Advertisement

ಗೋಕಾಕ್‌ನಲ್ಲಿ ನಾನೇ ಸ್ಪರ್ಧಿಸುತ್ತೇನೆ: ರಮೇಶ

11:28 PM Sep 22, 2019 | Team Udayavani |

ಬೆಳಗಾವಿ: “ರಾಜೀನಾಮೆ ಕೊಟ್ಟ ದಿನವೇ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಗೋಕಾಕ ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷದಿಂದ ಎಂದು ತೀರ್ಮಾನ ಮಾಡಿಲ್ಲ’ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಅಡಚಣೆ, ತಾಂತ್ರಿಕ ಸಮಸ್ಯೆ ಬಗ್ಗೆ ವಕೀಲರೊಂದಿಗೆ ಚರ್ಚೆ ಮಾಡುತ್ತೇವೆ.

Advertisement

ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪೀಕರ್‌ ಅವರ ಆದೇಶ ಓದಿ ಹೇಳಿದ್ದಾರೆ. ಸ್ಪೀಕರ್‌ ರಮೇಶಕುಮಾರ್‌ ಆದೇಶ ಸುಪ್ರೀಂ ಕೋರ್ಟ್‌ನಲ್ಲಿ ಒಂದು ತಾಸು ನಿಲ್ಲುವುದಿಲ್ಲ. ರಮೇಶಕುಮಾರ್‌ ಕಾನೂನು ಬಾಹಿರವಾಗಿ ಆದೇಶ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ಜಯ ಸಿಗುತ್ತದೆ’ ಎಂದರು.

ಸಹೋದರ ಲಖನ್‌ ಜಾರಕಿಹೊಳಿ ಶಾಸಕನಾದರೆ ಅತಿ ಹೆಚ್ಚು ಸಂತೋಷ ಪಡುವ ವ್ಯಕ್ತಿ ನಾನೇ. ಲಖನ್‌ಗೆ ಒಳ್ಳೆಯದಾಗಲಿ, ಸತೀಶ ಜಾರಕಿಹೊಳಿ ಮಾತು ಕೇಳಿ ಲಖನ್‌ ಹಾಳಾಗುವುದು ಬೇಡ. ಗೋಕಾಕ ಜನರು ಸತೀಶಗೆ ಬುದ್ಧಿ ಕಲಿಸುತ್ತಾರೆ. ಸತೀಶ ವಿರೋಧ ಮಾಡಿದಷ್ಟು ನನಗೆ ಒಳ್ಳೆಯದಾಗುತ್ತದೆ. ಅತೀ ಶೀಘ್ರವೇ ನನ್ನ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ. ಮತದಾರರು ಡೈವರ್ಟ್‌ ಆಗುವುದು ಬೇಡ ಎಂದರು.

ಅಂಬಿರಾವ್‌ ಪಾಟೀಲ 30 ವರ್ಷಗಳಿಂದ ಗೋಕಾಕನಲ್ಲಿದ್ದಾರೆ. ಯಾವುದೇ ಕೇಸ್‌ ಬಂದರೂ ಜನರನ್ನು ಕೋರ್ಟ್‌ಗೆ ಕಳುಹಿಸದೆ ಇಲ್ಲೇ ಮುಗಿಸಿ ರಾಜಿ ಮಾಡಿಸಿ ಕಳುಹಿಸುತ್ತಾರೆ. ಬಡ ಜನರಿಗೆ ಈ ಮೂಲಕ ಅನುಕೂಲ ಆಗುತ್ತದೆ. ಅಂಬಿರಾವ್‌ ಬಗ್ಗೆ ಸತೀಶ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾನೆ. ಅಂಬಿರಾವ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧದ ಅಪಪ್ರಚಾರ ಮಾತುಗಳಿಗೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದರು.

ನಮ್ಮ ತಂದೆಯ ಆದರ್ಶವೇ ನನ್ನನ್ನು ಈ ಸ್ಥಾನಕ್ಕೆ ನಿಲ್ಲಿಸಿದೆ. ನಮ್ಮ ತಂದೆ ಆಗರ್ಭ ಶ್ರೀಮಂತರಲ್ಲ. ಕೂಲಿ ಮಾಡಿ ಈ ಮಟ್ಟಿಗೆ ಬಂದಿದ್ದೇವೆ ಎಂದು ತಂದೆ-ತಾಯಿ ನೆನೆದು ಭಾವುಕರಾದ ರಮೇಶ ಜಾರಕಿಹೊಳಿ, ತಂದೆ ಲಕ್ಷ್ಮಣ ಜಾರಕಿಹೊಳಿ ದೊಡ್ಡ ಪ್ರಮಾಣದಲ್ಲಿ ಹೋರಾಡಿ ಸಾಮ್ರಾಜ್ಯ ಕಟ್ಟಿದ್ದಾರೆ. ಸತೀಶ ಆ ಸಾಮ್ರಾಜ್ಯ ಕಟ್ಟಿಲ್ಲ ಎಂದರು.

Advertisement

ಕಳಕೊಂಡ ವಸ್ತು ಸತೀಶ್‌ ಬಹಿರಂಗಪಡಿಸಲಿ: “ವಸ್ತು ಕಳೆದುಕೊಂಡ’ ಕುರಿತು ಸಮಾವೇಶದಲ್ಲಿ ಬಹಿರಂಗ ಪಡಿಸುವ ಕುರಿತು ಸತೀಶ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, ಸತೀಶ ಎಲ್ಲಿ ಕಾರ್ಯಕ್ರಮ ಮಾಡುತ್ತಾರೆ ಅದೇ ವೇದಿಕೆ ಮೇಲೆ ನಾನೂ ಹೋಗಿ ಕೇಳುತ್ತೇನೆ. ಯಾವ ವಸ್ತು ಅಂತ ನನಗೆ ಗೊತ್ತಿಲ್ಲ. ಅವನೇ ಅದನ್ನು ಹೇಳಬೇಕು. ಸತೀಶ ಜಾರಕಿಹೊಳಿಯೇ ಆ ವಸ್ತು ಹುಡುಕಿಕೊಡಲಿ. ಸತೀಶನ ಹಗರಣ ಏನಿದೆ ಎಂಬುದು ನನಗೆ ಗೊತ್ತು. ನಮ್ಮ ಮನೆತನದ ಗೌರವ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡಿದ್ದೇನೆ ಎಂದರು.

ನಾನು ನಾಮಪತ್ರ ಸಲ್ಲಿಸಿದರೆ ಎಲ್ಲಿ ಕುಳಿತರೂ ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಜನ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ಜನರು ಕೈಬಿಟ್ಟ ದಿನವೇ ನಾನು ಜೀರೋ, ಜನ ಇರುವವರೆಗೂ ಯಾರೂ ಏನೂ ಮಾಡಲು ಆಗುವುದಿಲ್ಲ. ಸತೀಶನ ಹಗರಣ ಏನಿದೆ ಎಂಬುದು ನನಗೆ ಗೊತ್ತು. ನಮ್ಮ ಮನೆತನದ ಗೌರವ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡಿದ್ದೇನೆ.
-ರಮೇಶ ಜಾರಕಿಹೊಳಿ, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next