Advertisement

ಪತ್ನಿ ತಡವಾಗಿ ಏಳುತ್ತಿದ್ದಕ್ಕೆ ಠಾಣೆಗೆ ದೂರು  

12:03 PM Mar 14, 2023 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಪತ್ನಿಯ ವರ್ತನೆ ಸರಿಯಿಲ್ಲ, ಆಕೆಗೆ ಮೊಬೈಲ್‌ ಗೀಳು ಜಾಸ್ತಿ ಹೀಗೆ ಹಲವು ಕಾರಣಗಳನ್ನು ನೀಡಿ ಪೊಲೀಸ್‌ ಠಾಣೆಗೆ ದೂರುಗಳು ಬರುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪತಿ ತನ್ನ ಪತ್ನಿ ಬಹಳ ತಡವಾಗಿ ಎದ್ದೇಳುತ್ತಾಳೆ, ಯಾವುದೇ ಕೆಲಸ ಮಾಡುವುದಿಲ್ಲ ಎಂದು ಪೊಲೀಸ್‌ ಠಾಣೆ ಮೇಟ್ಟಿಲೇರಿದ್ದಾರೆ.

Advertisement

ಬಸವನಗುಡಿ ನಿವಾಸಿ ಕಮ್ರಾನ್‌ ಖಾನ್‌(39) ನೀಡಿದ ದೂರಿನ ಮೇರೆಗೆ ಆತನ ಪತ್ನಿ ಆಯೇಷಾ ಫ‌ರೀನ್‌, ಮಾವ ಆರೀಫ್ ಪಾಷಾ, ಅತ್ತೆ ಹೀನಾ ಕೌಸರ್‌, ಬಾವಮೈದುನಾ ಮೊಹಮ್ಮದ್‌ ಮೋಯಿನ್‌ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ?: “ದೂರುದಾರ ಕಮ್ರಾನ್‌ ಖಾನ್‌ ಇಲಿಯಾಜ್‌ ನಗರದ ಆಯೇಷಾ ಫ‌ರೀನ್‌ ನನ್ನು 2017ರಲ್ಲಿ ಮದುವೆಯಾಗಿದ್ದು, ಈಕೆ ಅನಾರೋಗ್ಯ ಕಾರಣ ಹೇಳಿಕೊಂಡು ರಾತ್ರಿ ಮಲಗಿದರೆ ಮರು ದಿನ ಮಧ್ಯಾಹ್ನ 12 ಗಂಟೆ ಎದ್ದೇಳುತ್ತಾಳೆ. ಆಕೆಗೆ ಟೈಫಾಯಿಡ್‌, ಥೈರಾಯಿಡ್‌, ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಇದ್ದು, ಮದುವೆ ಸಮಯದಲ್ಲಿ ಈ ಬಗ್ಗೆ ನನಗೆ ತಿಳಿಸಿರುವುದಿಲ್ಲ. ನಾನು ಪ್ರತಿದಿನ ಕಚೇರಿಗೆ ಹೋಗುವಾಗ ನನ್ನ ತಾಯಿಯೇ ಅಡುಗೆ ಮಾಡಿಕೊಡುತ್ತಾರೆ. ಮಧ್ಯಾಹ್ನ ನಿದ್ದೆಯಿಂದ ಎದ್ದೇಳುವ ಪತ್ನಿ ಸಂಜೆವರೆಗೂ ಕಾಲಹರಣ ಮಾಡಿ ಸಂಜೆ 5 ಗಂಟೆಗೆ ಮತ್ತೆ ಮಲಗುತ್ತಾಳೆ. ರಾತ್ರಿ 9.30ಕ್ಕೆ ಎದ್ದು ಊಟ ಮಾಡಿ ಮತ್ತೆ ಮಲಗುತ್ತಾಳೆ’ ಎಂದು ದೂರುದಾರ ಕಮ್ರಾನ್‌ ಖಾನ್‌ ದೂರಿನಲ್ಲಿ ಆರೋಪಿಸಿದ್ದಾರೆ.

“ಪತ್ನಿ ಆಯೇಷಾ ಪದೇ ಪದೆ ಹುಷಾರಿಲ್ಲ ಎಂದು ತವರು ಮನೆಗೆ ಹೋಗುತ್ತೇನೆ ಎನ್ನುತ್ತಾಳೆ. ಆಗ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದರೂ ಕೇಳುವುದಿಲ್ಲ. ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ನನ್ನ ಫ್ಯಾಮಿಲಿ ಬಗ್ಗೆ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕುತ್ತಾಳೆ. ಒಮ್ಮೆ ತವರು ಮನೆಗೆ ಹೋಗಿ 20 ದಿನ ವಾಪಸ್‌ ಬಂದಿರಲಿಲ್ಲ. ಕಳೆದ ಅಕ್ಟೋಬರ್‌ 6ರಂದು ತವರು ಮನೆಗೆ ಹೋಗುತ್ತೇನೆ ಎಂದಾಗ, 2 ದಿನದಲ್ಲಿ ಹಬ್ಬ ಇರುವುದರಿಂದ ಮುಗಿಸಿಕೊಂಡು ಬಳಿಕ ಹೋಗು ಎಂದೆ. ಅಷ್ಟಕ್ಕೆ ಅದೇ ದಿನ ರಾತ್ರಿ ಸುಮಾರು 25 ಜನರನ್ನು ಮನೆಗೆ ಕರೆಸಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದಳು. ಮನೆಯ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

“ಕೆಲಸ ಹೇಳಿದರೆ ಕೂಗಾಡುತ್ತಾಳೆ’: “ನನ್ನ ತಾಯಿ ಪಾರ್ಕಿನ್‌ ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಡುಗೆ ಮಾಡುವಂತೆ ಪತ್ನಿಗೆ ಹೇಳಿದರೆ, ಆಕೆ ಯಾವುದೇ ಕೆಲಸ ಮಾಡದೆ ಜಗಳ ತೆಗೆಯುತ್ತಾಳೆ. ನಾನು ಆಕೆಗೆ ಏನಾದರೂ ಕೆಲಸ ಹೇಳಿದರೆ, ನನ್ನ ಮೇಲೆ ಇಲ್ಲ ಸಲ್ಲದ ಕಾರಣ ಹೇಳಿ ಕೂಗಾಡುತ್ತಾಳೆ. ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾಳೆ. ಆಕೆ ಸದಾ ರಾಯಲ್‌ ಲೈಫ್ ಲೀಡ್‌ ಮಾಡಲು ಯೋಚಿಸುತ್ತಾಳೆ’ “ಪತ್ನಿಗೆ ನನ್ನ ಬಗ್ಗೆ ಯಾವುದೇ ಅನುಕಂಪ, ಮಮತೆ ಇಲ್ಲ. ಆಕೆಯ ಮನೆಯವರು ನನ್ನಿಂದ ಹಣ ಪಡೆದುಕೊಳ್ಳುವ ದುರುದ್ದೇಶದಿಂದ ಆಕೆಯನ್ನು ನನಗೆ ಮದುವೆ ಮಾಡಿಕೊಟ್ಟು ನನ್ನ ಜೀವನವನ್ನು ನರಕಯಾತನೆ ಮಾಡಿದ್ದಾರೆ. ಹೀಗಾಗಿ ನನ್ನ ಪತ್ನಿ ಹಾಗೂ ಆಕೆಯ ತವರು ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಸಂತ್ರಸ್ತ ಕಮ್ರಾನ್‌ ಖಾನ್‌ ದೂರಿನಲ್ಲಿ ಕೋರಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next