ಪಣಜಿ: ’ಸಿನಿಮಾ ರಂಗ ನನ್ನನ್ನು ಚಿರಂಜೀವಿಯಾಗಿಸಿದೆ’ ಎಂದವರು ತೆಲುಗಿನ ಖ್ಯಾತ ಹಿರಿಯ ನಟ ಚಿರಂಜೀವಿ.
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ (ಇಫಿ) 53ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಸೋಮವಾರ ಭಾರತೀಯ ಚಿತ್ರರಂಗ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
‘ಇದೊಂದು ಆತ್ಮೀಯ ಘಳಿಗೆ. ನಾನೊಬ್ಬ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಸಿನಿಮಾ ರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ಪ್ರಸಿದ್ಧಿ, ಗೌರವ, ಬದುಕು ಎಲ್ಲವೂ ಅದರಿಂದ ಸಿಕ್ಕಿದೆ. ಸಿನಿಮಾ ರಂಗ ಹಾಗೂ ಅಭಿಮಾನಿಗಳು ನನ್ನನ್ನು ’ಚಿರಂಜೀವಿ’ಯಾಗಿಸಿದ್ದಾರೆ. ಇದಕ್ಕಾಗಿ ವಂದನೆಗಳು’ ಎಂದು ಭಾವುಕರಾಗಿ ನುಡಿದರು.
‘ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದೆ. ಒಂದು ದಶಕ ರಾಜಕೀಯದಲ್ಲಿದ್ದು ಪ್ರೇಕ್ಷಕರೊಂದಿಗಿನ ಸಂಬಂಧ ಕಳೆದುಕೊಂಡಿದ್ದೆ. ಆಮೇಲೆ ವಾಪಸು ಚಿತ್ರರಂಗಕ್ಕೆ ಬಂದಾಗ ಅಭಿಮಾನಿಗಳು ಅಭೂತಪೂರ್ವವಾಗಿ ಸ್ವಾಗತಿಸಿದ ರೀತಿ ನನ್ನನ್ನು ಮೂಕ ವಿಸ್ಮಿತನಾಗಿಸಿತ್ತು. ಆಗ ಒಂದು ದಶಕ ನಾನೇ ಅಭಿಮಾನಿಗಳೊಂದಿಗೆ ಬಾಂಧವ್ಯ ಕಳೆದುಕೊಂಡಿದ್ದೆ. ಅವರಲ್ಲ ಎಂಬುದು ಅರ್ಥವಾಯಿತು. ಜತೆಗೆ ಸಿನಿಮಾ ಕ್ಷೇತ್ರದ ಮಹತ್ವ ಅರಿವಾಯಿತು. ಇದೊಂದು ಅದ್ಭುತವಾದ ಕ್ಷೇತ್ರ . ಇನ್ನೆಂದೂ ಇದರಿಂದ ದೂರ ಹೋಗಲಾರೆ’ ಎಂದು ಹೇಳಿದರು.
Related Articles
‘ಸಿನಿಮಾ ಭ್ರಷ್ಟಾಚಾರ ರಹಿತ ಕ್ಷೇತ್ರ. ನಿಮಗೆ ಪ್ರತಿಭೆಯಿದ್ದರೆ ಪ್ರದರ್ಶಿಸಲು ಅತ್ಯುತ್ತಮ ವೇದಿಕೆ. ಯಾವ ಮಟ್ಟಕ್ಕಾದರೂ ಮುಟ್ಟಬಹುದು. ಅವಕಾಶಗಳು ಮುಕ್ತವಾಗಿರುತ್ತವೆ’ ಎಂದರು.
‘ರಾಜಕೀಯ ಕ್ಷೇತ್ರದ ಕುರಿತು ಮತ್ತೊಮ್ಮೆ ಗಮನಹರಿಸಿ’ ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಮನವಿಗೆ ‘ಆ ಕುರಿತು ಆಮೇಲೆ ಮಾತನಾಡೋಣ’ ಎಂದು ಮುಗುಳ್ನಕ್ಕು ಉತ್ತರಿಸಿದರು. ತೆಲುಗಿನಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.
ಕಥಾವಸ್ತು, ವಿಷಯದತ್ತಲೇ ಮತ್ತೆ ಸಿನಿಮಾ ರಂಗ
‘ಕಥಾವಸ್ತು, ವಿಷಯದತ್ತಲೇ ಮತ್ತೆ ಸಿನಿಮಾ ರಂಗ ಸಾಗತೊಡಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಚಿತ್ರೋತ್ಸವಗಳು ಸದಾ ಸಿನಿಮಾ ರಂಗದ ಸ್ವತಂತ್ರ ಧ್ವನಿಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಇದು ಹೀಗೆ ಮುನ್ನಡೆಯಲಿ’ ಎಂದರು ಮತ್ತೊಬ್ಬ ತೆಲುಗಿನ ನಟ ರಾಣಾ ದಗ್ಗುಬಾಟಿ.
ಸಿನಿಮಾವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೀರಿ. ಯಾವುದು ನಿಮಗೆ ಬಹಳ ಇಷ್ಟವೆಂಬ ಪ್ರಶ್ನೆಗೆ, ‘ನಾನು ಯಾವುದನ್ನೇ ತೆಗೆದುಕೊಳ್ಳಲಿ. ಅದನ್ನು ಖುಷಿಯಿಂದ ಮಾಡುವೆ. ಹಾಗಾಗಿ ಅದು ಮುಖ್ಯ, ಇದು ಅಮುಖ್ಯ ಎಂಬುದಿಲ್ಲ’ ಎಂದರು.