ಹೂವಿನಹಿಪ್ಪರಗಿ: ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ನಾನ್ನುಡಿಯಂತೆ ಸತತ ಪ್ರಯತ್ನದಿಂದ ಬಡತನದಲ್ಲೂ ಹತ್ತನೇಯ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿರುವ ಗ್ರಾಮೀಣ ಪ್ರತಿಭೆ ಮಲ್ಲಮ್ಮ ರತ್ತಾಳ ಪಾಲಕರು ಮತ್ತು ಕಲಿತ ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಹೌದು, ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಸರಕಾರಿ ಪ್ರೌಢ (ಆರ್.ಎಂ.ಎಸ್.ಸಿ) ಶಾಲೆಯ ವಿದ್ಯಾರ್ಥಿನಿ ಮಲ್ಲಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93.44 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಅನಕ್ಷರಸ್ಥ ತಂದೆ-ತಾಯಿಯ ಕನಸು ನನಸು ಮಾಡಿದ್ದಾಳೆ. ಯಾವುದೇ ಟ್ಯೂಷನ್ ಹಾಗೂ ಹೆಚ್ಚನ ವಿದ್ಯಾಭ್ಯಾಸ ಮಾಡದೇ ಶಾಲೆಯಲ್ಲಿನ ಪಾಠ ಕೇಳಿ 625ಕ್ಕೆ 584 ಅಂಕ ಪಡೆದಿದ್ದಾಳೆ.
ತಾಯಿಯೊಂದಿಗೆ ಕೆಲಸ: ಶಾಲೆಗೆ ರಜಾ ಇದ್ದ ಸಮಯದಲ್ಲಿ ತಾಯಿ ಜತೆ ಹೊಲಕ್ಕೆ ಹೋಗಿ ಕಸ, ಕಡ್ಡಿ ಸೇರಿದಂತೆ ಕೂಲಿ ಕೆಲಸದಲ್ಲಿ ತಾಯಿಯೊಂದಿಗೆ ಕೈಜೋಡಿಸುತ್ತಿದ್ದ ಮಲ್ಲಮ್ಮ. ತಂದೆ ದಿನ ನಿತ್ಯ ಟ್ರ್ಯಾಕ್ಟರ್‌ನಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಗಾಡಿ ಸಾಗಿಸುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ.
ಶಾಲೆಯ ಮುಖವನ್ನೆ ನೋಡದ ತಾವು ಕಲಿದೆಯಿದ್ದರೂ ನಮ್ಮ ಮಕ್ಕಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಕೂಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇವೆ. ನಮ್ಮ ಮಗಳ ಫಲಿತಾಂಶ ಕಂಡು ತುಂಬಾ ಸಂತೋಷವಾಗಿದೆ ಎಂದು ಹೇಳುತ್ತಾರೆ ಮಲ್ಲಮ್ಮನ ತಂದೆ ಶರಣಪ್ಪ.
ಸದಾ ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ ಓದುತ್ತಿದ್ದಳು. ಮಲ್ಲಮ್ಮ ಯಾವಾಗಲು ಪಾಠದ ಮೇಲೆ ಚರ್ಚೆ ಮಾಡಿ ಉತ್ತರ ಪಡೆಯುತ್ತಿದ್ದಳು. ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಅವಳ ಮುಂದಿನ ಜೀವನ ಸುಖೀಯಾಗಿರಲಿ.
•ಪ್ರದೀಪ ದೇಸಾಯಿ, ಸಹ ಶಿಕ್ಷಕ
ಕಡು ಬಡತನದಲ್ಲಿ ಬೆಳೆದು, ಶಾಲೆಗೆ ಬಿಡುವು ಇದ್ದಾಗ ನಮ್ಮ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ವಿದ್ಯಾಭ್ಯಾಸ ಮಾಡಿದ್ದರ ಪರಿಣಾಮ ಉತ್ತಮ ಅಂಕಗಳಿಸಿದ ತೃಪ್ತಿ ಇದೆ. ಆದರೆ ಓದಿರುವ ತಕ್ಕಂತೆ ಫಲಿತಾಂಶ ಬಂದಿಲ್ಲ. ನನಗೆ ಶೇ.95ಕ್ಕಿಂತ ಹೆಚ್ಚು ಅಂಕ ಬರಬೇಕಿತ್ತು. ಜೀವನದಲ್ಲಿ ಇಂಜಿನಿಯರ್ ಆಗುವ ಆಸೆ ಇದೆ.
•ಮಲ್ಲಮ್ಮ ರತ್ತಾಳ, ಸಾಧನೆಗೈದ ಬಾಲಕಿ