ಬಾಗಲಕೋಟೆ: ನಾನು ಕ್ಷೇತ್ರ ಹುಡುಕುವ ಅಲೆಮಾರಿ ಅಲ್ಲ. ಜನರ ಆಶೀರ್ವಾದ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಾಗೂ ಎರಡು ಬಾರಿ ವರುಣಾದಲ್ಲಿ ಸ್ಪರ್ಧಿಸಿದ್ದೇನೆ. ಕ್ಷೇತ್ರ ಪುನರ್ ವಿಂಗಡಣೆ ವೇಳೆ ನನ್ನ ಹುಟ್ಟೂರು ವರುಣಾ ಕ್ಷೇತ್ರಕ್ಕೆ ಹೋಯಿತು.
ಹೀಗಾಗಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ. ಬಳಿಕ ಕೊನೆ ಚುನಾವಣೆ ಎಂದು ಪುನಃ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದೆ. ಆದರೆ ಅಲ್ಲಿನ ಜನ ಸೋಲಿಸಿದರು. ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆದ್ದಿದ್ದೆ. ಒಂದೇ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದರೆ ಮಾತ್ರ ನಾಯಕರಾ? ನರೇಂದ್ರ ಮೋದಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನಾಯಕರು, ನಾನು ಎರಡು ಕ್ಷೇತ್ರದಲ್ಲಿ ನಿಂತರೆ ಪ್ರಭಾವ ಇಲ್ಲದ ನಾಯಕನಾ ಎಂದು ಪ್ರಶ್ನಿಸಿದರು.
ಎಸ್.ಆರ್.ಪಾಟೀಲ್ ಜತೆ ಸಿದ್ದು ಮತ್ತೆ ದೋಸ್ತಿ
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ತಪ್ಪಿದ್ದರಿಂದ ಕೊಂಚ ಬೇಸರಗೊಂಡಿದ್ದ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿರದ ಮಾಜಿ ಸಚಿವ ಎಸ್.ಆರ್. ಪಾಟೀಲ್ ಹಾಗೂ ಸಿದ್ದರಾಮಯ್ಯ ಬುಧವಾರ ಬಹು ಆತ್ಮೀಯತೆಯಿಂದ ಕಾಣಿಸಿಕೊಂಡರು. ಸ್ವತಃ ಪಾಟೀಲರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಇತರ ಹಿರಿಯ ನಾಯಕರ ಜತೆಗೂಡಿ ಚರ್ಚೆಯಲ್ಲಿ ತೊಡಗಿದ್ದರು. ಬಳಿಕ ಸುದ್ದಿಗಾರರೊಂದಿಗೂ ಒಟ್ಟಿಗೇ ಕಾಣಿಸಿಕೊಂಡ ಸಿದ್ದರಾಮಯ್ಯ ಮತ್ತು ಪಾಟೀಲ್, ಎರಡು ವರ್ಷಗಳಿಂದ ಇದ್ದ ಮುಸುಕಿನ ಗುದ್ದಾಟ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.