ಹುಣಸೂರು: ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನಲ್ಲಿ ಸೋಮವಾರ ನಡೆದ ಶ್ರೀ ವೀರಾಂಜನೇಯಸ್ವಾಮಿಯ ರಥ ಉತ್ಸವವು ವಿಜೃಂಭಣೆಯಿಂದ ಜರುಗಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ದೇವಸ್ಥಾನದಿಂದ ರಥೋತ್ಸವಕ್ಕೂ ಮುನ್ನ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಮದ್ಯಾಹ್ನ 12.30ಕ್ಕೆ ಸಿಂಗರಿಸಲಾಗಿದ್ದ ರಥಕ್ಕೆ ಉತ್ಸವ ಮೂರ್ತಿಯನ್ನು ಏರಿಸಿದರು. ಭಕ್ತರು ರಾಮಾಂಜನೇಯ ದೇವರು, ಹೆಜ್ಜೂರಯ್ಯನಿಗೆ ಜೈಕಾರ ಹಾಕುತ್ತಾ, ಹಣ್ಣು-ಜವನ ಎಸೆಯುತ್ತಾ ಸಂಭ್ರಮಿಸಿದರು.
ಪೂಜೆಯ ನಂತರ ಸಾವಿರಾರು ಭಕ್ತರು ಜೈಕಾರ ಹಾಕುತ್ತಾ, ಮಂಗಳ ವಾದ್ಯ ದೊಂದಿಗೆ ನಡುವೆ ರಥವನ್ನು ಎಳೆದರು. ದೇವಾಲಯದ ಸುತ್ತ ರಥವನ್ನು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿಗಳು ಸೇರಿದಂತೆ ಆಂಜನೇಯಸ್ವಾಮಿಯ ಆರಾಧಕರು ಹಣ್ಣು ಜವನ ಎಸೆದು ಪುನೀತರಾದರು.
ರಥೋತ್ಸವದ ವೇಳೆಗೆ ಇಡೀ ಜಾತ್ರಾಮಾಳ ಜನರು, ಯುವಪಡೆಯಿಂದ ತುಂಬಿ ತುಳುಕಿತ್ತು, ಮುಂಜಾನೆಯಿಂದಲೇ ದೇವಾಲಯದ ಅರ್ಚಕರು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ ನಡೆಸಿದರು.
Related Articles
ರಥೋತ್ಸವಕ್ಕೂ ಮುನ್ನಾ, ನಂತರ ನೂತನ ದೇವಾಲಯದ ಹೊರಗೆ ನಿರ್ಮಿಸಿರುವ ಚಿಕ್ಕ ಗುಡಿಯಲ್ಲಿ ದೇವರ ದರ್ಶನ ಪಡೆಯಲು ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಹೊಸ ಬಟ್ಟೆ ತೊಟ್ಟಿದ್ದ ನೂರಾರು ಕಾಡುಕುಡಿಗಳು, ಆದಿವಾಸಿ ಸಮುದಾಯದ ಮಂದಿ ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.
ಹರಕೆ ಸಲ್ಲಿಸಿದರು: ದೇವರಿಗೆ ಹರಕೆ ಹೊತ್ತ ಅನೇಕ ಮಂದಿ ಹಿಂದಿನ ದಿನವೇ ಜಾತ್ರಾಮಾಳದಲ್ಲಿ ಬೀಡುಬಿಟ್ಟಿದ್ದರು. ಲಕ್ಷö್ಮಣತೀರ್ಥ ನದಿ ದಂಡೆಯಲ್ಲಿ ತಲೆ ಮುಡಿಕೊಟ್ಟು, ಬಾಯಿಬೀಗ ಹಾಕಿಕೊಂಡು ದೇವಾಲಯ ಸುತ್ತ ಉರುಳು ಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡಿಗೆ ತಯಾರಿಸಿ ಪ್ರಸಾದ ಸೇವಿಸಿದರು. ಹಲವರು ಲಕ್ಷö್ಮಣತೀರ್ಥ ನದಿ ತಟದ ಜಮೀನುಗಳಲ್ಲಿ ಮನೆಗಳಿಂದ ತಂದಿದ್ದ ಬುತ್ತಿಯನ್ನು ಸಾಮೂಹಿಕವಾಗಿ ಹಂಚಿ ಊಟ ಮಾಡಿದರು.
ಈ ಬಾರಿ ಜಾತ್ರೆಗೆ ಬರುವ ವಾಹನಗಳಿಗೆ ಪೋಲೀಸರು ಕೆರೆ ಪಕ್ಕದ ವಿಶಾಲ ಪ್ರದೇಶದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದರಿಂದ ಟ್ರಾಫಿಕ್ ಜಾಮ್ ತಪ್ಪಿತು. ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಶಾಸಕ ಹೆಚ್.ಪಿ. ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆಡಿಎಸ್‌ನ ನಿಯೋಜಿತ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ, ದೊಡ್ಡಹೆಜ್ಜೂರು ಗ್ರಾ.ಪಂ. ಅಧ್ಯಕ್ಷ ಮುದಗನೂರು ಸುಭಾಷ್, ಮಾಜಿ ಅಧ್ಯಕ್ಷ ಶಿವಶಂಕರ್, ದಾ.ರಾ.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶೇಖರೇಗೌಡ, ಕಾರ್ಯದರ್ಶಿ ನಟರಾಜ್ ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳವರು ಜಾತ್ರಾ ಯಶಸ್ವಿಗೆ ಶ್ರಮಿಸಿದರು.