Advertisement
ಬೆಂಗಳೂರು ಪ್ರಸ್‌ಕ್ಲಬ್ ಹಾಗೂ ವರದಿಗಾರರ ಕೂಟದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಮಂಡ್ಯದಲ್ಲಿ ದೇವೇಗೌಡರು ಒಕ್ಕಲಿಗರ ನಾಯಕತ್ವ ವಹಿಸಿಕೊಳ್ಳಲು ಮುಂದಾದಾಗ ನೀವೇ ಸಹಕಾರ ನೀಡಿದ್ದೀರಿ. ಈಗ ಜಿ.ಮಾದೇಗೌಡರ ಸಹಿತ ಎಲ್ಲರೂ ದೇವೇಗೌಡರ ಹಿಂದಿರುವಾಗ ನೀವು ಟೀಕಿಸುತ್ತಿರುವುದು ವಿಪರ್ಯಾಸವಲ್ಲವೇ ಎಂಬ ಪ್ರಶ್ನೆಗೆ, ಮಂಡ್ಯದಲ್ಲಿ ನಡೆದಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ. ದೇಶದ ಚುನಾವಣೆ. ಇದನ್ನು ನಾವು ಭಾರತೀಯರಾಗಿ ನೋಡಬೇಕು. ಅದರಂತೆ ನೋಡುತ್ತಿದ್ದೇನೆ. ಇದರಲ್ಲಿ ವಿಪರ್ಯಾಸವೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.
Related Articles
Advertisement
ಸಮಾಜವಾದಿ, ಜೆಡಿಎಸ್‌ನ ನಮ್ಮ ಸ್ನೇಹಿತರು ತುಳಿದ ದಾರಿಯನ್ನು ನೋಡಿದ್ದೇನೆ. ಅಂತಹ ಕಳಂಕರಹಿತ ಚಾರಿತ್ರ್ಯ ಹೊಂದಿದವರು ನನಗೆ ಬುದ್ದಿ ಹೇಳುವಾಗ ನಾನು ಕೇಳಿಸಿಕೊಳ್ಳಬೇಕಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.
ನನ್ನನ್ನು ಕರ್ನಾಟಕದಿಂದ ಆಚೆಗಿಡುವ ಹುನ್ನಾರ ನಡೆದಿತ್ತು:
2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಸಂದರ್ಭ ಎದುರಾದಾಗ ಬಹುಪಾಲು ಶಾಸಕರು ನಾನೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಆದರೆ, ಜೆಡಿಎಸ್‌ನವರು ಎಸ್.ಎಂ.ಕೃಷ್ಣ ಅವರನ್ನು ಬಿಟ್ಟು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ ಎಂದಿದ್ದರು. ನಾನು ಚೀನಾ ಪ್ರವಾಸದಲ್ಲಿದ್ದು, ಹಿಂದಿರುಗುವವರೆಗೆ ಕಾಯುವಂತೆ ಹೇಳಿದರೂ ಶಿವರಾಜ್ ಪಾಟೀಲ್ ಅವರು ನನ್ನನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಿರುವುದನ್ನು ಘೋಷಿಸುವುದಾಗಿ ಹೇಳಿದರು. ನನ್ನನ್ನು ಕರ್ನಾಟಕದಿಂದ ಆಚೆಗಿಡುವ ಹುನ್ನಾರ ನಡೆದಿತ್ತು. ಒಂದೊಮ್ಮೆ ಆ ಸಂದರ್ಭದಲ್ಲಿ ಮುಂದಿನ ಐದು ವರ್ಷ ಅದೇ ವೇಗದಲ್ಲಿ ಬೆಂಗಳೂರು ಬೆಳೆದಿದ್ದರೆ ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತುಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನ:
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಚುನಾವಣಾ ಪೂರ್ವ ಮೈತ್ರಿಯಿದ್ದಾಗಷ್ಟೇ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಆದರೆ, ಈ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡುವುದರ ಜತೆಗೆ 5 ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಮಾಧ್ಯಮಗಳ ಮುಂದೆ ಪಾರದರ್ಶಕವಾಗಿ ಹೇಳಿದ್ದು ವಿಶೇಷ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದರು. ಕಾಂಗ್ರೆಸ್ ಈಗ ಆಸ್ತಿಯಾಗಿದೆ:
ಅನುವಂಶಿಕ ರಾಜಕಾರಣವನ್ನು ನಾನು ವಿರೋಧಿಸಿಕೊಂಡೇ ಬಂದಿದ್ದೇನೆ. ಆದರೆ, ಕಾಂಗ್ರೆಸ್ ಎಂಬುದು ಒಂದು ತಲೆಮಾರಿನ ನಂತರ ಮತ್ತೂಂದು ತಲೆಮಾರಿಗೆ ಬರೆದುಕೊಟ್ಟ ಆಸ್ತಿಯಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಅರ್ಹತೆ ಇತ್ತು. ಹಾಗಾಗಿ, ಅವರೊಂದಿಗೆ ಹೋಗಲು ಮುಜುಗರವಿರಲಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆ ಬಳಿಕ ಅಲ್ಲಿ ಉಳಿಯಲು ಸಾಧ್ಯವಿಲ್ಲವೆಂದು ಅರಿವಾಗಿ, 43 ವರ್ಷವಿದ್ದ ಪಕ್ಷವನ್ನು ಸಂಕಟದಿಂದಲೇ ಕಳೆದುಕೊಂಡೆ ಎಂದರು. ನನ್ನ ಕುಟುಂಬದಿಂದ ಮುಂದೆ ಯಾರಾದರೂ ರಾಜಕೀಯ ಪ್ರವೇಶಿಸುತ್ತಾರೋ ಗೊತ್ತಿಲ್ಲ. ಅದನ್ನು ಅವರಿಗೆ ಬಿಡುತ್ತೇನೆ. ಅರ್ಹತೆ ಇದ್ದವರನ್ನು ತಡೆಯಲು ಸಾಧ್ಯವಿಲ್ಲ. ನನ್ನ ಸೋದರನ ಪುತ್ರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾದರೂ ಅವರು ನನ್ನ ಹೆಸರು ಬಳಸಿಕೊಂಡು ಬೆಳೆಯಲು ಪ್ರಯತ್ನಿಸಲಿಲ್ಲ. ರಾಹುಲ್ ವಯನಾಡಿನಿಂದ ಸ್ಪರ್ಧಿಸುವುದು ತಪ್ಪಲ್ಲ. ಈ ಹಿಂದೆ ಸೋನಿಯಾ ಗಾಂಧಿಯವರು ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಮೂರು ಕ್ಷೇತ್ರದಲ್ಲಿ ನಿಲ್ಲಲೂ ಅವಕಾಶವಿದೆ. ನಾನು ಬಿಜೆಪಿ ಸೇರಿದ ಮೇಲೆಯೇ ನನ್ನ ಅಳಿಯ ಮೇಲೆ ಐಟಿ ದಾಳಿಯಾಗಿತ್ತುಎಂದರು. ಮೋದಿ ಎಂದರೆ ಬಿಜೆಪಿ:
ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿಯವರು ಕಾರಣ ಎಂಬುದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತೇನೆ. ಅವರದು ಅನುವಂಶಿಕ ರಾಜಕಾರಣವಲ್ಲ. ಯಾವುದೇ ಕುರ್ಚಿ ಮೇಲೆ ಅವರ ಕರ್ಚಿಫ್ ಇಲ್ಲ. ಐದು ವರ್ಷ ಪ್ರಧಾನಿಯಾಗಿ ಕಲ್ಮಶರಹಿತ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಇನ್ನೂ ಐದು ವರ್ಷ ಅವರಿಗೆ ನಾಯಕತ್ವ ನೀಡಬೇಕು. ಹಾಗಾಗಿ, ನನ್ನ ಅಳಿಲು ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ. ಈಗ ಪ್ರಧಾನಿ ಮೋದಿ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಮೋದಿ. ಎರಡನ್ನೂ ವಿಂಗಡಿಸಲಾಗದಷ್ಟು ಒಂದರಲ್ಲೊಂದು ಮುಳುಗಿ ಹೋಗಿವೆ ಎಂದು ಹೇಳಿದರು.