Advertisement

ಪಾಪಿಗಳ ಸಂಹರಿಸಿ ಹೀರೋ ಆದ ಸಜ್ಜನರ

10:25 AM Dec 08, 2019 | mahesh |

ಹುಬ್ಬಳ್ಳಿ: ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ನಾಲ್ವರು ಪಾಪಿಗಳ ಎನ್‌ಕೌಂಟರ್‌ ನೇತೃತ್ವ ವಹಿಸಿದ್ದ, ಕನ್ನಡಿಗ ವಿಶ್ವನಾಥ ಸಜ್ಜನರ, ದೇಶದ “ಹೀರೋ’ ಆಗಿ ಹೊರಹೊಮ್ಮಿದ್ದಾರೆ. ಸಜ್ಜನರ ನಡೆಸಿದ ಎರಡು ಮಹತ್ವದ ಎನ್‌ಕೌಂಟರ್‌ಗಳಲ್ಲೂ ಆಂಧ್ರ ಹಾಗೂ ದೇಶಾದ್ಯಂತ ಮೆಚ್ಚುಗೆ-ಸಂಭ್ರಮಾಚಣೆ ವ್ಯಕ್ತವಾಗಿದೆ. ವಿಶ್ವನಾಥ ಸಜ್ಜನರ ಪ್ರಸ್ತುತ ಸೈಬರಾಬಾದ್‌ ಪೊಲೀಸ್‌ ಆಯುಕ್ತರಾಗಿದ್ದಾರೆ. ಪಶು ವೈದ್ಯೆ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಎನ್‌ಕೌಂಟರ್‌
ಮೂಲಕ ಅವಿಭಜಿತ ಆಂಧ್ರಪ್ರದೇಶಕ್ಕೆ ಸೀಮಿತವಾಗಿದ್ದ ಸಜ್ಜನರ ಸಾಹಸ ಕೀರ್ತಿ, ಇಡೀ ದೇಶಕ್ಕೆ ವ್ಯಾಪಿಸುವಂತಾಗಿದೆ.

Advertisement

ಕನ್ನಡದ ಹೆಮ್ಮೆಯ ಪುತ್ರ: ವಿಶ್ವನಾಥ ಸಜ್ಜನರ ಅವಿಭಜಿತ ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌
ಸ್ಪೆಷಲಿಸ್ಟ್‌ ಹಾಗೂ ಖಡಕ್‌ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದಾರೆ. ಕನ್ನಡದ ಹೆಮ್ಮೆಯ ಪುತ್ರರೊಬ್ಬರು
ತೆಲುಗು ನೆಲದಲ್ಲಿ ವಿಜೃಂಭಿಸುತ್ತಿರುವುದು, ಅಲ್ಲಿನ ಕಾನೂನು-ಸುವ್ಯವಸ್ಥೆ ಸಮರ್ಪಕ ನಿರ್ವಹಣೆ
ನಿಟ್ಟಿನಲ್ಲಿ ಮೆಚ್ಚುಗೆ ರೂಪದ ಕಾರ್ಯ ನಿರ್ವಹಿಸುತ್ತಿರುವುದು ಸಹಜವಾಗಿಯೇ ಕನ್ನಡ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

ವಿಶ್ವನಾಥ ಸಜ್ಜನರ ಮೂಲತ: ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿಯವರಾಗಿದ್ದು, ನಂತರ ಅವರ
ಕುಟುಂಬ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದರಿಂದ ಪ್ರೌಢಶಿಕ್ಷಣವನ್ನು ಹುಬ್ಬಳ್ಳಿಯ ವಿಜಯನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪಿಯು ಹಾಗೂ ಪದವಿ ಶಿಕ್ಷಣವನ್ನು ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿನಲ್ಲಿ ಮುಗಿಸಿದ್ದರು. ಮುಂದೆ, ಧಾರವಾಡದ ಕವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವ ಗುಣ ಹೊಂದಿದ್ದ ಅವರು, ರಾಜಕೀಯಕ್ಕೆ ವಾಲಬಹುದು
ಎಂಬುದು ಹಲವರ ನಿರೀಕ್ಷೆ ಇತ್ತಾದರೂ, ಆಡಳಿತಾತ್ಮಕ ಸೇವೆ ಅವರನ್ನು ಸೆಳೆದಿತ್ತು. ದೆಹಲಿಗೆ
ತೆರಳಿ ಐಎಎಸ್‌ ಕೋಚಿಂಗ್‌ ಪಡೆದಿದ್ದರಾದರೂ, 1996ರಲ್ಲಿ ಐಪಿಎಸ್‌ಗೆ ಆಯ್ಕೆಯಾಗಿದ್ದು,
ಆಂಧ್ರಪ್ರದೇಶ ಕೇಡರ್‌ ಅಧಿಕಾರಿಯಾಗಿದ್ದರು. ಆಂಧ್ರಪ್ರದೇಶದಲ್ಲಿ ಅತ್ಯಂತ ಸೂಕ್ಷ್ಮ ವೆಂದೇ ಪರಿಗಣಿಸಲ್ಪಡುವ ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಆರಂಭಿಸಿದ್ದರು.

ಎರಡು ಎನ್‌ಕೌಂಟರ್‌ಗಳಲ್ಲೂ ಮೆಚ್ಚುಗೆ: ಅವಿಭಜಿತ ಆಂಧ್ರಪ್ರದೇಶದಲ್ಲಿ ಸಜ್ಜನರ ಅವರು
ಅನಂತಪುರ, ವಾರಂಗಲ್‌, ನಲ್ಗೊಂಡ ಇನ್ನಿತರ ಕಡೆ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದು, ಆಂಧ್ರಪ್ರದೇಶ
ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯಿಸಿದ ನಂತರ ತೆಲಂಗಾಣ ರಾಜ್ಯದ ಪೊಲೀಸ್‌
ಅಧಿಕಾರಿಯಾಗಿ ಐಜಿ ಕೇಡರ್‌ಗೆ ಬಡ್ತಿ ಹೊಂದಿದ್ದರು. 2018ರ ಮಾರ್ಚ್‌ನಲ್ಲಿ ಸೈಬರಾಬಾದ್‌ ಪೊಲೀಸ್‌ ಆಯುಕ್ತರಾಗಿ ನೇಮಕಗೊಂಡಿದ್ದರು.

ವಾರಂಗಲ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ 2008ರಲ್ಲಿ ಸಜ್ಜನರ
ನಡೆಸಿದ ಆ ಒಂದು ಎನ್‌ಕೌಂಟರ್‌, ಅವರನ್ನು ಇಡೀ ಅವಿಭಜಿತ ಆಂಧ್ರಪ್ರದೇಶದ “ಹೀರೋ’ನನ್ನಾಗಿ ಮಾಡಿತ್ತು. 2008ರಲ್ಲಿ ಯುವತಿಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಆ್ಯಸಿಡ್‌ ದಾಳಿ ಮಾಡಿದ್ದರು.
ಈ ಪ್ರಕರಣ ಇಡೀ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ
ವಿರೋಧಕ್ಕೆ ಕಾರಣವಾಗಿತ್ತು. ಘಟನೆ ನಡೆದ ಕೇವಲ ಎರಡು ದಿನಗಳಲ್ಲಿಯೇ ಜಿಲ್ಲಾ ಪೊಲೀಸ್‌
ವರಿಷ್ಠಾಧಿಕಾರಿಯಾಗಿದ್ದ ಸಜ್ಜನರ, ಪ್ರಕರಣದ ಮೂವರು ಆರೋಪಿಗಳಾದ ಶ್ರೀನಿವಾಸ, ಹರಿಕೃಷ್ಣ
ಹಾಗೂ ಸಂಜಯ ಅವರನ್ನು ಎನ್‌ಕೌಂಟರ್‌ ಮಾಡಿದ್ದರು. ಈ ಎನ್‌ಕೌಂಟರ್‌ಗೆ ಇಡೀ ಆಂಧ್ರಪ್ರದೇಶದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ 2019, ನ.27ರಂದು ಹೈದರಾಬಾದ್‌ ಹೊರವಲಯದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರದ ನಾಲ್ವರು ದುಷ್ಕರ್ಮಿಗಳ ಎನ್‌ ಕೌಂಟರ್‌ಗೆ ನೇತೃತ್ವ ವಹಿಸಿದ್ದು ಸಹ ವಿಶ್ವನಾಥ ಸಜ್ಜನರ. ಈ ಕಾರ್ಯಕ್ಕೆ ಇಡೀ ದೇಶಾದ್ಯಂತ ಬಹುದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಅವಿಭಜಿತ ಆಂಧ್ರಪ್ರದೇಶ, ನಕ್ಸಲ್‌ ಪೀಡಿತವಾಗಿತ್ತು. ಆ ಸಂದರ್ಭದಲ್ಲೂ ಸಜ್ಜನರ, ನಕ್ಸಲ್‌
ನಿಗ್ರಹದಲ್ಲಿ ತಮ್ಮದೇ ವಿಶಿಷ್ಟ ಸಾಧನೆ ತೋರಿದ್ದರು. ಸ್ವಯಂ ಘೋಷಿತ ಉಗ್ರ ಸಂಘಟನೆಯೊಂದನ್ನು
ರಚಿಸಿಕೊಂಡು, ಭಯೋತ್ಪಾದಕ ಕೃತ್ಯಗಳಿಗೆ ಮುಂದಾಗಿದ್ದ ಐವರನ್ನು ದಮನ ಮಾಡಿದ್ದರು.
ಮಾದಕದ್ರವ್ಯ ಮಾರಾಟ ದಂಧೆ, ಜಪಾನ್‌ ಲೈಫ್ ಹೆಸರಲ್ಲಿ ಜನರಿಗೆ ಟೋಪಿ ಪ್ರಕರಣ, ಸೈಬರ್‌ ಕ್ರೈಂ
ವಿಷಯವಾಗಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಶುಕ್ರವಾರ
ನಡೆದ ನಾಲ್ವರು ಪಾಪಿಗಳ ಎನ್‌ಕೌಂಟರ್‌ ಸಜ್ಜನರ ಅವರಿಗೆ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಹೆಸರು
ತಂದುಕೊಟ್ಟಿದೆ.

ಕಾಲೇಜು ಸ್ನೇಹಿತ ವಿಶ್ವನಾಥ ಸಜ್ಜನರ ಶಿಸ್ತಿನ ಅಧಿಕಾರಿ ಎಂಬುದಕ್ಕೆ ಹೆಮ್ಮೆ ಇದೆ. ಸೈಬರ್‌ ಅಪರಾಧದಲ್ಲಿ ಹೆಚ್ಚಿನ ನೈಪುಣ್ಯತೆ ತೋರಿದ್ದರು. ಉನ್ನತ ಸ್ಥಾನದಲ್ಲಿದ್ದರೂ ಅತ್ಯಂತ ಸರಳ ವ್ಯಕ್ತಿತ್ವ
ಅವರದ್ದು, ಇಂದಿಗೂ ನನ್ನೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಹುಬ್ಬಳ್ಳಿಗೆ ಬಂದಾಗಲೊಮ್ಮೆ ಭೇಟಿಯಾಗುತ್ತೇವೆ. ಈ ಎನ್‌ಕೌಂಟರ್‌ ನೇತೃತ್ವ ವಹಿಸಿದ್ದವನು ನನ್ನ ಸ್ನೇಹಿತ ಹಾಗೂ ಕನ್ನಡದ ಪುತ್ರ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ.
– ವೀರಣ್ಣ ಸವಡಿ, ಮಾಜಿ ಮಹಾಪೌರ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next