Advertisement
ಅತೃಪ್ತ ಶಾಸಕರನ್ನು ನಿರಂತರವಾಗಿ ತೆರೆ ಮರೆಯಲ್ಲಿ ನಿಂತು ಕಾಯ್ದುಕೊಂಡು ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶನಿವಾರ ತೆರೆಯಲ್ಲಿಯೇ ನಿಂತು ಹನ್ನೆರಡು ಜನ ಶಾಸಕರು ಒಟ್ಟಿಗೆ ರಾಜೀನಾಮೆ ನೀಡುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement
ಆದರೂ, ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಲು ಮುಂದಾದರು. ಈ ಸಂದರ್ಭದಲ್ಲಿ ಶಾಸಕರು ತಾವು ಬರೆದುಕೊಂಡಿದ್ದ ರಾಜೀನಾಮೆ ಪತ್ರವನ್ನು ಕಾರಿನಲ್ಲಿಯೇ ಬಿಟ್ಟು ಬಂದಿದ್ದರಿಂದ ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಪ್ತ ಸಹಾಯಕ ರಾಜೀನಾಮೆ ಪತ್ರಗಳನ್ನು ತಂದು ಕೊಟ್ಟರು.
ಆನಂತರ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸ್ಪೀಕರ್ ಕಚೇರಿಗೆ ಆಗಮಿಸಿದರು. ಆ ಸಂದರ್ಭದಲ್ಲಿ ನಾವು ರಾಜೀನಾಮೆ ನೀಡಲು ಬಂದಿಲ್ಲ ಎಂದು ಎಸ್.ಟಿ. ಸೋಮಶೇಖರ್ ಮಾಧ್ಯಮಗಳಿಗೆ ತಿಳಿಸಿ, ಸ್ಪೀಕರ್ ಕಚೇರಿಗೆ ತೆರಳಿದರು.
ಆ ನಂತರ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಕೂಡ ವಿಧಾನಸೌಧಕ್ಕೆ ಆಗಮಿಸಿ, ತಾವು ರಾಜೀನಾಮೆ ನೀಡುವುದಾಗಿ ಹೇಳಿಯೇ ಸ್ಪೀಕರ್ ಕಚೇರಿಗೆ ತೆರಳಿದರು. ಈ ಬೆಳವಣಿಗೆ ಬೆನ್ನಲ್ಲೇ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದಿಢೀರ್ ಎಂದು ಸ್ಪೀಕರ್ ಕಚೇರಿಗೆ ಆಗಮಿಸಿದರು.
ಅಲ್ಲದೇ ರಾಜೀನಾಮೆ ನೀಡಲು ಮುಂದಾಗಿದ್ದ ಶಾಸಕರ ಮನವೊಲಿಸುವ ಪ್ರಯತ್ನವನ್ನೂ ಮಾಡಿದರು. ಅಲ್ಲದೇ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನೂ ಹರಿದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು. ಆದರೆ, ಡಿ.ಕೆ.ಶಿವಕುಮಾರ್ ಮನವೊಲಿಕೆಗೆ ಬಗ್ಗದ ಎಂಟು ಜನ ಶಾಸಕರು ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿ, ಸ್ವೀಕೃತಿ ಪತ್ರ ಪಡೆದು ನೇರವಾಗಿ ರಾಜಭವನಕ್ಕೆ ತೆರಳಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ತಮ್ಮ ಮನವೊಲಿಸುವ ಪ್ರಯತ್ನ ಮುಂದುವರಿಸಿ, ಬೆಂಗಳೂರು ನಗರದ ಶಾಸಕರಾದ ರಾಮಲಿಂಗಾರೆಡ್ಡಿ, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುನಿರತ್ನ ಅವರನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿ ಮತ್ತೂಮ್ಮೆ ಮನವೊಲಿಸುವ ಪ್ರಯತ್ನ ನಡೆಸಿದರು.
ಆದರೆ, ಅವರ ಪ್ರಯತ್ನ ವಿಫಲವಾಯಿತು. ಅಲ್ಲಿಂದ ರಾಮಲಿಂಗಾ ರೆಡ್ಡಿ ಹೊರತು ಪಡಿಸಿ ಬೆಂಗಳೂರಿನ ಮೂವರು ಶಾಸಕರು ರಾಜಭವನಕ್ಕೆ ಆಗಮಿಸಿ, ರಾಜೀನಾಮೆ ನೀಡಿರುವ ಶಾಸಕರ ಗುಂಪು ಸೇರಿಕೊಂಡರು.
ರಾಜ್ಯಪಾಲರಿಗೆ ದೂರು: ರಾಜೀನಾಮೆ ನೀಡಿರುವ ಹನ್ನೊಂದು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ತಾವು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿರುವುದನ್ನು ಅವರ ಗಮನಕ್ಕೆ ತಂದಿದ್ದಾರೆ. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ರಾಜೀನಾಮೆಯನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹರಿದು ಹಾಕಿರುವ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯಪಾಲರ ಭೇಟಿಯ ನಂತರ ಎಲ್ಲ ಶಾಸಕರೂ ಮಾಧ್ಯಮಗಳ ಮುಂದೆ ಒಗ್ಗಟ್ಟು ಪ್ರದರ್ಶನ ಮಾಡಿದರು. ಅಲ್ಲಿಂದ ನೇರವಾಗಿ ಒಂದೇ ವಾಹನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ್ದಾರೆ.
ರಾಜೀನಾಮೆ ನೀಡಿರುವ ಶಾಸಕರಿಗೆ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಸುಮಾರು 14 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಲಾಗಿದ್ದು, ಅವರ ರಾಜೀನಾಮೆ ಅಂಗೀಕಾರವಾಗುವವರೆಗೂ ಮುಂಬೈನಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಇದೆ.
ಹೋಗುವವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ಸಮಸ್ಯೆ ಇರಬಹುದು. ಆದರೆ, ಎಲ್ಲವೂ ಸರಿ ಹೋಗುತ್ತದೆ. ರಾಜೀನಾಮೆಗೆ ಬೇಕಾದಷ್ಟು ಪ್ರೊಸೆಸ್ ಇದೆ. ನಾನು ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿದ್ದಾರೆ. ಯಾವ ಬಿಲ್ಡರ್‌ಗೆ ಕಾಲ್ ಮಾಡಿ ಎಷ್ಟೆಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. -ಡಿ.ಕೆ.ಶಿವಕುಮಾರ್, ಜಲ ಸಂಪನ್ಮೂಲ ಸಚಿವ