Advertisement

ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ

09:44 PM Sep 23, 2019 | Lakshmi GovindaRaju |

ಚಾಮರಾಜನಗರ: ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಲೋಕಸಭೆಗೇ ಸ್ಪರ್ಧಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆರ್‌. ಧ್ರುವನಾರಾಯಣ ಹೇಳಿದರು. ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

Advertisement

ಬೇರೆಯವರಿಗೆ ಅಡಚಣೆ ಮಾಡಲ್ಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಮಾಜಿ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದಾರೆ. ಬೇರೆ ಯಾವುದೇ ಕ್ಷೇತ್ರದಲ್ಲೂ ಅಭ್ಯರ್ಥಿಯಾಗಬಲ್ಲ ಮೂವರು ಮಾಜಿ ಶಾಸಕರಿಲ್ಲ. ಹೀಗಿರುವಾಗ ನಾನು ಅಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದರು. ನಂಜನಗೂಡು ಕ್ಷೇತ್ರದಲ್ಲಿ ಅವಕಾಶ ಇದೆಯಲ್ಲವೇ? ಎಂದು ಪ್ರಶ್ನಿಸಿದಾಗ ಅಲ್ಲಿಯೂ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಬೇರೆಯವರಿಗೆ ಅಡಚಣೆಯಾಗಬಾರದೆಂಬ ಉದ್ದೇಶದಿಂದ ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಯೋಚಿಸಿಲ್ಲ ಎಂದು ಅವರು ಹೇಳಿದರು.

ತಕ್ಕ ಪಾಠ ಕಲಿಸಲಿರುವ ಮತದಾರರು: ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ರಾಜ್ಯದ 15 ಕ್ಷೇತ್ರದಲ್ಲೂ ಕಾಂಗ್ರೆಸ್‌ ಜಯಗಳಿಸುವ ವಿಶ್ವಾಸವಿದೆ. ಈ ಉಪಚುನಾವಣೆ ಗೆಲ್ಲಲು ಬಿಜೆಪಿ ಎಲ್ಲ ರೀತಿಯ ತಂತ್ರಗಳನ್ನೂ ನಡೆಸಲಿದೆ. ಅತೃಪ್ತ ಶಾಸಕರಿಗೆ ಮತರಾರ ತಕ್ಕ ಪಾಠ ಕಲಿಸಲಿದ್ದಾರೆ. ಇವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಅವರ ಪರ ಯಾರೇ ನಿಂತರೂ ಮತದಾರರು ಅವರನ್ನು ಸೋಲಿಸಲಿದ್ದಾರೆ ಎಂದು ಟೀಕಿಸಿದರು.

ಕೇವಲ ಅಧಿಕಾರಕ್ಕೆ ಮಾತ್ರ: ಬಿಜೆಪಿ ಸರ್ಕಾರ ರಚನೆಯಾಗಿರುವುದು ಕೇವಲ ಅಧಿಕಾರಕ್ಕೆ ಮಾತ್ರ. ಯಾವುದೇ ಅರ್ಹತೆ ಇಲ್ಲದಿದ್ದರೂ ಶಾಸಕರನ್ನು ನೋಡಿಕೊಂಡರೆಂಬ ಕಾರಣಕ್ಕೆ ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ. ಮುಖ್ಯಮಂತ್ರಿಯಾಗಲು ಅವಕಾಶ ಸಿಗದ ಹಿರಿಯರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ. ಆದರೆ ಇಲ್ಲಿ ಅತೃಪ್ತ ಶಾಸಕರನ್ನು ಹೋಟೆಲ್‌ನಲ್ಲಿ ನೋಡಿಕೊಂಡವರಿಗೆ ಸ್ಥಾನ ನೀಡಲಾಗಿದೆ ಎಂದು ಧ್ರುವ ವ್ಯಂಗ್ಯವಾಡಿದರು.

ಸಿಎಂಗೆ ಸ್ವಾತಂತ್ರ್ಯವೇ ಇಲ್ಲ: ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ವರಿಷ್ಠರಿಗೆ ಇಷ್ಟವಿಲ್ಲ. ಆದರೆ ಪ್ರಮುಖ ಸಮಾಜದ ಓಟಿಗಾಗಿ ಬಿಎಸ್‌ವೈ ಅವರನ್ನು ಸಿಎಂ ಮಾಡಲಾಗಿದೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ನೀಡುವುದಿಲ್ಲ. ಆದರೆ ಇಲ್ಲಿ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಯಡಿಯೂರಪ್ಪ ಪಕ್ಷ ಬಿಡಬಹುದು, ಇದರಿಂದ ಬಿಜೆಪಿಗೆ ಮತಗಳು ಬರುವುದಿಲ್ಲವೆಂಬ ಉದ್ದೇಶದಿಂದ ಅವರಿಗೆ ಸಿಎಂ ಸ್ಥಾನ ನೀಡಲಾಗಿದೆ. ಆದರೆ ಅವರಿಗೆ ಯಾವ ಸ್ವಾತಂತ್ರ್ಯವನ್ನೂ ನೀಡಿಲ್ಲ. ರಾಜ್ಯದ ಬರ ಪರಿಹಾರಕ್ಕೆ ಅನುದಾನ ನೀಡಬೇಕೆಂದು ಮನವಿ ಮಾಡಿದರೂ ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದು ಟೀಕಿಸಿದರು.

Advertisement

ರಾಜ್ಯಾದ್ಯಂತ ಪ್ರವಾಸ: ನಾನು ಪರಾಜಿತನಾದ ಬಳಿಕ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೆ, ರಾಜ್ಯದಲ್ಲಿ ಹಿಂದೆಂದೂ ಕಾಣದ ಸೋಲು ಕಾಂಗ್ರೆಸ್‌ಗೆ ದೊರಕಿತು. ಇದಕ್ಕೆ ಕಾಣವೇನು ಎಂಬ ಬಗ್ಗೆ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ಸಮಿತಿಯಲ್ಲಿದ್ದುಕೊಂಡು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದೆವು. ಈಗ ವಕ್ತಾರನನ್ನಾಗಿ ನೇಮಿಸಲಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಲಿ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಸೋತರೂ ಕೆಲಸ ಮಾಡುವೆ: ಸೋತಿದ್ದರೂ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಕಾನೂನು ಕಾಲೇಜು ಮಂಜೂರಾಗಿದ್ದು, ಅದರ ಮುಂದುವರೆದ ಕಾರ್ಯಸೂಚಿ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಿದ್ದೇನೆ. ಸಂಬಂಧಿಸಿದ ಕಚೇರಿಗಳಿಗೆ ತೆರಳಿ ಕಾಲೇಜು ಕಾರ್ಯಾರಂಭ ಮಾಡಲು ಆಗಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇನೆ. ಕೃಷಿ ಕಾಲೇಜು ನಡೆಸಲು ಸೂಕ್ತ ಕಟ್ಟಡವಿರಲಿಲ್ಲ. ಮುಕ್ತ ವಿಶ್ವ ವಿದ್ಯಾಲಯದ ಕಟ್ಟಡದ ಮೊದಲ ಅಂತಸ್ತು ಖಾಲಿಯಿತ್ತು. ಈ ಬಗ್ಗೆ ಚರ್ಚಿಸಿ, ಅಲ್ಲಿ ಕೃಷಿ ಕಾಲೇಜು ತರಗತಿಗಳನ್ನು ನಡೆಸಲು ಶ್ರಮವಹಿಸಿದ್ದೇನೆ ಎಂದು ಮಾಜಿ ಸಂಸದರು ತಿಳಿಸಿದರು.

ಬಿಎಸ್‌ಪಿ ಅಭ್ಯರ್ಥಿಯಿಂದ ಸೋಲು: ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸೋಲಲು ಅತಿಯಾದ ಆತ್ಮವಿಶ್ವಾಸ, ಬಿಎಸ್‌ಪಿ ಅಭ್ಯರ್ಥಿ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದು, ಕೊಳ್ಳೇಗಾಲ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ಮತಗಳನ್ನು ಗಳಿಸಿದ್ದು ಪ್ರಮುಖ ಕಾರಣ ಎಂದರು. ಕಾಂಗ್ರೆಸ್‌ ಮುಖಂಡರಾದ ಕೋಡಿಮೋಳೆ ರಾಜಶೇಖರ್‌, ಉಡಿಗಾಲ ಕುಮಾರಸ್ವಾಮಿ, ಹೊಸೂರು ಬಸವರಾಜು ಮತ್ತಿತರ ಮುಖಂಡರು ಪಕ್ಷ ತೊರೆದದ್ದೂ ಕಾರಣವೇ. ಏಕೆಂದರೆ 900 ಮತಗಳಿಂದ ಸೋತೆ. ಅವರು ಪಕ್ಷದಲ್ಲಿದ್ದರೆ ಅಷ್ಟು ಮತಗಳು ಬರುತ್ತಿದ್ದವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್‌, ಪ್ರ.ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಉಪಸ್ಥಿತರಿದ್ದರು.

ಸರಿಯಾಗಿ ಪ್ರತಿಭಟಿಸದ ಕಾಂಗ್ರೆಸ್‌
ಚಾಮರಾಜನಗರ: ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿರುವ ಲೋಪಗಳ ಬಗ್ಗೆ ಕಾಂಗ್ರೆಸ್‌ ಪಕ್ಷ ಸರಿಯಾದ ರೀತಿಯಲ್ಲಿ ಪ್ರತಿಭಟಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಂಸದ ಧ್ರುವನಾರಾಯಣ ಹೇಳಿದರು. ಬಿಜೆಪಿಯವರು ರಚನಾತ್ಮಕ ಅಭಿವೃದ್ಧಿ ಕೆಲಸಗಳನ್ನು ಮಾಡದೇ, ಕೇವಲ ಜಾತಿ, ಧರ್ಮ, ಸೈನ್ಯ, 370ನೇ ಕಲಂ ಇತ್ಯಾದಿ ಭಾವನಾತ್ಮಕ ವಿಷಯಗಳಿಂದ ಮತಗಳನ್ನು ಸೆಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಮಾಡಿರುವ ಅನೇಕ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಕೊಳ್ಳಲಿಲ್ಲ ಎಂದರು. ಪೆಟ್ರೋಲ್‌ ದರ ಏರಿಕೆ, ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ ಇಂಥ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಪ್ರತಿಭ ಟಿಸುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next