ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಅಧಿದೇವತೆ ಮುತ್ತಿನ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಾರಾವಿ ಗ್ರಾಮದಲ್ಲಿ ಎತ್ತುಗಳ ಪರೀಷೆ ನಡೆಯಿತು. ಈ ಪರೀಷೆಗೆ ವರ್ಷದಿಂದ ವರ್ಷಕ್ಕೆ ಎತ್ತುಗಳ ಸಂಖ್ಯೆ ಹೆಚ್ಚಾಗಿದೆ.
ಈ ವರ್ಷ ಸುಮಾರು 250ರಿಂದ 300 ಜೋಡಿ ಎತ್ತುಗಳು ಪರೀಷೆಗೆ ಬಂದಿವೆ. ಒಂದು ವಾರಗಳ ಕಾಲ ನಡೆಯುವ ಈ ಪರೀಷೆಯಲ್ಲಿ ಸಿಂಧನೂರು, ರಾಯಚೂರು, ಗಂಗಾವತಿ, ಕೋಲಾರ, ಬಳ್ಳಾರಿ, ಸಿರುಗುಪ್ಪ, ಸೀಮಾಂದ್ರ ಪ್ರದೇಶದ ಕರ್ನೂಲು, ಪತ್ತಿಕೊಂಡ, ಆಲೂರು, ಆದೋನಿ, ಹೊಳಗುಂದ, ಕೋಸಿY, ಹರಿವಾಣಂ, ಕೌತಾಳಂ ಮತ್ತು ತಾಲೂಕಿನ ರಾರಾವಿ, ಬಾಗೇವಾಡಿ, ಅಗಸನೂರು ಮತ್ತು ಬಳ್ಳಾರಿ ತಾಲೂಕಿನ ಬಸರಕೋಡು, ಮೋಕಾ ಮುಂತಾದ ಹಳ್ಳಿಗಳ ಕಿಲಾರಿ, ಹಳ್ಳಿಕಾರ, ಜವಾರಿ ತಳಿಯ ಹೋರಿಗಳು, ಎತ್ತುಗಳು ಈ ಜಾತ್ರೆಗೆ ಬಂದಿದ್ದವು.
ಕಿಲಾರಿ, ಹಳ್ಳಕಾರ, ಜವಾರಿ ಹೋರಿಗಳನ್ನು ಮಾರಾಟ ಮಾಡಲು ರಾಜ್ಯ ಸೇರಿದಂತೆ ಹೊರರಾಜ್ಯಗಳ ನೂರಾರು ರೈತರು ಮತ್ತು ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ಈ ಜಾತ್ರೆಯಲ್ಲಿ ಒಂದು ಜೋಡಿ ಎತ್ತುಗಳು ರೂ. 60 ಸಾವಿರದಿಂದ 2 ಲಕ್ಷ 50 ಸಾವಿರ ಮೌಲ್ಯದ ವರೆಗಿನ ಎತ್ತುಗಳು ಮಾರಾಟಕ್ಕೆ ಬಂದಿರುತ್ತವೆ. ಕೆಲ ರೈತರು ಈ ಪರೀಷೆಯಲ್ಲಿಯೇ ತಮ್ಮ ಒಕ್ಕಲುತನಕ್ಕೆ ಬೇಕಾದ ಎತ್ತುಗಳನ್ನು ಕೊಳ್ಳುವುದು ಮತ್ತು ಮಾರಾಟ ಮಾಡುವುದು ಸಾಮಾನ್ಯವಾಗಿದೆ.
ಜಾತ್ರೆಯಲ್ಲಿ ರೂ. 70ಲಕ್ಷದಿಂದ 1 ಕೋಟಿವರೆಗೆ ಈ ಪರೀಷೆಯಲ್ಲಿ ಎತ್ತುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ವ್ಯವಹಾರ ನಡೆಯುತ್ತದೆ. ಈ ಪರೀಷೆಗೆ ಬರುವ ಎತ್ತುಗಳಿಗೆ ಕುಡಿಯುವ ನೀರು ಮತ್ತು ಮೇವು, ಎತ್ತು ಮಾರಾಟಕ್ಕೆ ಬಂದ ರೈತರಿಗೆ ಊಟದ ವ್ಯವಸ್ಥೆಯನ್ನು ದೇವಸ್ಥಾನ ಆಡಳಿತ ಮಂಡಳಿಯವರು ಮಾಡಿದ್ದಾರೆ. ಆದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎತ್ತುಗಳು ಬಿಸಿಲಿನ ತಾಪಕ್ಕೆ ಬಳಲಿದಂತೆ ಕಾಣುತ್ತವೆ. ಆದ್ದರಿಂದ ಬಿಸಿಲಿನಿಂದ ರಕ್ಷಿಸಲು ನೆರಳಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಪರೀಷೆಗೆ ಬಂದ ರೈತರು ಅಭಿಪ್ರಾಯಿಸಿದರು.
ರೈತರು ತಮ್ಮ ಎತ್ತುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಪರೀಷೆಯಲ್ಲಿಯೇ ಖರೀದಿಸಿ ಎತ್ತುಗಳನ್ನು ಅಲಂಕರಿಸಿದ್ದು ಕಂಡುಬಂತು.