ಹೈದರಾಬಾದ್: ಆಸ್ತಿ ಆಸೆಗಾಗಿ, ತನ್ನ ತಾಯಿಯನ್ನು ಮನೆಯಿಂದ ಹೊರಹಾಕಿದ್ದ ಪುತ್ರ ಹಾಗೂ ಆತನ ಪತ್ನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ, ಎರಡು ವರ್ಷಗಳ ಕಠಿನ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿದೆ.
2015ರಲ್ಲಿ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಪ್ರಕರಣವಿದು. ತಾಯಿಯಾದ ಜಿ.ವಿ. ಪ್ರೇಮ ಕುಮಾರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಹೆಣ್ಣು ಮಗಳಿದ್ದಾರೆ. ಮಕ್ಕಳೆಲ್ಲರಿಗೂ ಮದುವೆಯಾಗಿ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ.
2013ರಲ್ಲಿ ಕುಮಾರಿ ಅವರ ಪತಿ ಮೃತಪಟ್ಟ ಅನಂತರ, ಕುಮಾರಿ ತಮ್ಮ ಪತಿ ಕಟ್ಟಿಸಿದ್ದ, ಮೋಶಿರಾಬಾದ್‌ನಲ್ಲಿನ ಮನೆಯಲ್ಲೇ ವಾಸ್ತವ್ಯ ಮುಂದುವರಿಸಿದ್ದರು. ಆ ಮನೆಯ ಮೇಲೆ ಕಣ್ಣು ಹಾಕಿದ್ದ ಮೊದಲ ಪುತ್ರ ಅಮಿತ್ ಹಾಗೂ ಆತನ ಪತ್ನಿ ಶೋಭಿತಾ ಲಾವಣ್ಯ ತಮಗೆ ಮೋಸ ಮಾಡಿ ಮನೆಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆಂದು ಕುಮಾರಿ ಅವರು 2015ರ ಅ.13ರಂದು ನೆರೇಡ್‌ಮೆತ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಮನೆಯ ಹಕ್ಕನ್ನು ತಂದೆಯಿಂದ ಕುಮಾರಿ ಹೆಸರಿಗೆ ವರ್ಗಾಯಿಸುವುದಾಗಿ ಮನೆಯ ದಾಖಲೆಗಳನ್ನು ಕೊಂಡೊಯ್ದಿದ್ದ ಪುತ್ರ ಅಮಿತ್, ಅವುಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಹಾಗೂ ತನ್ನನ್ನು ಮನೆಯಿಂದ ಹೊರಹಾಕಿದ್ದಾಗಿ ದೂರಿನಲ್ಲಿ ಅವರು ವಿವರಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಪುತ್ರ ಹಾಗೂ ಸೊಸೆಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಜತೆಗೆ, ಮಗನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವ ಮನೆಯ ದಾಖಲೆಗಳನ್ನು ಕುಮಾರಿಯವರ ಹೆಸರಿಗೆ ವರ್ಗಾಯಿ ಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ ಎಂದು ಇನ್‌ಸ್ಪೆಕ್ಟರ್ ಎ. ನರಸಿಂಹ ಸ್ವಾಮಿ ತಿಳಿಸಿದ್ದಾರೆ.