಿಯೇಕೋ ನಿಲ್ಲುತ್ತಲೇ ಇಲ್ಲ. ನಿನ್ನ ನೆನಪಿನಲ್ಲೇ ಕಳೆದು ಹೋಗಿರುವ ಹೃದಯಕ್ಕೆ ವಾಸ್ತವವನ್ನು ಅರಗಿಸಿಕೊಳ್ಳುವ ಶಕ್ತಿಯಿಲ್ಲ.
ಎಲ್ಲಾ ಲವರ್ಗಳಂತೆ ನಮ್ಮದು ಆಡಂಬರದ ಪ್ರೀತಿಯಾಗಿರಲಿಲ್ಲ. ಯಾವತ್ತೂ ನಾವು ಪಾರ್ಕ್‌ನಲ್ಲಿ ಗಂಟೆಗಟ್ಟಲೆ ಕೂರಲಿಲ್ಲ. ನಿನಗೆ ಪೂಸಿ ಹೊಡೆದು ಬೈಕ್ ರೈಡ್ ಹೋಗಲಿಲ್ಲ. ಕರೆನ್ಸಿ ಖಾಲಿ ಆಗುವಷ್ಟು ಹೊತ್ತು ಮೊಬೈಲ್‌ನಲ್ಲಿ ಹರಟಲಿಲ್ಲ. ಇನ್ನು ಸಿನಿಮಾ, ಟ್ರೀಪ್ ಅಂತೂ ದೂರದ ಮಾತು. ಆದರೆ, ಒಂದು ದಿನವೂ ಪರಸ್ಪರ ನೋಡದೇ ಇರುತ್ತಿರಲಿಲ್ಲ. ನಾವು ಆಧುನಿಕ ಪ್ರೇಮಿಗಳಂತಲ್ಲ ಅಂತ ನಾನೆಷ್ಟು ಜಂಬ ಪಡುತ್ತಿದ್ದೆ ಗೊತ್ತಾ? ಅದ್ಯಾರ ಕೆಟ್ಟ ಕಣ್ಣು ಬಿತ್ತೋ ನಮ್ಮ ಪ್ರೀತಿ ಮೇಲೆ ನಾ ಕಾಣೆ… ನಾ ಕಟ್ಟಿದ ಪ್ರೀತಿಯರಮನೆ ನೆಲ ಕಚ್ಚಿಬಿಟ್ಟಿತು.
ನನ್ನ ಆಯಸ್ಸು ಇರುವವರೆಗೆ ನಿನ್ನ ಪ್ರೀತಿ ಸಿಗಬೇಕು ಅಥವಾ ನಿನ್ನ ಪ್ರೀತಿ ಇರುವಷ್ಟು ದಿನ ಮಾತ್ರ ಆಯಸ್ಸು ಸಾಕು ಅಂತ ದೇವರ ಬಳಿ ಬೇಡಿಕೊಳ್ಳುತ್ತಿದ್ದೆ. ನನ್ನ ಕೋರಿಕೆ ನಿಜವಾಗಿದೆ. ನೀನು ದೂರಾದೆ, ನಾನು ಬದುಕಿದ್ದೂ ಶವದಂತಾದೆ!
– ಸುನೀತ ರಾಥೋಡ್ ಬಿ.ಎಚ್., ದಾವಣಗೆರೆ