Advertisement

ನಿನಗೆ ನಾನು; ನನಗೆ ನೀನು 

07:30 AM Mar 16, 2018 | Team Udayavani |

ಈ ಭಾವ ಇನ್ನಿಲ್ಲದಷ್ಟು ಆಪ್ತವಾಗಿ ಸುತ್ತಿ ಸುಳಿಯುವುದು ಸಾಂಸಾರಿಕ ಜೀವನ ಮಾಗಿದ ಹಂತದಲ್ಲಿ.  ಇಂದಿಗೆ ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಂಸಾರ ಬೆಳೆಯುವುದು ಸಂತಾನದ ಮೂಲಕ. ಹಾಗೆ ಬೆಳೆದ ಮಕ್ಕಳು ವಿದ್ಯೆ, ಉದ್ಯೋಗವೆಂದು ಊರು, ಮನೆ ಬಿಟ್ಟು ನಗರದತ್ತ ಹಾರಿಹೋಗುವುದು ಮನೆ ಮನೆಗಳಲ್ಲಿ ಸಾಮಾನ್ಯ.  ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ  ಅಲಕ್ಷ್ಯ ಮಾಡಿದ್ದೇ ಆದರೆ ಅದರ ಪರಿಣಾಮ ಬದುಕಿನ ಪೂರ್ತಾ ಹಿಂಬಾಲಿಸುತ್ತದೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ದಿನಗಳೆಂದರೆ ಅದೆಷ್ಟು ಎಚ್ಚರವಹಿಸಿದರೂ ಕಡಿಮೆಯೇ. ಹಾಗೆ ಸಿಟಿಯ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಂಡ ಯುವಜನರಿಗೆ ಕೈಗೆಟುಕುವ ಸೌಲಭ್ಯಗಳಿಗೆ ಬದುಕು ಹೊಂದಿಕೊಂಡಾಗ ಅಲ್ಲೇ ತಮ್ಮ ನೆಲೆ ಕಂಡುಕೊಳ್ಳುತ್ತಾರೇ ವಿನಾ ಹಿಂದಿರುಗುವ ಮಾತು ಕಮ್ಮಿ. 

Advertisement

ಹಳ್ಳಿಗಳೆಂದರೆ ಸಹಜವಾಗಿ ನಗರದಷ್ಟು ಅನುಕೂಲತೆಗಳಿಲ್ಲ. ವೇದಿಕೆಗಳಲ್ಲಿ “ಹಳ್ಳಿಯ ಬದುಕು ಎಂದರೆ ಹಸಿರಿನ ಧಾಮ; ಶಾಂತಿಯ ತಾಣ, ಬೀಸುವ ತಂಗಾಳಿ, ಹರಿವ ನದಿ, ಇಲ್ಲೇ ಇರೋಣ ಅನ್ನಿಸ್ತಿದೆ’ ಎಂದು ವಾಗ್ಝರಿ ಹರಿಸುವ ಮಂದಿಯಲ್ಲಿ “ಸರಿ, ಇಲ್ಲಿರಿ’ ಎಂದರೆ ಒಪ್ಪಿಕೊಳ್ತಾರಾ ಎಂಬುದು ಗೊತ್ತಿರುವ ಸತ್ಯ, ಇಪ್ಪತ್ತನಾಲ್ಕು ಘಂಟೆಗಳ ಕಾಲ ವಿದ್ಯುತ್‌ ಸೌಲಭ್ಯ ಇಲ್ಲ, ಮೊಬೈಲ್ ಸ್ತಬ್ಧ, ನೆಟ್‌ ಸಿಗಲ್ಲ, ವಾಹನ ಸೌಕರ್ಯ, ಉತ್ತಮ ರಸ್ತೆ, ಆಸ್ಪತ್ರೆ, ವೈದ್ಯರ ಅಲಭ್ಯತೆ , ಸ್ಕೂಲು, ಕಾಲೇಜು  ಸಾಲದು, ಬೇಕಾದ ಕೋರ್ಸ್‌ ಇಲ್ಲ,  ಹೈ ಫೈ ಬದುಕು ಅಸಾಧ್ಯ- ಎಲ್ಲ ಒಟ್ಟಾಗಿ ನಮ್ಮ ನಡಿಗೆ ಸಿಟಿಗಳತ್ತ ಮಾಮೂಲಿಯಾಗಿದೆ. ಇದರ ನೇರ ಪರಿಣಾಮ ಬೀರುವುದು ತಾಯ್ತಂದೆಯರ ಮೇಲೆ ಎಂದರೆ ಅದು ವಾಸ್ತವ ಸತ್ಯ. ಹಳ್ಳಿಯಿರಲಿ, ದಿಲ್ಲಿಯೇ ಆಗಲಿ ಇಂದಿಗೆ ಒಂದೋ, ಎರಡೋ ಮಕ್ಕಳಿರುವ ಮನೆಗಳು ಹೆಚ್ಚು. 

ಅವರು ವೈವಾಹಿಕ ಬದುಕಿಗೆ, ಉದ್ಯೋಗಕ್ಕೆ ತೆರಳಿ ಊರಿನ ಮನೆಗಳಲ್ಲಿ ತಾಯ್ತಂದೆ ಮಾತ್ರ ವಾಸವಿರುವ ಸಂದರ್ಭ ಹೆಚ್ಚಾಗಿ ಕಾಣಸಿಗುತ್ತದೆ. ಪರಿಚಿತರೊಬ್ಬರು ಯಾವಾಗಲೂ ಹೇಳುವ ಮಾತೆಂದರೆ- ಇಂದಿಗೆ ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗಿವೆ. ಸುತ್ತಮುತ್ತ ಅವಲೋಕಿಸಿದರೆ ಈ ಮಾತಿನಲ್ಲಿರುವ ವಾಸ್ತವ ಅರಿವಾಗುತ್ತದೆ. 

ವೈವಾಹಿಕ ಬದುಕಿನಲ್ಲಿ ಸಂಬಂಧಗಳು ಪರಸ್ಪರ ಅತೀವವಾಗಿ ಆಪ್ತವಾಗುವುದು ಆ ವಯಸ್ಸಿನಲ್ಲಿ. ಒಬ್ಬರಿಲ್ಲದೆ ಇನ್ನೊಬ್ಬರಿಲ್ಲ ಎನ್ನುವ ಮನಃಸ್ಥಿತಿ. ನಿನಗೆ ನಾನು; ನನಗೆ ನೀನು ಎಂಬ ಅವಲಂಬನೆ. ಹೊರಗಿನ ಮನರಂಜನೆ, ಪ್ರವಾಸ, ಸ್ನೇಹಿತರ ಬಳಗ ಕಡಿಮೆ. ಸಮಯ  ಹೋಗುವುದಿಲ್ಲ. ಸ್ನೇಹಿತರ ಬಳಗ ಹತ್ತಿರವಿದ್ದರೆ ಸ್ವಲ್ಪ ಮಟ್ಟಿಗೆ ಏಕತಾನತೆ ಕಡಿಮೆ ಆಗಬಹುದು. ಆದರೆ ಕಂಡವರೆಲ್ಲ ಆಪ್ತರಾಗಲಾರರು. ಉಳಿದಂತೆ ಜಮೀನು ಹೊಂದಿದವರಿಗೆ ಅದರ ನಂಟು ಒಡಲ ಮಕ್ಕಳಂತೆ. ನಿಭಾಯಿಸಲಾಗುವುದಿಲ್ಲವಾದರೆ ಮಾರಿಬಿಡಿ ಎನ್ನುವ ಮಕ್ಕಳ ಒತ್ತಡಕ್ಕೆ  ಮನಸ್ಸು ಒಪ್ಪುವುದಿಲ್ಲ. ಪ್ರೀತಿಯಿಂದ ಸಾಕಿ ಬೆಳೆಸಿದ ಒಂದೊಂದು ಗಿಡ-ಮರದ ಜೊತೆಗೆ ಇರುವ ವಾತ್ಸಲ್ಯ, ಅನುಬಂಧ  ಬಿಡಿಸಲಾಗದ ಬಂಧನ. ಸಿಟಿಯಲ್ಲಿ ಉಳಿದುಕೊಂಡವರ ಪಾಲಿಗೆ ಹಳ್ಳಿಮನೆ ಏನಿದ್ದರೂ ನಾಲ್ಕು ದಿನ ಬಂದು ಹೋಗಲಷ್ಟೆ. ಅದಕ್ಕಿಂತ ಹೆಚ್ಚಿಗೆ ನಿಂತರೆ ಅವರಿಗೆ ಹೊತ್ತು ಹೋಗದು.

ಬಾಲ್ಯದಲ್ಲಿ ಆಸೆಪಟ್ಟು ತಿನ್ನುತ್ತಿದ್ದರೆಂದು ಅಮ್ಮ  ಶ್ರಮವಹಿಸಿ ಮಕ್ಕಳ ಮೆಚ್ಚಿನ ಊಟ, ತಿಂಡಿ ತಯಾರಿಸಿ ಕೊಟ್ಟರೆ ಅಂದಿನ ರುಚಿ ಇಂದಿಗೆ ಅಷ್ಟು ಗಾಢವಾಗಿ ಉಳಿದಿರುವುದಿಲ್ಲ. ಅಲ್ಲದೆ ವಿಪರೀತ ಹೆವಿ ಎಂದು ಸರಿಸಿ ಬಿಡುವುದು ಸುಳ್ಳಲ್ಲ. ಆಗಾಗ ನಗರಗಳಿಂದಲೋ, ವಿದೇಶದಿಂದಲೋ ಬರುವ ಮಕ್ಕಳ ಫೋನ್‌ ಕಾಲ…ಗಳಿಗೆ ಕಾಯುತ್ತ ಬದುಕು ಕಳೆಯುವ ಹೊತ್ತು ಇದೆಯಲ್ಲ ಅದು ನೀನಿಲ್ಲದೆ ನಾನಿಲ್ಲ ಎಂಬ ಕಟುಸತ್ಯವನ್ನು ಮೂಕವಾಗಿ ಒಪ್ಪಿಕೊಳ್ಳುತ್ತದೆ. ಆಗಾಗ ಭೀತಿ! ಅಕಸ್ಮಾತ್‌ ತಮ್ಮಿಬ್ಬರಲ್ಲಿ ಒಬ್ಬರು ಕಾರಣಾಂತರದಿಂದ  ತೀರಿಕೊಂಡರೆ ಎನ್ನುವ ಯೋಚನೆ ಬದುಕಿನ ಬುಡವನ್ನೇ ಅಲ್ಲಾಡಿಸಿಬಿಡುತ್ತದೆ. ಏಕಾಂಗಿಯಾಗಿ ಉಳಿದ ಜೀವನ ಕಳೆಯಲು ಸಾಧ್ಯವಿಲ್ಲ. ಹಾಗೆಂದು ಸಿಟಿಯಲ್ಲಿರುವ ಮಕ್ಕಳ ಮನೆಗೆ ಅವರು ಕರೆದರೆಂದು ಹೋಗಬಹುದು; ಆದರೆ ಅಲ್ಲಿ ಅವರ ಜೊತೆಗೆ ತಮ್ಮನ್ನು ಸ್ವೀಕರಿಸಿ ತಮ್ಮಲ್ಲೊಬ್ಬರಾಗಿ ಒಪ್ಪಿಕೊಂಡರೆ ಸರಿ, ಬದಲಿಗೆ ದಿನಕಳೆದಂತೆ ಇವರು ತಮ್ಮ ಸಂಸಾರದಲ್ಲಿ ಬಂದ ಮೂರನೆ ವ್ಯಕ್ತಿ ಎನ್ನುವ ತೆರದಲ್ಲಿ ವರ್ತನೆ ಬದಲಾದರೆ ಮುಂದಿನ ಜೀವನ ಊಹೆಗೂ ಅಸಾಧ್ಯ. ಇಂತಹ ಸನ್ನಿವೇಶ ಬಾರದು ಎನ್ನುವ ಹಾಗಿಲ್ಲ. ಅಂಥ ಪರಿಸ್ಥಿತಿಯಲ್ಲಿ ಹಿರಿಯ ಮಹಿಳೆಯರು ಅಡ್ಜಸ್ಟ್‌ ಆಗುವ ಮಟ್ಟಿಗೆ ಗಂಡಸರಿಂದ ಆಗಲಾರದು. ಸಂಸಾರದಲ್ಲಿ ಎಲ್ಲರ ಬೇಕು, ಬೇಡಗಳಿಗೆ ತಗ್ಗಿ  ನಡೆದು ಅಭ್ಯಾಸ ಇರುವ ಮಹಿಳೆಯರು ತಮ್ಮ ಸ್ವಂತವನ್ನು ಬದಿಗಿಡುವುದು ಅಪರೂಪವಲ್ಲ. ಅವರು ನಿಭಾಯಿಸಿದ ಹಾಗೆ ಗಂಡಸರಿಗೆ ಅಸಾಧ್ಯ. ಅವರವರ ಧಾವಂತದ ಬದುಕಿನಲ್ಲಿ ಹಿರಿಯರಿಗೆ ಸಮಯ, ನಿಗಾ ಕೊಡಲು ಅದೆಷ್ಟರ ಮಟ್ಟಿಗೆ ಉಳಿದ ಸದಸ್ಯರಿಗೆ ಸಾಧ್ಯವಾಗುತ್ತದೆ ಎನ್ನುವಂತಿಲ್ಲ. ಒಮ್ಮೆ ತಾವು ಅಲಕ್ಷಿತರು ಎಂದು ನೊಂದುಕೊಂಡರೆ ಅದು ಬಲಿಯುತ್ತದೆ ವಿನಾ ತಗ್ಗದು. ಅನೇಕ ಬಾರಿ ಇಂಥ ಸಂದರ್ಭಗಳಲ್ಲಿ ಊರಿಗೆ ಹಿಂದಿರುಗಿ ಒಬ್ಬಂಟಿಯಾಗಿ ಬದುಕುವುದಿದೆ.

Advertisement

ಜನರೇಶನ್‌ ಗ್ಯಾಪ್‌ ಎನ್ನಬಹುದೇನೋ? ಅದೇನೇ ಇದ್ದರೂ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದರೆ ಅದು ಸತ್ಯಕ್ಕೆ ದೂರವಾದ ಮಾತು ಅಲ್ಲ. ಇದಕ್ಕೆ ಸಾಕ್ಷಿಯಾಗಿ ಬಹುತೇಕ ಮನೆಗಳಲ್ಲಿ ಹಿರಿಯರು ಮಾತ್ರ ಇರುವುದು ಗಮನಿಸಬಹುದು. ಯುವಜನತೆ ಸಣ್ಣ ನೌಕರಿಯಾದರೂ ಸರಿ ಎಂದು ಪಟ್ಟಣ ಸೇರುವುದು ಇದಕ್ಕೆ ಕಾರಣ. ಅವರ ದೃಷ್ಟಿಯಿಂದ ಅದು ತಪ್ಪಲ್ಲ. ಆ ತನಕ ಸಾಕಿ, ಸಲಹಿ ಬಹು ಕಷ್ಟದಿಂದಲಾದರೂ ವಿದ್ಯೆ ಕೊಡಿಸಿ ನೆಲೆ ಕಂಡುಕೊಂಡ ಮಕ್ಕಳಲ್ಲಿ ವೃದ್ಧ ಹೆತ್ತವರನ್ನು ಕಾಳಜಿ, ಕಳಕಳಿಯಿಂದ ನೋಡಿಕೊಳ್ಳುವವರು ಹೆಚ್ಚಿನವರಿರುವುದಿಲ್ಲ. ಇದಕ್ಕೆ ಏರುತ್ತಿರುವ ವೃದ್ಧಾಶ್ರಮಗಳೇ ಸಾಕ್ಷಿ.

ಅನೇಕ ಕಡೆಗಳಲ್ಲಿ ಹಿರಿಯರಿಗೆ ಇಳಿವಯಸ್ಸಿನಲ್ಲಿ ಶಾರೀರಿಕ ಹಿಂಸೆಯಾಗುವುದೂ ಮಾಧ್ಯಮಗಳಲ್ಲಿ ಕಾಣಬಹುದು. ಹಾಗೆಂದು ಅತ್ಯಂತ ಪ್ರೀತಿ-ವಾತ್ಸಲ್ಯದಿಂದ ಹಿರಿಯರನ್ನು ಗಮನಿಸಿ ಅವರ ಬೇಕು-ಬೇಡಗಳಿಗೆ ಆದ್ಯತೆ ಕೊಡುವ ಮನೆಯವರೂ ಸಾಕಷ್ಟು ಕಾಣಸಿಗುತ್ತಾರೆ.

ಹರೆಯದ ದಾಂಪತ್ಯದಲ್ಲಿ ಹುಚ್ಚುಹೊಳೆಯ ಹಾಗೆ ಧುಮ್ಮಿಕ್ಕಿ ಹರಿಯುವ ಪ್ರೀತಿ-ಪ್ರೇಮ-ಕಾಮಗಳು ದಾಂಪತ್ಯದಲ್ಲಿ ಮಾಗಿ  ಮಧುರವಾಗಿ ಪರಸ್ಪರ ಅತ್ಯಾಪ್ತ ಅವಲಂಬನೆಯಾಗಿ ಬೆಸೆದು ಗಾಢವಾಗುವುದು ಇಳಿವಯಸ್ಸಿನಲ್ಲಿ. ಆಗ ದಂಪತಿಯ ಮಧ್ಯೆ ನಿನಗೆ ನಾನು; ನನಗೆ ನೀನು ಎಂಬ ಶ್ರೀಗಂಧದ ಪರಿಮಳದ ಬಾಂಧವ್ಯ  ಬಿಡಲಾಗದ ಬಂಧವಾಗುತ್ತದೆ.  

ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next