ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರದಿಂದ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ ನಾಯಕ ಹೇಳಿಕೊಂಡಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರ ನಾಯಕರೊಬ್ಬರನ್ನು ಭೇಟಿ ಮಾಡಿದ್ದು, ನನಗೆ ಟಿಕೆಟ್ ಖಚಿತವಾಗಿದೆ. ಅವರ ಭರವಸೆ ಮೇಲೆಯೇ ಇದೀಗ ನಿಮ್ಮೆದುರು ನಾನು ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದರು.
ವಿಜಯಪುರ ಲೋಕಸಭೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳಿದ್ದೇವೆ. ಹಾಲಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಟಿಕೆಟ್ ಸಿಗದಿದ್ದರೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಈ ಹಿಂದೆ ಬಳ್ಳೊಳ್ಳಿ ಕ್ಷೇತ್ರ, ಈಗ ನಾಗಠಾಣಾ ಕ್ಷೇತ್ರದಲ್ಲಿ ಬಂಜಾರಾ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಬಿಜೆಪಿ ಅವಕಾಶ ನೀಡಿಲ್ಲ. ಈ ಬಾರಿ ಗೆಲ್ಲುವ ಕುದುರೆಯಾದ ನನ್ನ ಮೂಲಕ ಬಂಜಾರಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯದ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆಯಿಂದಲೇ ಪೊಲೀಸ್ ಅಧಿಕಾರಿಯಾಗಿದ್ದರೂ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದೆ. ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರುವಾಗ ನಾನು ಯಾವುದೇ ಬೇಡಿಕೆ ಇರಿಸಿರಲಿಲ್ಲ. ಆದರೆ ನಾಗಠಾಣ ಮೀಸಲು ಕ್ಷೇತ್ರದಲ್ಲಿ ನನಗೆ ಬಿಜೆಪಿ ಟಿಕೆಟ್ ಬಹುತೆಕ ಖಚಿತವಾಗುತ್ತಲೇ ಹಿರಿಯ ರಾಜಕೀಯ ನಾಯಕರೊಬ್ಬರ ಕುತಂತ್ರದಿಂದ ಅವಕಾಶ ತಪ್ಪಿತು ಎಂದು ಅಸಮಾಧಾನ ಹೊರ ಹಾಕಿದರು.
ವಿಧಾನಸಭೆ ಚುನಾವಣೆಯಲ್ಲಿ ನನಗೆ ಕಾಣದ ಕೈಗಳ ಕುತಂತ್ರದಿಂದ ನಾಗಠಾಣ ಕ್ಷೇತ್ರದಲ್ಲಿ ಟಿಕೇಟ್ ಕೈ ತಪ್ಪಿದೆ. ನಾನು ಅಥವಾ ಗೋಪಾಲ ಕಾರಜೋಳ ಅವರಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಗೆಲುವು ಖಚಿತವಾಗಿತ್ತು. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಹೊಮುಖದ ವ್ಯಕ್ತಿಯನ್ನು ಟಿಕೆಟ್ ಕೊಡಿಸಿ, ಗೆಲ್ಲುವ ಜವಾಬ್ದಾರಿ ಹೊತ್ತವರು ಚುನಾವಣೆಯಲ್ಲಿ ಮುಂದೆ ಬರದಿರುವುದೇ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ದೂರಿದರು.
ಪೊಲೀಸ್ ಅಧಿಕಾರಿ ಮಾತ್ರವಲ್ಲ ಸಮಾಜ ಸೇವೆ ಮೂಲಕ ಜನರ ಮಧ್ಯೆ ಇದ್ದೇನೆ. ಟಿಕೆಟ್ ತಪ್ಪಿದರೂ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ನನ್ನಂತೆ ಇತರರು ಬಿಜೆಪಿ ಟಿಕೆಟ್ ಕೇಳುವುದು ಸಹಜ. ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿದವರಿಗೆ ನಾನು ಟಿಕೆಟ್ ತಪ್ಪಿಸಿಯೇ ತೀರುತ್ತೇನೆ. ಆದರೆ ಪ್ರಧಾನಿ ಮೋದಿ ಅವರ ಹ್ಯಾಟ್ರಿಕ್ ವಿಜಯಕ್ಕಾಗಿ ಪಕ್ಷದ ಅಭ್ಯರ್ಥಿ ಯಾರೇ ಆಗಿದ್ದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.