ಹೈದರಾಬಾದ್: ಐಶಾರಾಮಿ ಮರ್ಸಿಡಿಸ್ ಬೆಂಜ್ ಕಾರಿನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಐವರು ಹದಿಹರೆಯದ ಯುವಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಶಾಸಕರೊಬ್ಬರ ಅಪ್ರಾಪ್ತ ಪುತ್ರ ಕೂಡಾ ಶಾಮೀಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ನಳಪಾಕ ಬಡಿಸಲು ನವರಸ ನಾಯಕ ರೆಡಿ: ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆ ದಿನಾಂಕ ಫಿಕ್ಸ್
ಘಟನೆ ಕಳೆದ ಶನಿವಾರ ನಡೆದಿದ್ದು, ನಂತರ ಈ ಶುಕ್ರವಾರ ಬೆಳಕಿಗೆ ಬಂದಿದೆ. ಸಂತ್ರಸ್ತೆ ಬಾಲಕಿಯ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 17 ವರ್ಷದ ಹುಡುಗಿಯ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಘಟನೆ ಬೆಳಕಿಗೆ ಬಂದ ನಂತರ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರನೂ ಶಾಮೀಲಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತ ಹುಡುಗಿ ಕೇವಲ ಒಬ್ಬ ಆರೋಪಿಯನ್ನು ಮಾತ್ರ ಗುರುತಿಸಿದ್ದು, ಆತ ಕೂಡಾ ಅಪ್ರಾಪ್ತ ಎಂದು ತಿಳಿಸಿದೆ.
ಹೈದರಾಬಾದ್ ನ ಪ್ರತಿಷ್ಠಿತ ಜ್ಯುಬಿಲಿ ಹಿಲ್ಸ್ ನಲ್ಲಿ ಮರ್ಸಿಡಿಸ್ ಕಾರಿನೊಳಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಈ ಸಂದರ್ಭದಲ್ಲಿ ಕೆಲವು ಹುಡುಗರು ಕಾವಲು ಕಾಯುತ್ತಿದ್ದರು ಎಂದು ಮತ್ತೊಂದು ವರದಿ ವಿವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಟಿಟಿವಿ ಫೂಟೇಜ್ ಹಾಗೂ ಇತರ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.