ಬೆಂಗಳೂರು: ದುಡಿಯುವ ಶಕ್ತಿ – ಸಾಮರ್ಥಯ ಹೊಂದಿದ್ದರೂ ವಿಚ್ಛೇದಿತ ಪತ್ನಿಯಿಂದ ಜೀವನಾಂಶ ಬೇಡುವುದು ಪತಿಯ “ಆಲಸ್ಯತನ’ವನ್ನು ತೋರಿಸುತ್ತದೆ ಎಂದು ಹೇಳಿರುವ ಹೈಕೋರ್ಟ್, ದುಡಿದು ಸಂಪಾದಿಸಲು ಸಮರ್ಥನಾಗಿರುವ ಪತಿಯು ಪತ್ನಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.
ಪತ್ನಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣ ನ್ಯಾಯಾಲಯ ರದ್ದುಪಡಿಸಿದ್ದಲ್ಲದೆ, ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಪತಿಯು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರಡಿ ಪತ್ನಿಯಿಂದ ಜೀವನಾಂಶ ಕೋರಿದ್ದಾರೆ. ಪತಿ ಅಥವಾ ಪತ್ನಿ ಇಬ್ಬರಲ್ಲಿ ಯಾರೇ ಇರಲಿ ಮತ್ತೊಬ್ಬರ ನೆರವು ಇಲ್ಲದೆ ಸಂಪಾದನೆ ಅಥವಾ ಜೀವನ ನಿರ್ವಹಣೆ ಸಾಧ್ಯವಿಲ್ಲ ಎಂದಾದಲ್ಲಿ ಮಾತ್ರ ಜೀವನಾಂಶ ಕೋರಬಹುದು ಎಂದು ಸೆಕ್ಷನ್ 24 ಹೇಳುತ್ತದೆ. ಈ ಸೆಕ್ಷನ್ “ಲಿಂಗ ತಟಸ್ಥತೆ’ (ಜಂಡರ್ ನ್ಯೂಟ್ರ್ಯಾಲಿಟಿ) ಹೊಂದಿದೆ.
ಪತ್ನಿಯಿಂದ ಜೀವನಾಂಶ ಕೋರಿದ ಪತಿಗೆ ದುಡಿಯಲು ಸಾಧ್ಯವಿಲ್ಲದಂತಹ ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆ ಕಾಣುತ್ತಿಲ್ಲ. ದುಡಿದು ಸಂಪಾದಿಸಲು ದೈಹಿಕ ಮತ್ತು ಮಾನಸಿಕ ಸಾಮರ್ಥಯ ಹೊಂದಿರುವ ಪತಿ ಕೋವಿಡ್-19 ಕಾಲದಲ್ಲಿ ಕೆಲಸ ಹೋಯಿತು ಎಂಬ ಕಾರಣ ಇಟ್ಟುಕೊಂಡು ಜೀವನಾಂಶ ಕೇಳುವುದು ಒಪ್ಪಲಾಗದು. ಈ ರೀತಿ ಪತ್ನಿಯಿಂದ ಪತಿ ಜೀವನಾಂಶ ಬೇಡುವುದು ಸೆಕ್ಷನ್ 24ರ ಆಶಯವನ್ನು “ಅಸಹ್ಯಗೊಳಿಸುವಂಹದ್ದು’ ಎಂದು ಹೈಕೋರ್ಟ್ ಹೇಳಿದೆ.