Advertisement

ಹೈಬ್ರಿಡ್‌ ಗಾಯಕ್ಕೆ ತಿಪ್ಪೆಗೊಬ್ಬರ ಮುಲಾಮು

09:13 AM Jul 23, 2019 | Sriram |

ನೈಸರ್ಗಿಕ ಕೃಷಿಕ ಎಂದೇ ಹೆಸರಾಗಿರುವ ಕಲ್ಲಪ್ಪ ನೇಗಿನಹಾಳ ಹಿಂದೆ ಹಾಗಿರಲಿಲ್ಲ. ಆಧುನಿಕತೆಯನ್ನು ಮೈಗೂಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ಹಳೆಯ ಪದ್ಧತಿಗಳನ್ನು ನಿಲ್ಲಿಸಿ ವಿನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ತಂದೆಯವರಿಗೆ ಒತ್ತಾಯ ಮಾಡುತ್ತಿದ್ದರು. ಆದರೆ, ಪಕ್ಕಾ ಪರಿಸರವಾದಿಯಾಗಿದ್ದ ಅವರ ತಂದೆ ಪಂಡಿತಪ್ಪ ನೇಗಿನಹಾಳ ಅವರಿಗೆ ಸಾಂಪ್ರದಾಯಿಕ ಕೃಷಿಯ ಮೇಲೆ ತುಂಬಾ ಅಭಿಮಾನ. ತನ್ನ ಹೊಲದಲ್ಲಿಯೇ ಬೆಳೆದ ಬೀಜ ಬಿತ್ತುವ, ತನ್ನ ಕೊಟ್ಟಿಗೆಯಲ್ಲಿ ಉತ್ಪಾದನೆಯಾಗುವ ಗೊಬ್ಬರವನ್ನೇ ಬಳಸಬೇಕೆನ್ನುವುದು ಅವರ ನಿರ್ಧಾರವಾಗಿತ್ತು. ಇತ್ತ, ನಾವು ಮಾತ್ರ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದಿದ್ದೇವೆ ಎಂದು ಕಲ್ಲಪ್ಪ ಬೇಸರ ಪಟ್ಟುಕೊಳ್ಳುತ್ತಿದ್ದರು.

Advertisement

ಕುಸಿದ ಹೈಬ್ರಿಡ್‌ ಗೋಪುರ
ತಂದೆಯವರು ತೀರಿಕೊಂಡ ನಂತರ ಕುಟುಂಬ ನಿರ್ವಹಣೆಯ ನೊಗ ಕಲ್ಲಪ್ಪನವರ ಹೆಗಲ ಮೇಲೆ ಬಿತ್ತು. ಮೂರು ಎಕರೆ ಜಮೀನು, ಎರಡು ಆಕಳು, ಎರಡು ಎಮ್ಮೆ, ಎರಡು ಹೋರಿ, ಎರಡು ಎತ್ತುಗಳನ್ನು ತಂದೆಯವರು ಬಿಟ್ಟು ಹೋಗಿದ್ದರು. ದೇಶೀಯ ತಳಿಯ ಆರು ವಿಧದ ಬಿತ್ತನೆ ಬೀಜಗಳು ಮನೆಯ ಅಟ್ಟದಲ್ಲಿದ್ದವು. ದೇಶೀಯ ತಳಿಯ ಕಾಳುಕಡ್ಡಿಗಳ ಬೀಜ ಸಂಗ್ರಹ ಮನೆಯ ಅಟ್ಟದಲ್ಲಿ ಜೋಪಾನವಾಗಿತ್ತು. ಆದರೆ ಕಲ್ಲಪ್ಪ ಅವ್ಯಾವನ್ನೂ ಮುಟ್ಟಲಿಲ್ಲ. ಆಧುನಿಕತೆಗೆ ತೆರೆದುಕೊಂಡರು.

ಹತ್ತಿ ಹಣದ ಬೆಳೆ ಎಂದು ನಂಬಿದ್ದ ವರ್ಷಗಳವು. ಅದೊಮ್ಮೆ ಕಲ್ಲಪ್ಪ ನೇಗಿನಹಾಳ ಮೂರು ಎಕರೆಯಲ್ಲಿ ಹೈಬ್ರಿಡ್‌ ಹತ್ತಿ ಬೆಳೆದಿದ್ದರು. ಇಳುವರಿ ಬಂದ ಲೆಕ್ಕದಲ್ಲಿ ಕಾಸಿನ ಕಂತೆ ತನ್ನ ಕಿಸೆಗೆ ಬೀಳಬಹುದೆಂಬ ಲೆಕ್ಕಾಚಾರ ಕಲ್ಲಪ್ಪನದು. ಆದರೆ, ಅವನಿಗೆ ಆಘಾತವೊಂದು ಎದುರಾಗಿತ್ತು. ಮಾರುಕಟ್ಟೆಯಲ್ಲಿ ಹತ್ತಿಯ ದರ ಬಿದ್ದು ಹೋಗಿತ್ತು. ಹೈಬ್ರಿಡ್‌ನಿಂದ ಗೆಲ್ಲಬಹುದು ಎನ್ನುವ ಆಶಾಗೋಪುರ ಆವತ್ತೇ ನುಚ್ಚು ನೂರಾಗಿತ್ತು. ಮನೆಗೆ ತೆರಳಿ, ತಂದೆ ಅಟ್ಟದಲ್ಲಿ ಬಿಟ್ಟು ಹೋದ ಬೀಜಗಳನ್ನು ಹುಡುಕಿ ಮಣ್ಣಿಗೆ ಸೇರಿಸಿದರು. ಅಂದಿನಿಂದ ಇಂದಿನವರೆಗೂ ತಂದೆಯ ಹಾದಿಯಲ್ಲಿಯೇ ನಡೆದು ನೈಸರ್ಗಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಾ ಬಂದಿದ್ದಾರೆ.

24 ತಳಿ ಜೋಳಗಳು
ದೇಸಿ ತಳಿಯ ಕೃಷಿ ಮಾಡಬೇಕೆಂದು ರ್ನಿಧರಿಸಿದ ನಂತರ ಕಲ್ಲಪ್ಪನವರು ಹೋದಲ್ಲಿ ಬಂದಲ್ಲಿ ಅಪರೂಪದ ತಳಿಯ ಬೀಜಗಳನ್ನು ಆಯ್ದು ತರತೊಡಗಿದರು. ಪರಿಣಾಮ, ಕೆಲವೇ ವರ್ಷಗಳಲ್ಲಿ 24 ತಳಿಯ ಬೀಜಗಳು ಅವರ ಬೀಜ ಸಂಗ್ರಹದಲ್ಲಿ ಸೇರಿದ್ದವು. ಮುಂಗಾರಿನಲ್ಲಿ ಸಿರಿಧಾನ್ಯ, ಸೋಯಾಬೀನ್‌, ಶೇಂಗಾ, ಅಲಸಂದೆ, ಉದ್ದು, ಹೆಸರು ಕೃಷಿ ಮಾಡುವ ಕಲ್ಲಪ್ಪ ಹಿಂಗಾರಿನಲ್ಲಿ ಸಂಪೂರ್ಣ ಜೋಳ ಕೃಷಿಗೆ ತಮ್ಮ ಜಮೀನನ್ನು ಮೀಸಲಿಡುತ್ತಾರೆ. ನೈಸರ್ಗಿಕ ಗೊಬ್ಬರದ ಬಳಕೆ ಮುಂಗಾರಿನ ಬೆಳೆಗಳಿಗೆ ಮಾತ್ರ. ಮುಂಗಾರು ಬೆಳೆ ಕಟಾವಾಗುತ್ತಿದ್ದಂತೆ ಹಿಂಗಾರಿನಲ್ಲಿ ಭೂಮಿ ಉಳುಮೆಯ ಕೆಲಸ ಪೂರೈಸಿ ನೇರವಾಗಿ ಬಿತ್ತನೆ ಬೀಜ ಬಿತ್ತುತ್ತಾರೆ. ಗೊಬ್ಬರದ ನೆರವಿಲ್ಲದೆಯೇ ಮುಂಗಾರಿನಲ್ಲಿ ಮಣ್ಣಿಗೆ ಸೇರಿಸಿದ ಗೊಬ್ಬರದಿಂದ ಜೋಳಗಳು ಬೆಳೆಯುತ್ತವೆ. ಫ‌ಸಲನ್ನು ನೀಡುತ್ತವೆ.

ಕುರಿ ನಿಲ್ಲಿಸುತ್ತಾರೆ
ಮುಂಗಾರು ಬಿತ್ತನೆಗೆ ಮುನ್ನ ಸಂಪೂರ್ಣ ಹೊಲದಲ್ಲಿ ಕುರಿ ತರುಬಿಸುತ್ತಾರೆ. ಎಕರೆಯೊಂದಕ್ಕೆ ಮೂರು ಸಾವಿರ ಕುರಿಗಳು ಎರಡು ವಾರಗಳ ಕಾಲ ನಿಂತಿರುತ್ತವೆ. ಕುರಿಯ ಹಿಕ್ಕೆ, ಮೂತ್ರ ಭೂಮಿಯಲ್ಲಿ ಇರುವಂತೆಯೇ ಅದರ ಜೊತೆಗೆ ಕೊಟ್ಟಿಗೆಯ ತಿಪ್ಪೆಗೊಬ್ಬರ, ಎರೆಗೊಬ್ಬರವನ್ನು ಸೇರಿಸಿ ಉಳುಮೆ ಮಾಡಲಾಗುತ್ತದೆ. ನಂತರ ಬಿತ್ತನೆ ಆರಂಭ. ದೇಸಿ ತಳಿಯ ಬೀಜಗಳಾಗಿದ್ದರಿಂದ ರೋಗ ಬರದು. ಕೀಟ, ಹುಳ ಹುಪ್ಪಡಿಗಳು ಹತ್ತಿರ ಸುಳಿಯದು.

Advertisement

ಬೆಳೆಗಳಿಗೆ ಕಷಾಯ!
ಒಂದು ವೇಳೆ ರೋಗ ಬಾಧಿಸಿದರೆ ದೇಸಿ ಕಷಾಯವನ್ನು ಸಿಂಪಡಿಸುತ್ತಾರೆ. ಕಷಾಯ ತಯಾರಿಗೆ ಬೇವಿನ ಸೊಪ್ಪು, ಎಕ್ಕೆ ಸೊಪ್ಪು, ಅಡಸಾಲ ಸೊಪ್ಪು, ಹಣಗಲಿ, ಮದಗಣಕಿ ದಂಡ, ಎಳೆ ಕಾಂಗ್ರೆಸ್‌ ಗಿಡಗಳನ್ನು ಬಳಸುತ್ತಾರೆ. ಇಷ್ಟು ಸೊಪ್ಪುಗಳನ್ನು ಸಣ್ಣದಾಗಿ ಹೆಚ್ಚಿ ಗೋಮೂತ್ರ, ಅರಳಿ ಅಥವಾ ಕಳ್ಳಿ ಗಿಡದ ಬುಡದಲ್ಲಿನ ಮಣ್ಣು, ದ್ವಿದಳ ಧಾನ್ಯದ ಹಿಟ್ಟು, ಜವಾರಿ ಬೆಳ್ಳುಳ್ಳಿ, ಜವಾರಿ ಮೆಣಸಿನಕಾಯಿ ಹಾಕಿ ದೊಡ್ಡದಾದ ಬ್ಯಾರಲ್‌ನಲ್ಲಿÉ ಮುಚ್ಚಿಡುತ್ತಾರೆ. ದಿನಕ್ಕೊಮ್ಮೆ ತಿರುವುತ್ತಾ ಎರಡು ವಾರಗಳ ಕಾಲ ಸಂಗ್ರಹಿಸಿ ತಯಾರಿಸಿದ ದ್ರಾವಣವನ್ನು ಆರು ತಿಂಗಳವರೆಗೆ ಸಂಗ್ರಹಿಸಿಟ್ಟುಕೊಂಡು ಸಿಂಪಡಣೆಗೆ ಬಳಸುತ್ತಾರೆ.

– ಜೈವಂತ ಪಟಗಾರ, ಧಾರವಾಡ

ರೈತ: ಕಲ್ಲಪ್ಪ ನೇಗಿಹಾಳ
ಸ್ಥಳ: ಚಿಕ್ಕಬಾಗೇವಾಡಿ, ಬೈಲಹೊಂಗಲ
ಝೀರೋ ಬಜೆಟ್‌ ಪಾರ್ಮಿಂಗ್‌ since 2004

Advertisement

Udayavani is now on Telegram. Click here to join our channel and stay updated with the latest news.

Next