Advertisement

ಬಿಜೆಪಿ ಸರ್ಕಾರ ರಾಜ್ಯವನ್ನೇ ಲೂಟಿ ಮಾಡುತ್ತಿದೆ: ಡಾ.ಯತೀಂದ್ರ ಸಿದ್ದರಾಮಯ್ಯ

12:12 PM Jan 25, 2023 | Team Udayavani |

ಹುಣಸೂರು: ಕೇಂದ್ರ-ರಾಜ್ಯದಲ್ಲಿನ ಬಿಜೆಪಿ ಸರಕಾರಗಳು ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಜನಪರವಾಗಿರುವ, ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವ ಕಾಂಗ್ರೆಸ್‌ನ್ನು ಬೆಂಬಲಿಸುವಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

Advertisement

ಹುಣಸೂರು ತಾಲೂಕಿನ ಚಿಲ್ಕುಂದದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಈ ಹಿಂದೆ ತನ್ನ ಪ್ರಾಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 163 ಭರವಸೆಗಳನ್ನು ಈಡೇರಿಸಿತ್ತು. ಆದರೆ ಬಿಜೆಪಿಯವರು ಖಜಾನೆ ಲೂಟಿ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್‌ಗೆ ಓಟು-ಬಿಜೆಪಿಗೆ ಲಾಭ:

ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕಿದಂತೆ ಎಂದು ಎಚ್ಚರಿಸಿ, ಕ್ಷೇತ್ರದಲ್ಲಿ ಅಪಾರ ಅಭಿವೃದ್ದಿ ಕೆಲಸ ಮಾಡಿರುವ, ಜನಪರ ಕಾಳಜಿಯುಳ್ಳ ನಿಮ್ಮ ಮನೆಮಗ ಮಂಜುನಾಥ್‌ರನ್ನು ಬೆಂಬಲಿಸಿ, ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಿ ಇವರು ಮಂತ್ರಿಯಾಗಲಿದ್ದಾರೆಂದರು.

ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ, ರಾಜಕಾರಣದಲ್ಲಿ ಬದ್ಧತೆ, ತತ್ವ ಸಿದ್ಧಾಂತ ಇರಬೇಕು. ಯಾವುದೇ ಪಕ್ಷಗಳಿಗೂ ದುಡ್ಡಿನ ರಾಜಕಾರಣ ಒಳ್ಳೆಯ ಬೆಳವಣಿಗೆಯಲ್ಲ. ಜೆಡಿಎಸ್‌ಗೆ ತತ್ವ, ಸಿದ್ಧಾಂತ, ಬದ್ಧತೆ ಇಲ್ಲ, ಜೆಡಿಎಸ್ ಪಕ್ಷದವರು ಎಲ್ಲಾ ಚುನಾವಣೆಗಳಲ್ಲಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿರುವ ಶಾಸಕ ಮಂಜುನಾಥರನ್ನು ಮತ್ತೊಮ್ಮೆ ಚುನಾಯಿಸಬೇಕೆಂದು ಕರೆ ನೀಡಿದರು.

Advertisement

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನನ್ನ ಶಾಸಕತ್ವದ ಅವಧಿಯಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ವಿಶ್ವಾಸದಿಂದ ಕಂಡಿದ್ದೇನೆ. ವಿರೋಧಿಗಳನ್ನು ಸಹ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ಪಕ್ಷ ಮಾಡಿರುವ ಕೆಲಸವನ್ನು ಮನೆ ಮನೆಗೆ ತಿಳಿಸಬೇಕು. ಪ್ರಸ್ತುತ ಸಿದ್ದರಾಮಯ್ಯರವರ ನಾಯಕತ್ವ ರಾಜ್ಯಕ್ಕೆ ಅವಶ್ಯವಾಗಿದ್ದು, ಕನಸು ನನಸು ಮಾಡುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ ವಿಜಯಕುಮಾರ್ ಉಪಾಧ್ಯಕ್ಷ ಎಸ್.ಜಯರಾಂ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಟಿ.ವಿ.ನಾರಾಯಣ್, ಕಲ್ಕುಣಿಕೆರಮೇಶ್, ಮಾಜಿ ತಾ.ಪಂ.ಮಾಜಿ ಸದಸ್ಯ ಮಹೇಂದ್ರಕುಮಾರ್, ಗುಂಡರವಿ, ಹಿರಿಕ್ಯಾತನಹಳ್ಳಿ ಪಂಚಾಯಿತಿ ಅಧ್ಯಕ್ಷ ಜವರೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಶೋಭಾ, ಸದಸ್ಯೆ ಶಿವಕುಮಾರ್, ಮುಖಂಡ ಸಿ.ಎನ್.ಕುಮಾರ್, ಪದ್ಮನಾಭ  ಸೇರಿದಂತೆ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಎರಡುಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕಾಂಗ್ರೆಸ್‌ ಸೇರ್ಪಡೆ; ಉದ್ಯಮಿ ಸಿ.ಎನ್.ಕುಮಾರ್, ಮುಸ್ಲಿಂ ಮುಖಂಡ ಪಾಷ, ಅತಾವುಲ್ಲಾ, ರೆಹಮಾನ್, ಚಿಲ್ಕುಂದ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶೋಭಾ, ಸದಸ್ಯ ಶಿವಕುಮಾರ್, ವಸಂತಸಿದ್ದೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಸೂರಜ್, ಕುಮಾರ್, ಮುಖಂಡರಾದ ಕೃಷ್ಣೆಗೌಡ, ಮಾದೇಗೌಡ, ಶಿವಣ್ಣೇಗೌಡ, ಕುಮಾರಸ್ವಾಮಿ, ಸೇರಿದಂತೆ ವಿವಿಧ ಪಕ್ಷಗಳ ಮುನ್ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪೂರ್ಣಕುಂಭ ಸ್ವಾಗತ-ಮೆರವಣಿಗೆ; ಸಭೆಗೂ ಮುನ್ನ 101 ಕಳಸಹೊತ್ತ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಸಕ ಮಂಜುನಾಥ್, ಡಾ. ಯತೀಂದ್ರಸಿದ್ದರಾಮಯ್ಯ, ವೆಂಕಟೇಶ್, ಡಾ.ಬಿ.ಜಿ.ವಿಜಯಕುಮಾರ್, ಶೋಭಾ ಮತ್ತಿತರ ಮುಖಂಡರನ್ನು ತೆರೆದವಾಹನದಲ್ಲಿ  ಮೆರವಣಿಗೆ ನಡೆಸಿದರು. ಬಹೃತ್ ಸೇಬಿನ ಹಾರ ಹಾಕಿ, ಪುಷ್ಪಾರ್ಚನೆ ಗೈದು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next