Advertisement

ನಾನು ಮಾಡಿದ ಕ್ಲೇಷಾಲಂಕಾರ

10:11 PM Sep 10, 2019 | mahesh |

ಕೂದಲನ್ನು ಮಡಚಿ ಹಿಡಿದುಕೊಂಡಿದ್ದವಳು ಯಾವುದೋ ಯೋಚನೆಯಲ್ಲಿ ಸರಕ್ಕನೆ ಕತ್ತರಿ ಆಡಿಸಿಯೇ ಬಿಟ್ಟೆ. ಒಂದೇ ಕ್ಷಣದಲ್ಲಿ, ಅವರ ನೀಳ ಕೂದಲಿನಲ್ಲಿ ಮುಕ್ಕಾಲು ಭಾಗ ನೆಲದಲ್ಲಿತ್ತು. ತಲೆಯಲ್ಲಿ ಉಳಿದಿದ್ದು ಕೊತ್ತಂಬರಿ ಸೊಪ್ಪಿನಷ್ಟು ಕೂದಲು ಮಾತ್ರ! ಅದನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ.

Advertisement

ನಾವು ಇರುವುದು ತಾಲೂಕು ಕೇಂದ್ರದಿಂದ ದೂರವಿರುವ ಒಂದು ಹಳ್ಳಿಯಲ್ಲಿ. ನಮ್ಮ ಮನೆಯವರ ತಂಗಿ ಇರುವುದು ಕೂಡಾ ಬೇರೊಂದು ಹಳ್ಳಿಯಲ್ಲಿಯೇ. ಆದರೆ ಅವರು ಬೇರೆ ಹಳ್ಳಿ ಹುಡುಗಿಯರಂತಲ್ಲ. ಅವರಿಗೆ ಫ್ಯಾಷನ್‌ ಬಗ್ಗೆ, ಹೇರ್‌ಸ್ಟೈಲ್‌, ಮೇಕ್‌ಅಪ್‌ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಹೊಸದಾಗಿ ಯಾವ ಫ್ಯಾಷನ್‌ ಬಂದರೂ ಅದನ್ನು ತಾವೂ ಅಳವಡಿಸಿಕೊಂಡು, ಚಂದ ಕಾಣಿಸಬೇಕೆಂದು ಆಸೆಪಡುತ್ತಿದ್ದರು.

ಅವರೊಮ್ಮೆ ಕೆಲ ದಿನಗಳ ಮಟ್ಟಿಗೆ ತವರುಮನೆಗೆ ಬಂದಿದ್ದರು. ಆಗ ಅವರಿಗೆ ಕೂದಲನ್ನು ವಿ ಶೇಪ್‌ನಲ್ಲಿ ಕತ್ತರಿಸಿಕೊಳ್ಳಬೇಕೆಂದು ಬಯಕೆಯಾಯ್ತು. ಆದರೇನು ಮಾಡುವುದು? ನಮ್ಮ ಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್‌ಗಳು ಇರಲಿಲ್ಲ. ಹೇರ್‌ಕಟ್‌ ಮಾಡಿಸಲು ದೂರದ ತಾಲೂಕು ಕೇಂದ್ರಕ್ಕೇ ಹೋಗಬೇಕಿತ್ತು. ಅಷ್ಟು ಸಣ್ಣ ಕೆಲಸಕ್ಕಾಗಿ ಅಷ್ಟು ದೂರ ಹೋಗಬೇಕಾ ಅಂತ ಯೋಚಿಸಿ, ಸುಮ್ಮನಾದರು. ಆದರೆ, ಹೊಸ ಹೇರ್‌ಸ್ಟೈಲ್‌ನ ಆಸೆ ಅವರನ್ನು ಸುಮ್ಮನಿರಲು ಬಿಡಲಿಲ್ಲ.

ಕೊನೆಗೆ, “ನಾನು ಹೇಳಿದ ಹಾಗೆ ನನ್ನ ಹೇರ್‌ಕಟ್‌ ಮಾಡ್ತೀಯಾ?’ ಅಂತ ನನ್ನಲ್ಲಿ ಕೇಳಿಕೊಂಡರು. ಬಹಳಷ್ಟು ಸಾರಿ ನನ್ನ ಅಕ್ಕ-ತಂಗಿಯರ ಕೂದಲನ್ನು ನಾನೇ ಕತ್ತರಿಸಿದ್ದೆ. ಅದನ್ನು ನಾದಿನಿಯೂ ನೋಡಿದ್ದರು. ಹಾಗಾಗಿ, ಇವಳು ಕತ್ತರಿಸಬಲ್ಲಳು ಅಂತ ಅವರಿಗೆ ನಂಬಿಕೆ. ಈಗಾಗಲೇ ಎಷ್ಟೋ ಬಾರಿ ಕೂದಲು ಕತ್ತರಿಸಿದ್ದೇನಲ್ಲ, ವಿ ಶೇಪ್‌ ಏನು ಮಹಾ? ಅಂತ ನನಗೂ ನನ್ನ ಮೇಲೆ ನಂಬಿಕೆ!

ಸ್ವಲ್ಪ ನಂಬಿಕೆ, ಸ್ವಲ್ಪ ಅಂಜಿಕೆ ಜೊತೆಗೆ, “ನಾನು ಹೇಳಿದ ಹಾಗೆಯೇ ಕತ್ತರಿಸಬೇಕು’ ಎಂಬ ಎಚ್ಚರಿಕೆಯನ್ನೂ ಹೇಳುತ್ತಾ, ನನ್ನ ಕೈಗೆ ತಲೆಯೊಪ್ಪಿಸಿದರು. ಆದರೆ, ಅವತ್ತು ನಮ್ಮಿಬ್ಬರ ಟೈಮೂ ಕೆಟ್ಟಿತ್ತಿರಬೇಕು. ಕೂದಲನ್ನು ಎಷ್ಟೇ ಸರಿಯಾಗಿ ಹಿಡಿದುಕೊಂಡಿದ್ದರೂ, ಒಂದಲ್ಲಾ ಒಂದು ಕಡೆ ಏರುಪೇರಾಗುತ್ತಿತ್ತು. ಎಷ್ಟೇ ಚೆನ್ನಾಗಿ ಕತ್ತರಿಸಲು ಪ್ರಯತ್ನಿಸಿದರೂ ಸರಿಯಾಗಿ ಬರಲೇ ಇಲ್ಲ. ಒಮ್ಮೆ ಒಂದು ಕಡೆ ಕತ್ತರಿಸಿದ್ದು ಹೆಚ್ಚಾದರೆ, ಮತ್ತೂಮ್ಮೆ ಮತ್ತೂಂದು ಕಡೆಯದ್ದು…ಬೆಕ್ಕುಗಳಿಗೆ ಸಮನಾಗಿ ಬೆಣ್ಣೆ ಹಂಚುವ ಮಂಗನಂತೆ, ಒಮ್ಮೆ ಆ ಕಡೆ ಕತ್ತರಿಸಿದ್ದು ಹೆಚ್ಚಾಯ್ತು ಅಂತ, ಒಮ್ಮೆ ಈ ಕಡೆ ಕಡಿಮೆಯಾಯ್ತು ಅಂತ ಚೂರು ಚೂರೇ ಕೂದಲು ಕತ್ತರಿಸುತ್ತಾ, ಶೇಪ್‌ ಕೊಡಲು ಹೆಣಗಾಡುತ್ತಿದ್ದೆ.

Advertisement

ಅಚಾತುರ್ಯ ನಡೆದದ್ದು ಆಗಲೇ! ಕೂದಲನ್ನು ಮಡಚಿ ಹಿಡಿದುಕೊಂಡಿದ್ದವಳು ಯಾವುದೋ ಯೋಚನೆಯಲ್ಲಿ ಸರಕ್ಕನೆ ಕತ್ತರಿ ಆಡಿಸಿಯೇ ಬಿಟ್ಟೆ. ಒಂದೇ ಕ್ಷಣದಲ್ಲಿ, ಅವರ ನೀಳ ಕೂದಲಿನಲ್ಲಿ ಮುಕ್ಕಾಲು ಭಾಗ ನೆಲದಲ್ಲಿತ್ತು. ತಲೆಯಲ್ಲಿ ಉಳಿದಿದ್ದು ಕೊತ್ತಂಬರಿ ಸೊಪ್ಪಿನಷ್ಟು ಕೂದಲು ಮಾತ್ರ! ಅದನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ.

ಅವರೋ ನನ್ನ ಕೈಯಲ್ಲಿ ಕೂದಲು ಕೊಟ್ಟು, ಇದ್ಯಾವುದರ ಪರಿವೆಯೇ ಇಲ್ಲದೆ ಸುಮ್ಮನೆ ಕುಳಿತಿದ್ದರು. ನನಗೆ ಹೃದಯವೇ ಬಾಯಿಗೆ ಬಂದಂತಾಯಿತು. ಯಾವುದೇ ರೀತಿಯಲ್ಲೂ ನನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹೇಗೋ ಧೈರ್ಯ ಮಾಡಿ ಅವರಿಗೆ ಇರೋ ವಿಷಯ ತಿಳಿಸಿದೆ. ತಕ್ಷಣ ತಿರುಗಿ ನೋಡಿದ ಅವರಿಗೆ, ಕೆಳಗೆ ಬಿದ್ದ ಕೇಶರಾಶಿ ಕಾಣಿಸಿತು. ಗಾಬರಿಯಲ್ಲಿ ಕೂದಲು ಮುಟ್ಟಿಕೊಂಡರು! ತಲೆಯಲ್ಲಿ ಏನೂ ಉಳಿದಿರಲಿಲ್ಲ. ಅಸಹಾಯಕತೆಯಿಂದ ಜೋರಾಗಿ ಅಳತೊಡಗಿದರು.

ನಾನು ಮಾಡಿದ ಈ ಅವಾಂತರದ ಕುರಿತು ಮನೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಚಿಕ್ಕವರನ್ನೂ ಸೇರಿ, ಎಲ್ಲರೂ ನನ್ನನ್ನು ಮನಸೋ ಇಚ್ಛೆ ಬೈದರು. ಕೊನೆಗೆ ನಮ್ಮ ಮನೆಯವರು, ನಾದಿನಿಯ ಯಜಮಾನರಿಗೆ ಸರಳವಾಗಿ ವಿಷಯ ತಿಳಿಸಿ, ಅವರು ಸಿಟ್ಟಿಗೇಳದಂತೆ ಒಪ್ಪಿಸಿದರು. ಅದೇ ನೆಪದಿಂದ ನಾದಿನಿ ತವರು ಮನೆಯಲ್ಲಿ ಎರಡು ತಿಂಗಳು ಉಳಿಯಬೇಕಾಯ್ತು. ಹೊರಗಡೆ ಎಲ್ಲಿಗಾದರೂ ಹೋಗಬೇಕಾದರೂ ತಲೆ ತುಂಬಾ ಸೆರಗು ಹೊದ್ದು ಹೋಗುತ್ತಿದ್ದರು. ಅವತ್ತು ನಾನು ಮಾಡಿದ ಕೆಲಸ, ಈಗಲೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ.

– ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next