ಜನರನ್ನು ಬೇಗನೇ ಸೆಳೆಯುವಂತಹ ಕ್ಯಾಚಿ ಟೈಟಲ್ ಇಟ್ಟರೆ ಅದು ಸಿನಿಮಾಕ್ಕೆ ದೊಡ್ಡ ಪ್ಲಸ್ ಎಂದು ಭಾವಿಸಿಕೊಂಡೇ ಟೈಟಲ್ ಇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಆ ತರಹದ ಶೀರ್ಷಿಕೆಗಳ ಸಾಲಿಗೆ “ಪತಿಬೇಕು.ಕಾಮ್’ ಸಿನಿಮಾವೂ ಸೇರುತ್ತದೆ. ಹೌದು, “ಪತಿಬೇಕು.ಕಾಮ್’ ಎಂಬ ಸಿನಿಮಾವೊಂದು ಶುಕ್ರವಾರ ಆರಂಭವಾಗಿದೆ.
ರಾಜಕೀಯ ಮುಖಂಡ ವಿ.ಸೋಮಣ್ಣ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಎ.ಆರ್.ಶಾನ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ತರೆಲ ನನ್ಮಕ್ಳು’ ಚಿತ್ರವನ್ನು ನಿರ್ದೇಶಿಸಿದ್ದ ರಾಕೇಶ್ ಹಾಗೂ ಅವರ ಗೆಳೆಯರಾದ ಶ್ರೀನಿವಾಸ್, ಮಂಝುನಾಥ್, ವೀರೇಂದ್ರ ನಿರ್ಮಿಸುತ್ತಿದ್ದಾರೆ.
ಇದೊಂದು ನಾಯಕಿಪ್ರಧಾನ ಚಿತ್ರವಾಗಿದ್ದು, ಶೀತಲ್ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ “ಪತಿಬೇಕು.ಕಾಮ್’ನಲ್ಲಿ ಏನು ಹೇಳಲು ಹೊರಟಿದ್ದಾರೆಂಬ ಕುತೂಹಲ ಇರಬಹುದು. “ಮಧ್ಯಮ ವರ್ಗದ ಹೆಣ್ಣು ಮಗು ಹುಟ್ಟುವಾಗ ಖುಷಿಪಡುತ್ತದೆ. ಆದರೆ, ಸರಿಯಾದ ಸಮಯಕ್ಕೆ ಮಗಳಿಗೆ ಮದುವೆ ಮಾಡಲು ಆಗದೇ ಹೋದಾಗ ಪಾಲಕರು ಅನುಭವಿಸುವ ಚಿಂತೆ, ಯಾತನೆಯನ್ನು ಇಲ್ಲಿ ಹೇಳಲು ಹೊರಟಿದ್ದೇವೆ.
ಕಥೆ ತುಂಬಾ ಚೆನ್ನಾಗಿದೆ. ಸೂಕ್ಷ್ಮವಾದ ಅಂಶದೊಂದಿಗೆ ಸಾಗುವ ಕಥೆಯಲ್ಲಿ ಹೆಣ್ಣುಮಗಳೊಬ್ಬಳ ಹೋರಾಟ ಕೂಡಾ ಇದೆ’ ಎಂದು ಸಿನಿಮಾದ ಬಗ್ಗೆ ಹೇಳುತ್ತಾರೆ ನಿರ್ಮಾಪಕರಲ್ಲೊಬ್ಬರಾದ ರಾಕೇಶ್. ಚಿತ್ರಕ್ಕೆ ಹರ್ಷ ಸಂಗೀತ, ಯೋಗಿ ಛಾಯಾಗ್ರಹಣವಿದೆ. ಜುಲೈ 8 ರಿಂದ 32 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.