Advertisement
ಸುಶೀಲಾ ಅವರು ಪತಿ ರುಕ್ಮಯ ಅವರೊಂದಿಗೆ ಬೀತಲಪ್ಪುವಿನಲ್ಲಿ ರುಕ್ಮಯ ಅವರ ತಂದೆಯ ಜಾಗದಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ರುಕ್ಮಯ ಕೂಲಿ ಕೆಲಸ ಮಾಡುತ್ತಿದ್ದರೆ, ಸುಶೀಲಾ ಬೀಡಿ ಕಟ್ಟುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ರುಕ್ಮಯ ಎ. 23ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಈ ಆಘಾತದಿಂದ ನೋವುಂಡರೂ ಸುಶೀಲಾ ಧೃತಿಗೆಡದೆ ತನ್ನಿಬ್ಬರು ಮಕ್ಕಳೊಂದಿಗೆ ಅದೇ ಮನೆಯಲ್ಲಿದ್ದು, ಬೀಡಿ ಕಟ್ಟುತ್ತ ಬದುಕನ್ನೂ ಕಟ್ಟಿಕೊಳ್ಳಲು ಆರಂಭಿಸಿದ್ದರು. ಆದರೆ, ವಿಧಿಯ ಅಟ್ಟಹಾಸ ಮುಂದುವರಿದಿದ್ದು, ಈ ಮಳೆಗಾಲದಲ್ಲಿ ಮನೆಯ ಛಾವಣಿ ಕುಸಿದು, ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಇಬ್ಬರು ಮಕ್ಕಳೊಂದಿಗೆ ಈ ಮಹಿಳೆಯ ಬದುಕು ಬೀದಿಗೆ ಬಂತು.
ಮಹಿಳೆಯ ಸ್ಥಿತಿ ಗಮನಿಸಿದ 34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಸತ್ಯವತಿ ಹಾಗೂ ಸ್ಥಳೀಯರು ಸುಶೀಲಾ ಹಾಗೂ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಟ್ಟಡದಲ್ಲಿ ಆಸರೆ ಕಲ್ಪಿಸಿದರು. ಕಟ್ಟಡ ಭದ್ರವಾಗಿದ್ದರೂ ವಿದ್ಯುತ್ ವ್ಯವಸ್ಥೆ ಇಲ್ಲ. ಇದು ತಾತ್ಕಾಲಿಕ ಆಶ್ರಯ. ಮನೆ ರಿಪೇರಿ ಮಾಡಿಸೋಣ ಎಂದರೂ ಸುಶೀಲಾ ಅವರಲ್ಲಿ ಹಣವಿಲ್ಲ. ವಸತಿ ಯೋಜನೆಯಲ್ಲಿ ಸೌಲಭ್ಯ ಪಡೆಯೋಣ ಎಂದರೆ ಜಮೀನಿನ ಖಾತೆ ರುಕ್ಮಯ ಅವರ ತಂದೆ ಹೆಸರಿನಲ್ಲಿದೆ. ಮಕ್ಕಳ ಹೆಸರಿಗೆ ಬದಲಾವಣೆ ಆಗಿಲ್ಲ. ಇರುವುದು ಸ್ವಲ್ಪ ಭೂಮಿ. ಕಂದಾಯ ಇಲಾಖೆಗೆ ಅಲೆದಾಡಿ ದಾಖಲೆ ಸರಿ ಮಾಡಿಸಿಕೊಳ್ಳಲು ಶಕ್ತಿಯಿಲ್ಲ. ರುಕ್ಮಯ ಅವರಿಗೆ ಸಹೋದರ, ಸಹೋದರಿಯರಿದ್ದು, ಜಾಗ ಅಥವಾ ಪಾಲು ಸುಲಭವಾಗಿ ಸುಶೀಲಾ ಅವರ ಕೈಗೆ ಬರುವುದೂ ಸಾಧ್ಯವಿಲ್ಲ. ಹೀಗಾಗಿ, ಅವರಿಗೆ ದಿಕ್ಕೇ ತೋಚದಂತಾಗಿದೆ. ನೆರವಿನ ನಿರೀಕ್ಷೆ
ಮನೆ ಛಾವಣಿ ಭಾಗಶಃ ಕುಸಿದಿದ್ದರಿಂದ ಪ್ರಕೃತಿವಿಕೋಪ ಪರಿಹಾರ ನಿಧಿಯಿಂದ 3,000 ರೂ. ಪರಿಹಾರ ಸಿಕ್ಕಿದೆ. ಮತ್ತೂಮ್ಮೆ ಮನೆಗೆ ಹಾನಿಯಾಗಿದೆ. ಪತಿ ತೀರಿದ ಬಳಿಕ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ಪರಿಶಿಷ್ಠ ಪಂಗಡದ ಸುಶೀಲಾಗೆ ಸರಕಾರದ ಸೌಲಭ್ಯ ಸಿಗಬೇಕಿದೆ. ಮನೆ, ಬದುಕು ಕಟ್ಟಿಕೊಳ್ಳಲು ಅವರು ನೆರವಿನ ನಿರೀಕ್ಷೆಯಲ್ಲಿದ್ದಾರೆ. ದಾನಿಗಳು ಸುಶೀಲಾ ಅವರ ಬ್ಯಾಂಕ್ ಖಾತೆ ಸಂಖ್ಯೆ: 01402200203140, ಐಎಫ್ಎಸ್‌ಕೋಡ್: ಎಸ್‌ವೈಎನ್‌ಬಿ: 0000140 ಇದಕ್ಕೆ ನೆರವು ನೀಡಬಹುದು.
Related Articles
Advertisement