Advertisement

ಸೀಸನ್‌ನಲೂ ಕೈಗೆಟುಕದ ಅವರೇಕಾಯಿ! ಮಾರುಕಟ್ಟೆಗೆ ಅವರೆ ಸರಬರಾಜು ಇಳಿಮುಖ, ದರ ಹೆಚ್ಚಳ

02:55 PM Jan 13, 2022 | Team Udayavani |

ದೊಡ್ಡಬಳ್ಳಾಪುರ: ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಈ ಬಾರಿ ಅವರೇಕಾಯಿ ಇಳುವರಿ ಕಡಿಮೆಯಾಗಿದ್ದು, ಅವರೇಕಾಯಿ ಸೀಸನ್‌ನಲ್ಲಿಯೂ ದರ ಕೈಗೆಟುಕದಂತಾಗಿದೆ. ನವೆಂಬರ್‌, ಡಿಸೆಂಬರ್‌ ಮಾಸ ಬಂತೆಂದರೆ ಅವರೇಕಾಯಿ ಸೀಸನ್‌ ಶುರು. ಮಾರುಕಟ್ಟೆ ಪ್ರದೇಶದಲ್ಲಷ್ಟೇ ಅಲ್ಲದೇ ಜನಸಂಚಾರ ಪ್ರದೇಶಗಳಲ್ಲಿ ಹಾಗೂ ಮನೆಗಳ ಮುಂದೆ ಅವರೇಕಾಯಿ ಹೊತ್ತು ತಂದು ವ್ಯಾಪಾರ ಮಾಡುವ ದೃಶ್ಯ ಈ ಸೀಸನ್‌ನಲ್ಲಿ ಸಾಮಾನ್ಯ. ಆದರೆ, ಮಾರುಕಟ್ಟೆಯಲ್ಲಿ ಅವರೇಕಾಯಿ ಸರಬರಾಜು ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗಿದೆ. ತಾಲೂಕಾದ್ಯಂತ ರಾಗಿ ಕೊಯ್ಲು ಆಗಿರುವ ಹೊಲಗಳಲ್ಲಿ ಅವರೇಕಾಯಿ ಗಿಡಗಳ ತುಂಬಾ ಅವರೆ ಹೂವುಗಳ ಗೊನೆಗಳು ಕಾಣುತ್ತಿದ್ದವು. ಆದರೆ, ಈಗ ರಾಗಿ ಕೊಯ್ಲು ಮಾಡಲು ಯಂತ್ರ ಬಳಸುವುದರಿಂದ ರಾಗಿ ಪೈರುಗಳ ಮಧ್ಯೆ ಅವರೆ ಬೆಳೆಸುವುದು ಕ್ರಮೇಣ ಕಡಿಮೆಯಾಗುತ್ತಿದೆ.

Advertisement

ಸೊಗಡು ಇರುವ ಒಂದು ಕೆ.ಜಿ. ಅವರೇಕಾಯಿ ಬೆಲೆ 50 ರೂ.ಗಳಿಂದ 70 ರೂ. ಗಳವರೆಗೆ ಇದೆ. ಇನ್ನು ಇದುಕಿದ ಅವರೇ ಬೇಳೆಯಂತೂ ಲೀಟರ್‌ಗೆ 200 ರೂ.ಗಳವರೆಗೆ ಇದೆ. ಈ ಬಾರಿ ಹೊಲಗಳಲ್ಲಿ ಅವರೇಕಾಯಿ ಇಳುವರಿ ಕಡಿಮೆ. ದೂರದ ಚಿತ್ರದುರ್ಗ ಮೊದಲಾದ ಕಡೆಗಳಿಂದ ಅವರೇಕಾಯಿ ಮೊದಲಿನಂತೆ ಹೆಚ್ಚಾಗಿ ಬರುತ್ತಿಲ್ಲದಿರುವುದು ಸಹ ಬೆಲೆ ದುಬಾರಿಯಾಗಲು ಕಾರಣವಾಗಿದೆ. ನವಂಬರ್‌ ಮಳೆಯಿಂದ ಅವರೆ ಗಿಡದ ಹೂವುಗಳು ಉದುರಿ ಹೋಗಿದ್ದು, ಇಳುವರಿ ಕಡಿಮೆಯಾಗಿದೆ ಎಂದು ವಡ್ಡರಹಳ್ಳಿಯ ರೈತ ಶ್ರೀನಿವಾಸರೆಡ್ಡಿ ಹೇಳುತ್ತಾರೆ.

ಹುಳುಕು ಹೆಚ್ಚಾಗಿ ಬಂದರೆ ನಷ್ಟ: ಹೆಚ್ಚು ಮಂಜು ಮುಸುಕಿದ ವಾತಾವರಣ ಅವರೇಕಾಯಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ, ಈಗ ಹವಾಮಾನ ಅವರೆಗೆ ಪೂರಕವಾಗಿದೆ. ಈ ನಮ್ಮ ಪ್ರದೇಶದ ಹೊಲಗಳಲ್ಲಿ ಅವರೇಕಾಯಿ ಇಳುವರಿ ಹೆಚ್ಚಾಗಲಿದೆ ಎನ್ನುತ್ತಾರೆ ರೈತರು. ವ್ಯಾಪಾರ ಇನ್ನು ಚುರುಕಾಗಬೇಕು. ಕಾಯಿಯಲ್ಲಿ ಹುಳುಕು ಹೆಚ್ಚಾಗಿ ಬಂದರೆ ನಷ್ಟವಾಗುವ ಸಂಭವವೂ ಇರುತ್ತದೆ ಎಂದು ಅವರೇಕಾಯಿ ವ್ಯಾಪಾರಿಗಳು ಹೇಳುತ್ತಾರೆ. ದೊಡ್ಡಬಳ್ಳಾಪುರದಲ್ಲಿ ಅವರೇಕಾಯಿ ಹಾಕಿದ ಅಡುಗೆಗಳು ತಮ್ಮದೇ ಆದ ವೈಶಿಷ್ಟéತೆ ಹೊಂದಿವೆ. ವಿಶೇಷ ಸಂದರ್ಭ, ಔತಣಕೂಟಗಳಲ್ಲಿ ಅವರೇಕಾಯಿಯ ಇದುಕು ಬೇಳೆ ಸಾರು ಸಾಮಾನ್ಯವಾಗಿದೆ. ದೇವಾಂಗ ಸಮುದಾಯ ಮಾಡುವ ಈ ಸಾರಿನ ರುಚಿ ಪ್ರಸಿದ್ಧವೂ ಹೌದು. ಬೆಲೆ ಹೆಚ್ಚಾದರೂ ಸಹ ಕೊಳ್ಳುವವರಿದ್ದಾರೆ.

ಅವರೆ ಕೃಷಿ : ಅವರೆ ಬೆಳೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಜನಪ್ರಿಯವಾಗಿದೆ. ಇದು ನಮ್ಮ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮಖ್ಯವಾದ ದ್ವಿದಳ ಧಾನ್ಯದ ಬೆಳೆಗಳಲ್ಲೊಂದು. ಈ ಬೆಳೆಯನ್ನು ಸಾಮಾನ್ಯವಾಗಿ ರಾಗಿ ಬೆಳೆಯೊಂದಿಗೆ ಅಂತರ, ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಹಾಗೂ ವರ್ಷವಿಡೀ ಬೆಳೆಯಬಹುದಾದ ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಅವರೆ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವುದು ಹೆಚ್ಚಾಗಿ ಕಂಡು ಬಂದಿದೆ. ಈ ಬೆಳೆಯಿಂದ ಬೇಳೆ ಅಲ್ಲದೆ ಹಸಿರು ತರಕಾರಿ ಸಹ ಪಡೆಯಬಹುದಾಗಿದೆ.

ಒಣ ಬೀಜದ ಇಳುವರಿ: ಅವರೆ ಬೆಳೆಯು ದ್ವಿದಳ ಧಾನ್ಯಗಳಲ್ಲಿ ಒಂದು ಮುಖ್ಯ. ತರಕಾರಿ ಹಾಗೂ ಮೇವಿನ ಬೆಳೆಯಾಗಿ ಬೆಳೆಯುತ್ತಾರೆ. ಅವರೆ ಸ್ವಕೀಯ ಪರಾಗ‌ ಸ್ಪರ್ಶದಿಂದ ಬೀಜ ಕಟ್ಟತ್ತದೆ. ವರ್ಷದ ಎಲ್ಲ ಕಾಲಗಳಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದಾಗಿದ್ದು, ಸರಾಸರಿ ಪ್ರತಿ ಹೆಕ್ಟೇರಿಗೆ ನೀರಾವರಿಯಲ್ಲಿ 6 ರಿಂದ 8 ಕ್ವಿಂಟಲ್‌ನಷ್ಟು ಒಣ ಬೀಜದ ಇಳುವರಿ ಪಡೆಯಬಹುದು.

Advertisement

ಅವರೇಕಾಯಿ ಸೊಗಡು

ಸ್ಥಳೀಯವಾಗಿ ಬೆಳೆಯುವ ಅವರೇಕಾಯಿ ಹೆಚ್ಚು ಸೊಗಡಿದ್ದು, ಅವರೇ ಬೇಳೆ ತನ್ನದೇಯಾದ ವಿಶಿಷ್ಟತೆ ಹೊಂದಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಗೆ ತಾಲೂಕಿನಿಂದ ಟನ್‌ಗಟ್ಟಲೇ ಅವರೆ ಸರಬರಾಜಾಗುತ್ತದೆ. ಅಂತೆಯೇ ದೊಡ್ಡಬಳ್ಳಾಪುರದ ಮಾರುಕಟ್ಟೆಗೆ ಬೇರೆ ಕಡೆಗಳಿಂದ ಅಂದರೆ ಗೌರಿಬಿದನೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಕಡೆಯಿಂದ ಮಣಿ, ಡಬ್ಬೆ ಹಾಗೂ ಬುಡ್ಡ ತಳಿಗಳು ಬರುತ್ತಿವೆ. ಪ್ರತಿದಿನ 4 ರಿಂದ 5 ಟನ್‌ ಅವರೇಕಾಯಿ ವಹಿವಾಟು ನಡೆಯುತ್ತಿದ್ದುದು ಈಗ 2 ಟನ್‌ಗೆ ಇಳಿದಿದೆ.

– ಡಿ. ಶ್ರೀಕಾಂತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next