ಬೆಂಗಳೂರು: ವಿವಾಹವಾದ ಮೂರೇ ದಿನಕ್ಕೆ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಇದೀಗ ಮೋಸ ಹೋದ ಪತ್ನಿ ಕೆ.ಆರ್.ಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಧರಣಿ ಎಂಬಾಕೆ ಕೊಟ್ಟ ದೂರಿನ ಆಧಾರದ ಮೇಲೆ ಕೆ.ಆರ್.ಪುರ ಠಾಣೆ ಪೊಲೀಸರು ಆರೋಪಿ ಪತಿ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.13ರಂದು ನಾವಿಬ್ಬರೂ ವಿವಾಹವಾಗಿದ್ದೆವು. ಫೆ.13ರಿಂದ 17ರವರೆಗೆ ಪತಿ-ಪತ್ನಿ ಇಬ್ಬರೂ ಜೊತೆಗಿದ್ದೆವು. ಫೆ.18 ಮನೆಗೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಸುರೇಶ್ ಮತ್ತೆ ವಾಪಸ್ ಬಂದಿಲ್ಲ. ವಿವಾಹವಾಗಿ ಮೂರೇ ದಿನಗಳ ಅಂತರದಲ್ಲಿ ಪತಿ ದೂರ ಹೋಗಿದ್ದಾನೆ ಎಂದು ಧರಣಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀ ಸರು ಆರೋಪಿ ಸುರೇಶ್‌ನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ “ನಾನು ಧರಣಿ ಜತೆಗೆ ವಿವಾಹವೇ ಆಗಿಲ್ಲ. ಶಾರ್ಟ್ ಮೂವಿ ಚಿತ್ರೀಕರಿಸಬೇಕಾದಾಗ ತೆಗೆದ ಫೋಟೋಗಳನ್ನು ಇಟ್ಟುಕೊಂಡು ವಿವಾಹವಾಗಿರುವುದಾಗಿ ಹೇಳುತ್ತಿದ್ದಾಳೆ. ನಾನು ಆಕೆಗೆ ಕೇವಲ ಸ್ನೇಹಿತನಾಗಿದ್ದೆ ಎಂದು ಹೇಳಿದ್ದಾರೆ.
ಧರಣಿಗೆ 2016ರಲ್ಲಿ ವಿವಾಹವಾಗಿತ್ತು. ಕೌಟುಂಬಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದಳು. ಈ ವಿಚಾರಗಳು ಸುರೇಶ್‌ಗೂ ತಿಳಿದಿತ್ತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಫೆ.13ರಂದು ಇಬ್ಬರೂ ವಿವಾಹವಾಗಿರುವ ಫೋಟೋಗಳನ್ನು ಧರಣಿ ಪೊಲೀಸರಿಗೆ ಕೊಟ್ಟಿದ್ದಾಳೆ. ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.