Advertisement

ಈಗಲ್ ಇನ್ಪ್ರಾಸ್ಟ್ರಕ್ಚರ್ ಇಂಡಿಯಾದಲ್ಲಿ ನಾನು ಪಾಲುದಾರನಲ್ಲ: ಮಾಜಿ ಶಾಸಕ ಸೈಲ್

07:37 PM Mar 10, 2023 | Team Udayavani |

ಕಾರವಾರ: ಈಗಲ್ ಇನ್ಪ್ರಾಸ್ಟ್ರಕ್ಚರ್ ಇಂಡಿಯಾದಲ್ಲಿ ನಾ ಪಾಲುದಾರನಲ್ಲ ,‌ನನ್ನ ಶೇರ್ ಆ ಕಂಪನಿಯಲ್ಲಿ ಇಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಸ್ಪಷ್ಟಪಡಿಸಿದರು‌.

Advertisement

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದ ಅವರು ಈಗಲ್ ಇನ್ಪ್ರಾಸ್ಟ್ರಕ್ಚರ್ ಇಂಡಿಯಾದಲ್ಲಿ ನನ್ನ ಶೇರ್ ಇದೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವೆ ಹಾಗೂ ಕಾರವಾರ ಬಿಟ್ಟು ಹೋಗುವೆ ಎಂದರು‌ . ನನ್ನ ಮೇಲೆ ಶಾಸಕಿ ರೂಪಾಲಿ ನಾಯ್ಕ ಸುಳ್ಳು ಅಪಾದನೆ ಮಾಡಿದ್ದು, ಅವರು ಶಾಸಕ ವೃತ್ತಿಗೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ರಾಜಕೀಯದಲ್ಲಿ ನನ್ನ ಜೊತೆ ಇದ್ದಾರೆ. ಅವರು ನಮ್ಮ ಪಕ್ಷದವರು. ಆದರೆ ಅವರು ವೃತ್ತಿಯಿಂದ ಇಂಜಿನಿಯರ್. ಈಗಲ್ ಇನ್ಪ್ರಾಸ್ಟ್ರಕ್ಚರ್ ಇಂಡಿಯಾದ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದನ್ನೇ‌ ಶಾಸಕಿ ತಪ್ಪಾಗಿ ಗ್ರಹಿಸಿ ನನ್ನ ಮೇಲೆ ಅಪಾದನೆ ಮಾಡುವುದು ಎಷ್ಟು ಸರಿ ಎಂದು ಮಾಜಿ‌ ಶಾಸಕ ಸೈಲ್ ಪ್ರಶ್ನಿಸಿದರು‌ .

ಶಾಸಕಿ ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದು ಟೀಕೆ ಮಾಡ್ತಾರೆ. ನನ್ನ ಲೀವರ್ ಡ್ಯಾಮೇಜ್ ಆಗಿದೆ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ. ಈ ಹೇಳಿಕೆ ತೀರಾ ನೋವು ತಂದಿದೆ. ಅಲ್ಲದೆ ನನ್ನಿಂದ‌ ಜೀವ ಬೆದರಿಕೆ ಇದೆ‌ ಎಂದು ದೂರು ಕೊಟ್ಟ ಬಗ್ಗೆ ಗೊತ್ತಾಗಿದೆ. ನಾವು ಬೆದರಿಕೆ ಹಾಕುವ ಸಂಸ್ಕೃತಿಯ ಮನುಷ್ಯನಲ್ಲ. ಶಾಸಕಿಯಾಗಿ ಆಯ್ಕೆಯಾದ ಎರಡನೇ ದಿನವೇ ಬೈತಖೋಲ್ ದಲ್ಲಿ ಅವರ ವಾಹನ ಸಾಗಲು ಅಡ್ಡಿಪಡಿಸಿದಾಗ, ನನಗೆ ಪೋನ್ ಮಾಡಿ ಸಹಾಯ ಕೋರಿದ್ದರು‌. ಅದನ್ನು ಶಾಸಕಿ‌ ನೆನಪಿಸಿಕೊಳ್ಳಲಿ. ನಾನು‌ ಆರ್ಯದುರ್ಗಾ ದೇವಿಯ ಎದುರು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಅವರೂ ಬರಲಿ ಎಂದರು‌.ನಾನು ಇನ್ನು ವಯಕ್ತಿಕ ಟೀಕೆಗೆ ಹೋಗುವುದಿಲ್ಲ. ಈ ವಿವಾದವನ್ನು ಇಷ್ಟಕ್ಕೆ ಮುಗಿಸುವೆ ಎಂದರು.

ಬಿಎಲ್ ಒ ಗಳಿಗೆ ಸೀರೆ ಹಂಚಿಕೆ
ಶಾಸಕಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಬಿಎಲ್ ಒ( ಅಂಗನವಾಡಿ ಕಾರ್ಯಕರ್ತೆಯರು) ಗಳಿಗೆ ಕಾರವಾರ ತಾಪಂ ಸಭಾಭವನದಲ್ಲಿ ಸೀರೆ ಹಂಚಿದ್ದಾರೆ. ಈ ಸಂಬಂಧ ಸಿಪಿಐಎಂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತಾ.ಪಂ.ಸಭಾ ಭವನದಲ್ಲಿ ಬಿಜೆಪಿ ಗ್ರಾಮೀಣ ಪದಾಧಿಕಾರಿ ಸಮ್ಮುಖದಲ್ಲಿ ಬಿಎಲ್ ಒ ಗಳಿಗೆ ಸೀರೆ ಹಂಚಿದ್ದು ಅಧಿಕಾರದ ದುರ್ಬಳಕೆ ಎಂದು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಅಪಾದಿಸಿದರು‌. ಈ ಬಗ್ಗೆ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗಬೇಕು ಎಂದರು‌ . ಕಾರವಾರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next