ಹಾವೇರಿ/ರಾಣಿಬೆನ್ನೂರು: ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾನೆಂದು ಭಾವಿಸಲಾಗಿದ್ದ ವ್ಯಕ್ತಿ ಎಂಟು ತಿಂಗಳ ಬಳಿಕ ದಿಢೀರನೇ ಪ್ರತ್ಯಕ್ಷನಾಗಿ “ತಾನು ಸತ್ತಿಲ್ಲ’ ಎಂದು ಅಧಿಕಾರಿಗಳ ಎದುರು ಹೇಳಿದ್ದಾನೆ!
ಆಶ್ಚರ್ಯವಾದ್ರೂ ದಿಟ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಣಿಬೆನ್ನೂರು ಬಸ್ ಘಟಕದಲ್ಲಿ ಜನವರಿ 1ರಂದು ರಾತ್ರಿ ಬಸ್‌ಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿತ್ತು. ಕರಕಲಾದ ಬಸ್ಸಿನೊಳಗೆ ಭಸ್ಮವಾದ ಒಂದು ದೇಹವೂ ಪತ್ತೆಯಾಗಿತ್ತು. ಈ ದೇಹ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಲಿಂಗರಾಜ ಪಾಲಾಕ್ಷ ಬೆಳಗುತ್ತಿ (32) ಅವರದ್ದೆಂದು ಅಂದಾಜಿಸಲಾಗಿತ್ತು. ಘಟಕದಲ್ಲಿ ಡೀಸೆಲ್ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳು ತಮ್ಮ ಪತಿಯನ್ನು ಬಸ್ಸಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ತನಿಖೆ ಮಾಡುವಂತೆ ಲಿಂಗರಾಜ ಅವರ ಪತ್ನಿ ನೇತ್ರಾವತಿ ಹಾಗೂ ತಾಯಿ ನೀಲಮ್ಮ ಬೆಳಗುತ್ತಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸ್ ತನಿಖೆ ಕೂಡ ಮುಂದುವರಿದಿತ್ತು.
ನಾನೇ ಸರ್ ಅವನು: ಈ ಮಧ್ಯೆ ಭಾನುವಾರ ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರತ್ಯಕ್ಷನಾದ ಲಿಂಗರಾಜ ಬೆಳಗುತ್ತಿ, “ಸರ್, ನಾನೇ ರಾಣಿಬೆನ್ನೂರು ಘಟಕದ ಭದ್ರತಾ ಸಿಬ್ಬಂದಿ ಲಿಂಗರಾಜ. ನಾನು ಸತ್ತಿಲ್ಲ’ ಎಂದು ಹೇಳಿದ್ದಾನೆ. ಅಧಿಕಾರಿಗಳು ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ದಾಖಲೆಗಳ ಪ್ರಕಾರ ವ್ಯಕ್ತಿ ಸತ್ತು ಎಂಟು ತಿಂಗಳಾಗಿವೆ. ಮೃತನ ಅಂತ್ಯ ಸಂಸ್ಕಾರವೂ ನಡೆದು ಹೋಗಿದೆ. ಈ ವ್ಯಕ್ತಿಯ ಸಂಬಂಧಿಕರಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಲಾಗಿದೆ.
ಮನೆ ಮಂದಿ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದೂ ಆಗಿದೆ. ಈಗ ದಿಢೀರನೇ ಪ್ರತ್ಯಕ್ಷನಾದ ಲಿಂಗರಾಜ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದ್ದಾನೆ. ಲಿಂಗರಾಜ ಬೆಳಗುತ್ತಿ ಇಷ್ಟು ದಿನ ಎಲ್ಲಿದ್ದ? ಯಾರಾದರೂ ಅಪಹರಣ ಮಾಡಿದ್ದರೆ? ಬಸ್ ಘಟಕದಲ್ಲಿ ಅಗ್ನಿ ದುರಂತ ಹೇಗೆ ಸಂಭವಿಸಿತು? ಬಸ್‌ನಲ್ಲಿದ್ದ ಕರಕಲಾಗಿದ್ದ ಶವ ಯಾರದ್ದು? ಇಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.
ಘಟನಾ ಸ್ಥಳದಲ್ಲಿ ಸಿಕ್ಕ ದೇಹದ ಡಿಎನ್‌ಎ ಪರೀಕ್ಷೆ ವರದಿ ಎರಡೂರು ದಿನಗಳ ಹಿಂದಷ್ಟೇ ಬಂದಿದ್ದು, ಅದು ಲಿಂಗರಾಜನಿಗೆ ಹೊಂದಾಣಿಕೆಯಾಗಿಲ್ಲ ಎಂಬುದು ಪೊಲೀಸ್ ಇಲಾಖೆಗೆ ತಿಳಿದಿತ್ತು. ತನಿಖೆ ಮುಂದುವರಿಯುತ್ತಿದ್ದಂತೆ ಲಿಂಗರಾಜ ಸ್ವತಃ ನಮ್ಮ ಎದುರು ಬಂದಿದ್ದಾನೆ. ಪ್ರಾಥಮಿಕ ವಿಚಾರಣೆಯಿಂದ ಬಂದಿರುವ ವ್ಯಕ್ತಿ ಲಿಂಗರಾಜ ಬೆಳಗುತ್ತಿಯೇ ಆಗಿದ್ದಾನೆ ಎಂಬುದು ಖಚಿತಪಟ್ಟಿದೆ. ಈವರೆಗೆ ಆತ ಎಲ್ಲಿದ್ದ? ಏಕಿದ್ದ? ಮುಂತಾದ ವಿಚಾರಗಳು ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ಗೊತ್ತಾಗಲಿವೆ.
ಕೆ. ಪರಶುರಾಮ, ಎಸ್ಪಿ, ಹಾವೇರಿ