ಬೀಜಿಂಗ್: ಕಣ್ಮರೆಯಾಗಿ ಎಲ್ಲಡೆ ಸುದ್ದಿಯಾದಿದ್ದ ಚೀನದ ಟೆನ್ನಿಸ್ ಆಟಗಾರ್ತಿ ಪೆಂಗ್ ಶುಯಿ ಮಂಗಳವಾರ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಜತೆಗೆ ವಿಡಿಯೊ ಕಾಲ್ ನಡೆಸಿದ್ದು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ನ.2ರಂದು ಶುಯಿ, ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ನಾಯಕ ಝಾಂಗ್ ಗವೊಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದು ಆರೋಪಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಪೆಂಗ್ ಶುಯಿ ಅವರು ಕಣ್ಮರೆಯಾಗಿದ್ದರು. ಅವರನ್ನು ಚೀನ ಸರಕಾರ ಅಪಹರಣ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.
ಜತೆಗೆ ವಿಶ್ವ ಟೆನ್ನಿಸ್ ಒಕ್ಕೂಟ ಚೀನದಲ್ಲಿ ನಡೆಯಲಿದ್ದ ಎಲ್ಲ ಟೆನ್ನಿಸ್ ಪಂದ್ಯಾವಳಿಗಳನ್ನು ರದ್ದುಪಡಿಸುವುದಾಗಿ ಬೆದರಿಕೆಯೊಡ್ಡಿತ್ತು. ಈ ಬೆನ್ನಲ್ಲೆ ಚೀನ ಸರಕಾರಿ ಸ್ವಾಮ್ಯದ ಮಾಧ್ಯಮವೊಂದು ಕಳೆದ ಎರಡು ದಿನಗಳ ಹಿಂದೆ ಫಿಲಾ ಕಿಡ್ಸ್ ಜೂನಿಯರ್ ಟೆನಿಸ್ ಚಾಲೆಂಜರ್ ಫೈನಲ್ಸ್‌ನಲ್ಲಿ ಪೆಂಗ್ ಶುಯಿ ಹಾಜರಾಗಿರುವ ಫೋಟೊ ಮತ್ತು ವೀಡೀಯೊವೊಂದನ್ನು ಪ್ರಕಟಿಸಿತ್ತು.
ಇದನ್ನೂ ಓದಿ:ಎಂಎಸ್‌ಪಿಸಿ ಕೇಂದ್ರಕ್ಕೆ ಡಿಸಿ- ಸಿಇಒ ಭೇಟಿ, ಪರಿಶೀಲನೆ
ಆದರೆ ಶುಯಿ ಅವರು ಸಾರ್ವಜನಿಕವಾಗಿ ಬಂದು ಸ್ಪಷ್ಟನೆ ನೀಡುವವರೆಗೆ ಇದನ್ನು ನಂಬಲು ಸಾಧ್ಯವಿಲ್ಲ ಎಂದು ಟಿನಿಸ್ ಫೆಡರೇಶನ್ ಮತ್ತು ಒಲಿಂಪಿಕ್ಸ್ ಕಮಿಟಿ ಚೀನ ಸರಕಾರದ ವಿರುದ್ಧ ತಾಕಿತು ಮಾಡಿತ್ತು. ಇದೀಗ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವಂತೆ ಕಂಡುಬಂದಿರುವ ಚೀನ ಸರಕಾರ ಪೆಂಗ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಜತೆಗೆ ವೀಡೀಯೊ ಕಾಲ್ ಏರ್ಪಾಟು ಮಾಡಿದೆ.
ಅದರಂತೆ ವಿಡಿಯೋದಲ್ಲಿ ಪೆಂಗ್ ಅವರು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಜತೆ ಮಾತುಕತೆ ನಡೆಸಿದ್ದು ತಾವು ಮನೆಯಲ್ಲಿಯೇ ಸುರಕ್ಷಿತವಾಗಿ ಇರುವುದಾಗಿ ಹೇಳಿದ್ದಾರೆ ಜತೆಗೆ ತಮ್ಮ ಖಾಸಗಿತನ ಗೌರವಿಸುವಂತೆ ಮನವಿ ಮಾಡಿದ್ದಾರೆ.