Advertisement

ನಾನು ಸರಕಾರ ನಡೆಸುವುದು ಪಕ್ಷವನ್ನಲ್ಲ, ದೇಶ ಗೆಲ್ಲಿಸಲು

12:11 AM Oct 03, 2021 | Team Udayavani |

ಮುಂದಿನ ಅಕ್ಟೋಬರ್‌ 7ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣ ರಾಜಕೀಯ ಪ್ರವೇಶಿಸಿ ಸರಿಯಾಗಿ 20 ವರ್ಷಗಳು ಪೂರ್ಣಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ “ಓಪನ್‌ ಮ್ಯಾಗಜಿನ್‌’ಗೆ ಸಂದರ್ಶನ ನೀಡಿರುವ ಮೋದಿ, ಗಾಂಧಿನಗರದಿಂದ ದಿಲ್ಲಿಗೆ, ಚಾಯ್‌ವಾಲಾ ನಿಂದ ಪ್ರಧಾನಿ ಹುದ್ದೆವರೆಗಿನ ತಮ್ಮ ಬದುಕಿನ ಪಯಣ, ರಾಜಕೀಯ ಪ್ರವೇಶ, ಆಡಳಿತದ ಅನುಭವ, ಟೀಕೆ-ಟಿಪ್ಪಣಿಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ರಾಜಕೀಯಕ್ಕೆ ಆಕಸ್ಮಿಕ ಪ್ರವೇಶ
ಒಂದು ರೀತಿಯಲ್ಲಿ ರಾಜಕೀಯಕ್ಕೆ ನಾನು ಪ್ರವೇಶಿಸಿದ್ದು ಆಕಸ್ಮಿಕ ವಾಗಿಯೇ. ನನಗೂ ರಾಜಕೀಯಕ್ಕೂ ಸಂಬಂಧವೇ ಇರಲಿಲ್ಲ. ನನ್ನ ಸುತ್ತಮುತ್ತಲಿನ ವಾತಾವರಣ, ನನ್ನೊಳಗಿನ ಜಗತ್ತು, ನನ್ನ ತಣ್ತೀ- ಸಿದ್ಧಾಂತವೇ ಭಿನ್ನವಾಗಿತ್ತು. ಬಾಲ್ಯದಿಂದಲೇ ನನ್ನ ಆಸಕ್ತಿ ಇದ್ದಿದ್ದು ಅಧ್ಯಾ ತ್ಮದ ಕಡೆಗೆ. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ “ಜನ ಸೇವೆಯೇ ಪ್ರಭು ಸೇವೆ’ ಎಂಬ ಸಿದ್ಧಾಂತವು ನನಗೆ ಸ್ಫೂರ್ತಿ ಯಾಗಿತ್ತು. ಕೆಲವೊಂದು ಸನ್ನಿವೇಶಗಳು ಹಾಗೂ ಸ್ನೇಹಿತರ ಒತ್ತಾಯದ ಮೇರೆಗೆ ನಾನು ರಾಜಕೀಯ ಪ್ರವೇಶಿಸಬೇಕಾಯಿತು. 20 ವರ್ಷಗಳ ಹಿಂದೆ, ಪರಿಸ್ಥಿತಿಗೆ ಕಟ್ಟುಬಿದ್ದು ಸಂಪೂರ್ಣವಾಗಿ ಭಿನ್ನವಾದ ರಾಜ ಕೀಯ ಪ್ರಪಂಚಕ್ಕೆ ಕಾಲಿಟ್ಟೆ. ಅದು 2001. ಗುಜರಾತ್‌ ಹಿಂದೆಂದೂ ಕಂಡರಿಯದ ಭೀಕರ ಭೂಕಂಪಕ್ಕೆ ಸಿಲುಕಿತ್ತು. ಸಂಕಷ್ಟದಲ್ಲಿದ್ದ ನನ್ನ ಜನರ ನೋವನ್ನು ಕಂಡಾಗ, ನನ್ನ ಬದುಕಿನ ಈ ತಿರುವು ನನ್ನನ್ನು ಎಲ್ಲಿಗೆ ಕೊಂಡೊಯ್ಯಲಿದೆ ಎಂಬ ಯೋಚನೆಗೂ ಅವಕಾಶ ಕೊಡದೇ ಬಂದಿದ್ದೆಲ್ಲವನ್ನೂ ಸ್ವೀಕರಿಸಿಬಿಟ್ಟೆ. ಕೂಡಲೇ ಗುಜರಾತ್‌ನ ಪರಿಹಾರ, ಪುನರ್ವಸತಿ, ಪುನರ್‌ನಿರ್ಮಾಣದ ಕಾರ್ಯಕ್ಕೆ ಅಣಿಯಾದೆ.

ಗುಜರಾತ್‌ ಮುಖ್ಯಮಂತ್ರಿಯಾಗಿ
20 ವರ್ಷಗಳ ಹಿಂದೆ, ನಾನು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದಾಗ ಆಡಳಿತ ನಡೆಸುವುದು ಹೇಗೆಂದೇ ಗೊತ್ತಿರ ಲಿಲ್ಲ. ಮೊದಲು ನಾನು ಕಛ… ಭೂಕಂಪದಿಂದ ಹಾನಿ ಗೀಡಾದ ಪ್ರದೇಶಗಳಿಗೆ ಭೇಟಿ ಕೊಟ್ಟೆ. ದೀಪಾ ವಳಿಯ ದಿನವೂ ನಾನು ಭೂಕಂಪ ಸಂತ್ರಸ್ತರೊಂ ದಿಗೆ ಕಳೆದೆ, ಅವರ ನೋವುಗಳನ್ನು ಆಲಿಸಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾನು ಆಯೋಜಿಸಿದ ಮೊದಲ ಕಾರ್ಯಕ್ರಮವೇ “ಗರೀಬ್‌ ಕಲ್ಯಾಣ್‌ ಮೇಳ’. ಇವೆಲ್ಲವನ್ನೂ ಯಾರಾದರೂ ಅರ್ಥಮಾಡಿಕೊಂಡಿ ದ್ದರೆ, ನಾನು ಈಗ ಮಾಡುತ್ತಿರುವಂಥ ಬಡವರ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಉಚಿತ ಪಡಿತರ ವಿತರಣೆಯಂಥ ಕೆಲಸಗಳು ಅವರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು.

ಕೃಷಿ ಕಾಯ್ದೆ ವಿರೋಧಿಗಳ ಬಗ್ಗೆ
ರೈತರ ಪರ ನಾವು ತಂದಿರುವ ಸುಧಾರಣ ಕ್ರಮಗಳನ್ನು ಯಾರು ವಿರೋಧಿಸುತ್ತಾರೋ ಅವರಲ್ಲಿ ನೀವು ನಿಜವಾದ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ದ ಅರ್ಥವನ್ನು ಕಾಣಬಹುದು. ಇದೇ ಜನರು, ತಮ್ಮ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನಮ್ಮ ಸರಕಾರವೇನು ಜಾರಿ ಮಾಡಿದೆಯೋ ಅದನ್ನೇ ಜಾರಿ ಮಾಡುವಂತೆ ಸಲಹೆ ನೀಡಿದವರು. ಇದೇ ಜನರು, ತಮ್ಮ ಚುನಾವಣ ಪ್ರಣಾಳಿಕೆಯಲ್ಲಿ ನಮ್ಮ (ಬಿಜೆಪಿ) ಸರಕಾರ ಜಾರಿ ಮಾಡಿರುವ ಸುಧಾ ರಣ ಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಘೋಷಿಸಿದವರು.
ಸಣ್ಣ ರೈತರ ಸಶಕ್ತೀಕರಣಕ್ಕೆ ಭಾರತ ಸರಕಾರ ಬದ್ಧವಾಗಿದೆ. ಕೃಷಿ ಕಾಯ್ದೆ ಗಳ ಕುರಿತು ಚರ್ಚೆಗೆ ಹಲವು ಸಭೆಗಳು ನಡೆದಿವೆ. ಆದರೆ ಯಾರು ಕೂಡ ಈವರೆಗೂ “ಕಾಯ್ದೆ ಯಲ್ಲಿ ಇಂಥದ್ದನ್ನು ಬದಲಾ ಯಿಸಿ’ ಎಂದು ನಿರ್ದಿಷ್ಟವಾಗಿ ಹೇಳಲು ಮುಂದೆ ಬಂದಿಲ್ಲ. ಇದೇ ರೀತಿಯ ದ್ರೋಹವನ್ನು ನೀವು ಆಧಾರ್‌, ಜಿಎಸ್ಟಿ, ಕೃಷಿ ಕಾನೂನುಗಳು ಹಾಗೂ ಭದ್ರತಾ ಪಡೆಗಳಿಗೆ ಶಸ್ತ್ರಗಳ ಪೂರೈಕೆಯಲ್ಲೂ ನೋಡಿರಬಹುದು. ಆಶ್ವಾಸನೆ ನೀಡುವುದು, ಅದಕ್ಕಾಗಿ ವಾದಿಸುವುದು, ಕೊನೆಗೆ ನಾವದನ್ನು ಜಾರಿ ಮಾಡುವಾಗ ನೈತಿಕತೆಯಿಲ್ಲದೇ ಅದನ್ನೇ ವಿರೋಧಿಸುವುದು. ಇಂಥವರು ರೈತರಿಗೇನು ಅನುಕೂಲ ಎನ್ನುವುದನ್ನು ನೋಡುವುದಿಲ್ಲ, ಬದಲಿಗೆ ತಮಗೆ ರಾಜಕೀಯವಾಗಿ ಹೇಗೆ ಲಾಭವಾಗುತ್ತದೆ ಎನ್ನುವುದನ್ನಷ್ಟೇ ನೋಡುತ್ತಾರೆ.

ಇದನ್ನೂ ಓದಿ:ಕಾಂಗ್ರೆಸ್‌ ಸೋಲಿಸಲು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು

Advertisement

ಕಾಂಗ್ರೆಸ್‌ನ ಟೀಕೆಗಳು
ಕಾಂಗ್ರೆಸ್‌ ಪಕ್ಷಕ್ಕೆ “ರಾಜಕೀಯ’ ಮತ್ತು “ಆರ್ಥಿಕ ಚಿಂತನೆ’ಗಳ ನಡುವೆ ವ್ಯತ್ಯಾಸವೇ ಗೊತ್ತಿಲ್ಲ. ನಮ್ಮ ದೇಶದ ರಾಜಕೀಯ ಹೇಗಿದೆಯೆಂದರೆ, ಈವರೆಗೆ ನಾವು ಕೇವಲ ಒಂದೇ ಮಾದರಿಯನ್ನು ನೋಡಿದ್ದೇವೆ. ಅದೇ ನೆಂದರೆ, ಆಡಳಿತ ನಡೆಸುವವರ ಏಕೈಕ ಗುರಿ ಮುಂದಿನ ಬಾರಿಯ ಸರಕಾರ ರಚನೆ ಮಾಡುವುದಾಗಿರುತ್ತದೆ. ಅಂದರೆ ನೀವು ಸರಕಾರ ನಡೆಸುವುದೇ ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಗೆಲ್ಲಿಸಲು ಎಂಬ ಸಂಪ್ರದಾಯ ಬೆಳೆದು ಬಂದಿತ್ತು. ಆದರೆ ನಾನು ಸರಕಾರ ನಡೆಸುವುದು ನನ್ನ ದೇಶವನ್ನು ಗೆಲ್ಲಿಸಲು. ಜನರಿಗೆ ಸಿಗಬೇಕಾದ ಸೌಲಭ್ಯಗಳು, ಅನುಕೂಲತೆಗಳು ಎಷ್ಟೋ ದಶಕಗಳ ಹಿಂದೆಯೇ ಅವರಿಗೆ ಸಿಗಬೇಕಿತ್ತು. ಆದರೆ ಇನ್ನೂ ಅವುಗಳು ದೊರೆತಿಲ್ಲ. ಈ ರೀತಿ ತಮಗೆ ದೊರಕಬೇಕಾದ ಸೌಲಭ್ಯಗಳಿಗಾಗಿ ದೀರ್ಘಾವಧಿವರೆಗೆ ಕಾಯುವಂತಹ ಪರಿಸ್ಥಿತಿ ಭಾರತಕ್ಕೆ ಬರಬಾರದು. ಜನರಿಗೆ ಏನು ಬೇಕೋ ಅದನ್ನು ನಾವು ಕೊಡಬೇಕು. ಇದಕ್ಕಾಗಿ ನಾವು ಕೆಲವೊಮ್ಮೆ ದೊಡ್ಡ ಮಟ್ಟದ ನಿರ್ಧಾರಗಳನ್ನು, ಅಗತ್ಯಬಿದ್ದಾಗ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಡವರ ಪರ, ಉದ್ದಿಮೆ ಪರ ನೀತಿ
ನಮ್ಮದು ಅಭಿವೃದ್ಧಿ ಹೊಂದಿರುವ ದೇಶವಲ್ಲ. ನಮ್ಮಲ್ಲಿ ಇನ್ನೂ ಬಡತನ ತಾಂಡವವಾಡುತ್ತಿದೆ. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಆತನ ಅಗತ್ಯ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶಗಳನ್ನು ಪಡೆಯಬೇಕು. ಬಡವರಿಗೆ ಒಂದು ರೀತಿಯ ಅವಕಾಶದ ಅಗತ್ಯವಿದ್ದರೆ, ಸಂಪತ್ತು ಸೃಷ್ಟಿಸುವವರಿಗೆ ಮತ್ತೂಂದು ರೀತಿಯ ಅವಕಾಶ ಬೇಕಾಗುತ್ತದೆ. ಯಾವಾಗ ಸರಕಾರವು “ಸರ್ವೇಜನಾ ಹಿತಾಯ, ಸರ್ವಜನ ಸುಖಾಯಾ’ ಎಂಬುದರ ಮೇಲೆ ನಂಬಿಕೆಯಿಡುತ್ತದೆಯೋ, ಆಗ ಅದರ ಗುರಿ ಏಕದಿಕ್ಕಿನ ದಾಗಿರುವ ಬದಲು ಬಹುದಿಕ್ಕಿನದಾಗಿರುತ್ತದೆ. ಬಡವರ ಪರ, ಉದ್ದಿಮೆ ಪರ ನೀತಿಯು ಪರಸ್ಪರ ನಂಟು ಹೊಂದಿರುವಂಥದ್ದು. ನನ್ನ ಪ್ರಕಾರ, ನೀತಿನಿರೂಪಣೆಯು ಜನಪರವಾಗಿದ್ದರೆ ಸಾಕು.

ಕೋವಿಡ್‌ ವಿರುದ್ಧದ ಹೋರಾಟ
ಕೋವಿಡ್‌ ಸೋಂಕು ಉತ್ತುಂಗದಲ್ಲಿದ್ದಾಗಲೂ ಭಾರತವು ಕೃಷಿ, ಕಾರ್ಮಿಕ, ವಿಮೆ, ಆರೋಗ್ಯ ಸೇವೆ ಸೇರಿದಂತೆ ಹಲವು ಸುಧಾರಣೆಗಳಿಗೆ ಸಾಕ್ಷಿಯಾಯಿತು. ನಮ್ಮ ದೇಶದಲ್ಲೇನಾದರೂ ಲಸಿಕೆ ಅಭಿವೃದ್ಧಿ ಯಾಗದೇ ಇರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿ ಕೊಳ್ಳಿ. ಇನ್ನೂ ಜಗತ್ತಿನ ಅನೇಕರಿಗೆ ಕೋವಿಡ್‌ ಲಸಿಕೆಯೇ ದೊರೆತಿಲ್ಲ. ಇಂದು ಲಸಿಕೆ ವಿತರಣೆಯಲ್ಲಿ ಭಾರತದ ಯಶಸ್ಸಿಗೆ ನಮ್ಮ ದೇಶವು ಆತ್ಮನಿರ್ಭರವಾದದ್ದೇ ಕಾರಣ. ತಂತ್ರಜ್ಞಾನವು ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯ ಬೆನ್ನೆಲುಬಾಗಿ ಕೆಲಸ ಮಾಡಿತು. ಭಾರತಕ್ಕೆ ಸರಿ ಸಾಟಿಯಿಲ್ಲದ ಏಕತೆಯ ಶಕ್ತಿಯಿದೆ, ಒಂದು ಗುರಿಗಾಗಿ ಒಗ್ಗೂಡುವ, ಅಗತ್ಯಬಿದ್ದಾಗ ಏನನ್ನು ಬೇಕಿದ್ದರೂ ಸಾಧಿಸುವ ಛಲವಿದೆ ಎನ್ನುವುದನ್ನು ಕೊರೊನಾ ಸೋಂಕು ಕಲಿಸಿಕೊಟ್ಟಿತು. ಒಂದು ಹಂತದಲ್ಲಿ ಪಿಪಿಇ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು, ಅನಂತರದಲ್ಲಿ ಜಗತ್ತಿನಲ್ಲೇ ಇಂಥ ಕಿಟ್‌ಗಳ ಅತೀದೊಡ್ಡ ತಯಾರಕ ಎಂಬ ಖ್ಯಾತಿ ಗಳಿಸಿದೆವು. ಅದೇ ರೀತಿ, ವೆಂಟಿಲೇಟರ್‌ಗಳನ್ನೂ ದೇಶೀಯವಾಗಿ ಭಾರೀ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಿದೆವು. ವೈರಸ್‌ ಕುರಿತ ಮಾಹಿತಿಯ ಕೊರತೆ, ಲಾಕ್‌ಡೌನ್‌ನಿಂದಾದ ಆರ್ಥಿಕ ಸಂಕಷ್ಟಗಳ ನಡುವೆಯೂ ಭಾರತ ಇದನ್ನು ಸಾಧಿಸಿತು. ದೊಡ್ಡ ಮಟ್ಟದ ಬದಲಾವಣೆಯನ್ನು ತರುವಲ್ಲಿ ಭಾರತದ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಅರಿಯಲು ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಆ್ಯತ್ಲೀಟ್‌ಗಳಿಗೆ ಬೆಂಬಲ
ಟೋಕಿಯೊ 2020ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆ್ಯತ್ಲೀಟ್‌ಗಳ ಸಾಧನೆ ನನಗೆ ಅತೀವ ಖುಷಿ ಕೊಟ್ಟಿತು. ಭಾರತದ ಈವರೆಗಿನ ಸಾಧನೆಗಿಂತ ಅತ್ಯುತ್ಕೃಷ್ಟ ಸಾಧನೆಯಿದು. ನಾನು ಅವರನ್ನು ಭೇಟಿ ಯಾದಾಗ, ಪದಕ ಗೆಲ್ಲದ ಅನೇಕ ಆ್ಯತ್ಲೀಟ್‌ಗಳು ಬಹಳ ಬೇಸರ ದಲ್ಲಿದ್ದರು. ಆದರೂ, ಅವರ ತರಬೇತಿ, ಸೌಕರ್ಯಗಳು, ಇತರ ಸಹಾಯಗಳು ಸೇರಿದಂತೆ ದೇಶವು ಕೊಟ್ಟ ಬೆಂಬಲದ ಬಗ್ಗೆ ಹೆಮ್ಮೆ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ಟಾಪ್ಸ್‌ ಕಾರ್ಯಕ್ರಮದ ಮೂಲಕ ಭಾರತ ಸರಕಾರವು ಆ ಎಲ್ಲ ಆ್ಯತ್ಲೀಟ್‌ಗಳಿಗೂ ಬೆಂಬಲ ನೀಡಿತ್ತು. ಹಿಂದೆಲ್ಲ ನಮ್ಮ ಕ್ರೀಡಾಳುಗಳು ಸೌಕರ್ಯಗಳ ಕೊರತೆ, ಬೆಂಬಲದ ಕೊರತೆಯಿಂದ ಚಿಂತೆಗೀಡಾಗುತ್ತಿದ್ದರು. ಆದರೆ ಈಗ ಅಂತಹ ಚಿಂತೆ ಅವರಿಗಿಲ್ಲ. ಹೀಗಾಗಿ ಅವರ ಗುರಿಯನ್ನು ಪದಕ ಹಾಗೂ ಸಾಧನೆ ಯತ್ತ ನೆಡಲು ಸಾಧ್ಯವಾಯಿತು. ಈ ಬದಲಾವಣೆಯು ನಮಗೆ ತೃಪ್ತಿ ತಂದಿದೆ. ಕ್ರೀಡೆ ಎನ್ನುವುದು ಕೇವಲ ನಿರ್ದಿಷ್ಟ ವರ್ಗದ ಜನರಿಗಾಗಿ ಮೀಸಲು ಎಂಬ ಭಾವನೆ ಹಲವರಲ್ಲಿದೆ. ಆದರೆ ಬಡ ಹಾಗೂ ಹಿಂದುಳಿದ ಪ್ರದೇಶಗಳಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ನಾವೇನಾದರೂ ಅವರನ್ನು ತಲುಪಿದರೆ, ದೇಶದಲ್ಲಿ ಕ್ರೀಡೆಯು ಉನ್ನತ ಮಟ್ಟಕ್ಕೇರಲಿದೆ. ಒಲಿಂಪಿಕ್ಸ್‌ನ ಫ‌ಲಿತಾಂಶವೇ ಇದನ್ನು ಸಾಬೀತುಪಡಿಸಿದೆ.

ಟೀಕಾಕಾರರ ಸಂಖ್ಯೆ ಕಡಿಮೆ! ನಾನು ಪ್ರಾಮಾಣಿಕ ಮನಸ್ಸಿನಿಂದ, ಟೀಕಾಕಾರ ರನ್ನು ಗೌರವಿಸುತ್ತೇನೆ. ಆದರೆ ದುರದೃಷ್ಟವಶಾತ್‌, ಟೀಕಾಕಾರರ ಸಂಖ್ಯೆ ಬಹಳ ಕಡಿಮೆಯಿದೆ. ಕೇವಲ ಆರೋಪಗಳನ್ನು ಮಾಡುವವರು, ಪೂರ್ವಗ್ರಹಿಕೆಯಲ್ಲೇ ಆಟವಾಡುವವರ ಸಂಖ್ಯೆ ಜಾಸ್ತಿಯಿದೆ. ಇದಕ್ಕೆ ಕಾರಣವೇನೆಂದರೆ ಟೀಕೆ ಮಾಡುವವನು ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಬೇಕಾಗುತ್ತದೆ. ಆದರೆ ಈಗಿನ ಧಾವಂತದ ಜಗತ್ತಿನಲ್ಲಿ ಅಷ್ಟೆಲ್ಲ ಮಾಡಲು ಯಾರಿಗೂ ಸಮಯವಿಲ್ಲ. ಹಾಗಾಗಿ ನಾನು ಟೀಕೆಗಳನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ಜನ ಮತ್ತೂಬ್ಬರನ್ನು ಪೂರ್ವಗ್ರಹ ಇಟ್ಟುಕೊಂಡೇ ಜಡ್ಜ್ ಮಾಡುತ್ತಾರೆ. ನೀವು ಅವರನ್ನು ಭೇಟಿಯಾಗಿ, ಅವರಲ್ಲಿರುವ ವಿಶೇಷ ಗುಣಗಳನ್ನು ಅರಿತುಕೊಂಡರೂ ಅದನ್ನು ಸ್ವೀಕರಿಸಲು ನಿಮ್ಮ ಅಹಂ ಬಿಡುವುದಿಲ್ಲ. ಇದು ಮಾನವನ ಸಹಜ ಗುಣ.

ನನ್ನಿಂದ ಸಾಧ್ಯವಿರುವುದು ಎಲ್ಲರಿಗೂ ಸಾಧ್ಯ
ನನ್ನ ಬದುಕಿನ ಪಥದ ಬಗ್ಗೆ ನನಗೇನೂ ಅಚ್ಚರಿಯಿಲ್ಲ. ಆದರೆ ನಮ್ಮ ದೇಶದ ಬಗ್ಗೆ, ಇಲ್ಲಿರುವ ಜನರ ಬಗ್ಗೆ ನನಗೆ ಅಚ್ಚರಿಯಾಗುತ್ತದೆ. ಏಕೆಂದರೆ, ಒಬ್ಬ ಬಡ ಮಗುವನ್ನು ಉನ್ನತ ಹುದ್ದೆಗೇರಿಸುವ ಶಕ್ತಿ ಅವರಲ್ಲಿದೆ. ಈ ದೇಶದ ಜನರು ನನ್ನ ಮೇಲೆ ನಂಬಿಕೆಯಿಟ್ಟು, ಇಷ್ಟು ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ಇದು ನಮ್ಮ ಪ್ರಜಾಸತ್ತೆಯ ಶಕ್ತಿ. ಚಹಾ ಮಾರುವ ಹುಡುಗ ಪ್ರಧಾನಮಂತ್ರಿಯ ಹುದ್ದೆಗೆ ಏರಿರುವುದನ್ನು ನಾನು ಭಿನ್ನವಾಗಿ ನೋಡುತ್ತೇನೆ. ನನ್ನಲ್ಲಿರುವ ಸಾಮರ್ಥ್ಯ ದೇಶದ 130 ಕೋಟಿ ಜನರಲ್ಲೂ ಇದೆ. ನಾನು ಸಾಧಿಸಿದ್ದನ್ನು ಅವರೂ ಸಾಧಿಸಬಲ್ಲರು. ನನ್ನಿಂದ ಸಾಧ್ಯ ಎಂದ ಮೇಲೆ ಅವರಿಗೂ ಸಾಧ್ಯವಿದೆ.

ಅಧಿಕಾರದ ಜಗತ್ತಿನಿಂದ ನಾನು ದೂರ
ನಾನು ಯಾವತ್ತೂ ಯಾವುದೇ ಸಾಧನೆ ಮಾಡಬೇಕೆಂದು, ಏನೋ ಆಗಬೇಕೆಂದು ಬಯಸಿದವನೇ ಅಲ್ಲ. ಇನ್ನೊಬ್ಬರಿಗೆ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂಬುದನ್ನಷ್ಟೇ ನಾನು ನೋಡುವುದು. ಜಗತ್ತಿನ ದೃಷ್ಟಿಯಲ್ಲಿ, ಮುಖ್ಯಮಂತ್ರಿಯಾಗುವುದು, ಪ್ರಧಾನಮಂತ್ರಿಯಾಗುವುದು ದೊಡ್ಡ ವಿಷಯ ಆಗಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ ಜನರಿಗಾಗಿ ಏನನ್ನಾದರೂ ಮಾಡುವುದೇ ದೊಡ್ಡ ವಿಚಾರ. ಮಾನಸಿಕವಾಗಿ ನಾನು ಈ “ಅಧಿಕಾರ, ಶೋಕಿ ಹಾಗೂ ಗ್ಲಾಮರ್‌ ಜಗತ್ತಿನಿಂದ’ ದೂರ ಉಳಿಯುತ್ತೇನೆ. ಇದರಿಂದಾಗಿಯೇ ನನಗೆ ಒಬ್ಬ ಶ್ರೀಸಾಮಾನ್ಯನಂತೆ ಯೋಚಿಸಲು ಸಾಧ್ಯವಾಗುತ್ತದೆ. ಜತೆಗೆ ನನಗೇನೋ ಜವಾಬ್ದಾರಿ ಕೊಡಲಾಗಿದೆ ಎಂದು ಯೋಚಿಸಿಕೊಂಡು ಆ ನಿಟ್ಟಿನಲ್ಲಿ ಕರ್ತವ್ಯ ಪೂರೈಸುವತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.

ನಿರ್ಧಾರ ಕೈಗೊಳ್ಳುವ ಮುನ್ನ
ನಾನು ಕೈಗೊಳ್ಳುವ ನಿರ್ಧಾರವು ಸಮಾಜದ ತೀರಾ ಬಡವನಿಗೆ ಅಥವಾ ತೀರಾ ದುರ್ಬಲನಿಗೆ ಹೇಗೆ ಅನು ಕೂಲವಾಗುತ್ತದೆ ಎಂಬುದನ್ನು ಯೋಚಿ ಸಿಯೇ ನಿರ್ಧಾರ ಕೈಗೊಳ್ಳುತ್ತೇನೆ. ಈ ಪ್ರಕ್ರಿಯೆ ವೇಳೆ ನನಗೆ ಲವಲೇಶದಷ್ಟು ಪಟ್ಟಭದ್ರ ಹಿತಾಸಕ್ತಿಯ ಸುಳಿವು ಸಿಕ್ಕರೂ ನಾನದನ್ನು ಅಲ್ಲಿಗೇ ಸ್ಥಗಿತಗೊಳಿ ಸುತ್ತೇನೆ. ಏಕೆಂದರೆ ನಿರ್ಧಾರವು ಯಾವತ್ತೂ ಶುದ್ಧ ಹಾಗೂ ದೃಢವಾಗಿರಬೇಕು. ಈ ಎಲ್ಲ ಪರೀಕ್ಷೆಗಳನ್ನು ದಾಟಿ ಹೋದ ಬಳಿಕವೇ ನಾನು ನಿರ್ಧಾರ ಕೈಗೊಳ್ಳುವತ್ತ ಮುಂದಡಿಯಿಡುತ್ತೇನೆ. ಭಾರತದಂಥ ದೊಡ್ಡ ದೇಶದಲ್ಲಿ ನಮ್ಮ ನಿರ್ಧಾರವನ್ನು ಶೇ.100ರಷ್ಟೂ ಜನರು ಒಪ್ಪಿಕೊಳ್ಳುತ್ತಾರೆಂದು ಹೇಳಲಾಗದು. ಕಡಿಮೆ ಸಂಖ್ಯೆಯ ಜನರಿಗೆ ನಮ್ಮ ನಿರ್ಧಾರ ಒಪ್ಪಿಗೆ ಯಾಗುವುದಿಲ್ಲ ಎಂದರೆ ಅದು ತಪ್ಪಲ್ಲ. ಅವರಿಗೆ ಅವ ರದ್ದೇ ಆದ ಯೋಚನೆಗಳಿರಬಹುದು. ಆದರೆ ನಮ್ಮ ನಿರ್ಧಾರವು ಬಹುಸಂಖ್ಯೆಯ ಜನರ ಹಿತಾಸಕ್ತಿಯನ್ನು ಹೊಂದಿದ್ದರೆ, ಅಂಥ ನಿರ್ಧಾರವನ್ನು ಜಾರಿ ಮಾಡು ವುದು ಸರಕಾರದ ಹೊಣೆಗಾರಿಕೆಯಾಗಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next