ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ನಾನೂ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಜೆಡಿಎಸ್ ಮುಖಂಡ ಪೊ›.ಕೆ.ಎಸ್.ರಂಗಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜೆಡಿಎಸ್‌ನಲ್ಲಿ ತಾವೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾವು ಸೇರಿದಂತೆ ಮೂರ್‍ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಅದಕ್ಕೆ ತಾವು ಬದ್ಧ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಷ್ಟೇ ತಮ್ಮ ಪ್ರಮುಖ ಗುರಿ ಎಂದು ತಿಳಿಸಿದರು.
ರಾಜ್ಯದ ಚಿತ್ರಣ ಬದಲು: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್-ಬಿಜೆಪಿ ಆಡಳಿತವನ್ನು ಮತದಾರರು ನೋಡಿದ್ದು, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ ಕಲ್ಪಿಸಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ರಾಜ್ಯದ ಚಿತ್ರಣವೇ ಬದಲಾಗಲಿದೆ. ಕೆಲವು ದಿನಗಳ ಹಿಂದೆಯಷ್ಟೇ ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಅವರು,
ಕೃಷಿ, ಹೈನುಗಾರಿಕೆ, ಕೋಳಿ ಸಾಕಣೆ ಮೊದಲಾದ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಮತದಾರರು ಈ ಬಾರಿ ಜೆಡಿಎಸ್‌ಗೆ ಅಧಿಕಾರ ನೀಡಬೇಕೆಂದು ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಕ್ರಮ: ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ ತಾವು ಈಗಾಗಲೇ ಕ್ಷೇತ್ರದ ಹಲವು ಭಾಗಗಳಿಗೆ ಭೇಟಿ ನೀಡಿದ್ದು, ಕ್ಷೇತ್ರದಲ್ಲಿ ತಮಗೆ ಒಳ್ಳೆಯ ವಾತಾವರಣವಿದೆ. ಅಲ್ಲದೆ, ಬಡಕುಟುಂಬದಿಂದ ಬಂದಿರುವ ತಮಗೆ ಬಡವರ ಕಷ್ಟಗಳು ಏನೆಂದು ತಿಳಿದಿವೆ. ಚಾಮರಾಜ ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ಕೆಲಸಗಳು ಆಗಬೇಕೆಂಬುದರ ಬಗ್ಗೆ ಯೋಜನೆ ರೂಪಿಸಿ, ಕಿರುಹೊತ್ತಿಗೆ ತಯಾರಿಸಿದ್ದೇನೆ.
ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಮೇಯರ್ ಎಂ.ಜೆ.ರವಿಕುಮಾರ್, ಮಾಜಿ ಮೇಯರ್‌ಗಳಾದ ಆರ್.ಲಿಂಗಪ್ಪ, ಬಿ.ಎಲ್.ಬೈರಪ್ಪ, ಪಾಲಿಕೆ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಮಹದೇವಪ್ಪ, ಎಸ್‌ಬಿಎಂ ಮಂಜು, ಕೆ.ವಿ.ಮಲ್ಲೇಶ್, ರಾಜೇಶ್ವರಿ ಸೋಮು ಇದ್ದರು.