Advertisement

ಹುಣಸೂರು: ಉರುಳಿಗೆ ಬಲಿಯಾಗಿದ್ದ ಹುಲಿಯ ಮೂರು ಮರಿಗಳು ಸುರಕ್ಷಿತ

10:08 AM Nov 17, 2022 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದ ಅಂತರಸಂತೆ ವಲಯದಂಚಿನಲ್ಲಿ ಉರುಳಿಗೆ ಬಲಿಯಾಗಿದ್ದ ಹೆಣ್ಣು ಹುಲಿಯ ಮೂರು ಹುಲಿ ಮರಿಗಳು ಸುರಕ್ಷಿತವಾಗಿದ್ದು, ಸ್ವತಃ ಬೇಟೆಯಾಡುವಷ್ಟು ಆರೋಗ್ಯವಾಗಿರುವ ಬಗ್ಗೆ ಕ್ಯಾಮರಾ ಟ್ರ‍್ಯಾಪಿಂಗ್ ನಲ್ಲಿ ಮಾಹಿತಿ ಲಭ್ಯವಾಗಿದೆ.

Advertisement

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ತಾರಕ ಹೊಳೆಯ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದಲೂ ಒಂದು ಹೆಣ್ಣು ಹುಲಿ ತನ್ನ ಮೂರು ಮರಿ ಹುಲಿಗಳೊಂದಿಗೆ ಓಡಾಡುತ್ತಿದ್ದುದ್ದನ್ನು ಸಿಬ್ಬಂದಿಗಳು ಪತ್ತೆ ಮಾಡಿದ್ದರು.

ನ.12 ರಂದು ತಾರಕ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ತಾಯಿ ಹುಲಿಯ ಕಳೆಬರಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮರಿ ಹುಲಿಗಳ ಸುರಕ್ಷತೆಗಾಗಿ ಪತ್ತೆ ಹಚ್ಚಲು ನಾಗರಹೊಳೆ ನಿರ್ದೆಶಕ ಹರ್ಷಕುಮಾರ್ ನರಗುಂದ ರವರ ನೇತೃತ್ವದಲ್ಲಿ 130 ಸಿಬ್ಬಂದಿಗಳು, 4 ಸಾಕಾನೆಗಳು, 30 ಟ್ರ‍್ಯಾಪಿಂಗ್ ಕ್ಯಾಮರಾ ಮತ್ತು 2 ಡ್ರೋನ್‌ ಕ್ಯಾಮರಾಗಳನ್ನು ಬಳಸಿಕೊಂಡು ಮರಿ ಹುಲಿಗಳ ಜಾಡು ಪತ್ತೆ ಹಚ್ಚುವ ಕೂಂಬಿಂಗ್ ಕಾರ್ಯಚರಣೆ ಕೈಗೊಂಡು ಇದೀಗ  ಮರಿ ಹುಲಿಗಳು ಇರುವ ಸ್ಥಳ ಮತ್ತು ಹೆಜ್ಜೆಗುರುತುಗಳು ಕಂಡು ಬಂದಿದೆ.

ಅಲ್ಲದೆ ನ.15 ರ ಮಂಗಳವಾರ ಒಂದು ಜಿಂಕೆಯನ್ನು ಯಾವುದೋ ಮಾಂಸಹಾರಿ ಪ್ರಾಣಿ ದಾಳಿ ಮಾಡಿ ಕೊಂದು ಸ್ವಲ್ಪ ಮಾಂಸವನ್ನು ತಿಂದಿರುವುದು ಕಂಡು ಬಂದ ಕಾರಣ ಜಿಂಕೆಯ ಕಳೇಬರದ ಸುತ್ತ ಅಳವಡಿಸಲಾಗಿದ್ದ ಟ್ರ‍್ಯಾಪಿಂಗ್ ಕ್ಯಾಮರಾಗಳನ್ನು ಪರಿಶೀಲಿಸಿದ ವೇಳೆ 10-11 ತಿಂಗಳ ಪ್ರಾಯದ ಮೂರು ಮರಿ ಹುಲಿಗಳು ನ.16 ಬುಧವಾರದಂದು ಜಿಂಕೆ ಕಳೇಬರದ ಬಳಿ ಬಂದು ಚಿಂಕೆಯನ್ನು ತಿಂದಿರುವುದಲ್ಲದೇ ಸುತ್ತಮುತ್ತಲಿನಲ್ಲೂ  ಮರಿ ಹುಲಿಗಳು ಓಡಾಡಿರುವ ಹೆಜ್ಜೆ ಗುರುತುಗಳು ಮತ್ತು ಟ್ರ‍್ಯಾಪಿಂಗ್ ಕ್ಯಾಮರಾಗಳಲ್ಲಿ ಛಾಯಚಿತ್ರ ಸೆರೆಯಾಗಿದ್ದು, ಹುಲಿ ಮರಿಗಳು ಆರೋಗ್ಯವಾಗಿರುವುದು ಕಂಡುಬಂದಿದೆ.

ಈ ಹುಲಿ ಮರಿಗಳು ಸ್ವತಃ ತಾವೇ ಜಿಂಕೆಯನ್ನು ಬೇಟೆಯಾಡಿ ತಿಂದಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಮರಿ ಹುಲಿಗಳು ಬೇಟೆಯಾಡುವ ಕಲೆಯನ್ನು ಕಲಿತಿರುವುದರಿಂದ ತಾವಾಗಿಯೇ ಬದುಕಬಲ್ಲವು ಮತ್ತು ಮರಿಹುಲಿಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ತನ್ನ ತಾಯಿ ಹುಲಿಯು ಓಡಾಡುತ್ತಿದ್ದ ಪ್ರದೇಶದಲ್ಲಿಯೇ ಕಂಡುಬಂದಿದೆ. ಈ ಮರಿಹುಲಿಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆಯು ನಿರಂತರವಾಗಿ ನಿಗಾ ವಹಿಸಿ ಅವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ನರಗುಂದ ಉದಯವಾಣಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next