ಹುಣಸೂರು: ತಂಬಾಕು ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಿದ್ದು ತಕ್ಷಣವೇ ಕೇಂದ್ರ ವಾಣಿಜ್ಯ ಮಂತ್ರಾಲಯ, ತಂಬಾಕು ಮಂಡಳಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದೇನೆಂದು ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು ತಿಳಿಸಿದ್ದಾರೆ.
ಹರಾಜು ಮಾರುಕಟ್ಟೆಯಲ್ಲಿ ಉತ್ಕೃಷ್ಟ ತಂಬಾಕಿಗೆ ಬೆಲೆ ಕಡಿಮೆಯಾಗಿರುವ ಹಿನ್ನೆಲೆ ನಗರದ ಪ್ರವಾಸಿ ಮಂದಿರದಲ್ಲಿ ತಂಬಾಕು ಬೆಳೆಗಾರರ ಸಂಘಗಳ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಈಗಾಗಲೇ ಕಡಿಮೆ ದರ್ಜೆಯ ತಂಬಾಕನ್ನು ಬಹುತೇಕ ರೈತರು ಮಾರಾಟ ಮಾಡಿದ್ದಾರೆ. ಇನ್ನೂ 20 ಮಿಲಿಯನ್‌ನಷ್ಟು ಉತ್ತಮ ದರ್ಜೆಯ ತಂಬಾಕಿದ್ದು, ಹೆಚ್ಚಿನ ಬೆಲೆ ಸಿಗುವುದೆಂಬ ನಿರೀಕ್ಷೆಯಿಂದ ದಾಸ್ತಾನು ಮಾಡಿಕೊಂಡಿರುವ ರೈತರಿಗೆ ಹೆಚ್ಚಿನ ಬೆಲೆ ಇರಲಿ. 40 ರೂ. ಯಷ್ಟು ಕಡಿಮೆ ಬೆಲೆಗೆ ಕಂಪನಿಗಳು ಖರೀದಿಸುತ್ತಿದ್ದು, ಈ ಬಗ್ಗೆ ತಕ್ಷಣವೇ ವರ್ತಕರ ಸಭೆ ಕರೆಯುವಂತೆ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಸಂಸದರಿಗೂ ಮಾಹಿತಿ ನೀಡಿದರು.
ಕಾರ್ಡುದಾರರಿಗೆ ಇನ್ನೂ ತಂಬಾಕು ಬಿಡಲು ಅನುಮತಿ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಸಂಸದ ಪ್ರತಾಪ ಸಿಂಹರು ಶೀಘ್ರ ಅನುಮತಿ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
Related Articles
ಮಂಡಳಿ ಸದಸ್ಯ ವಿಕ್ರಂ ರಾಜೇ ಅರಸ್ ಮಾತನಾಡಿ, ಈ ಬಾರಿ ಶೇ.50 ರಷ್ಟು ಬೆಳೆ ಪ್ರಮಾಣ ಕಡಿಮೆ ಇದ್ದು, ಉತ್ತಮ ದರ್ಜೆ ತಂಬಾಕು ಕೆ.ಜಿ.ಗೆ ಕನಿಷ್ಟ 300ರೂ., ಸರಾಸರಿ ಬೆಲೆ 250 ರೂ. ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದ್ದು, ತಂಬಾಕು ಮಂಡಳಿ ಅಧ್ಯಕ್ಷರು ಮದ್ಯ ಪ್ರವೇಶಿಸಿ ಉತ್ತಮ ಬೆಲೆ ಕೊಡಿಸುವಂತೆ ಒತ್ತಾಯಿಸಿದರು.
ಎಫ್ಡಿಎ ಪ್ರವೇಶವೇಕಿಲ್ಲ:
ಎಚ್.ಡಿ.ಕೋಟೆ ಮಾರುಕಟ್ಟೆಯ ಕಾಫ್ ಕಮಿಟಿ ಸದಸ್ಯ ಮೊತ್ತ ಬಸವರಾಜು ಮಾತನಾಡಿ, ಕೋಟೆಯಲ್ಲಿ ಈಗಾಗಲೇ ಮಾರುಕಟ್ಟೆ ಸ್ಥಗಿತಗೊಳಿಸಲಾಗಿತ್ತು. ಮಂಡಳಿ ಉಪಾಧ್ಯಕ್ಷ ಬಸವರಾಜುರ ಮನವಿ ಮೇರೆಗೆ ಮಂಗಳವಾರ ಹರಾಜು ಪ್ರಕ್ರಿಯೆ ನಡೆದರೂ ಮತ್ತೆ ಕಡಿಮೆ ಬೆಲೆಗೆ ಖರೀದಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿ, ಹಿಂದೆ ಸಂಸದ ಪ್ರತಾಪ ಸಿಂಹರವರೇ ವಿದೇಶಿ ಕಂಪನಿಗಳು ನೇರ ಮಾರುಕಟ್ಟೆಗೆ ಬರಲಿವೆ ಎಂದು ಭರವಸೆ ಇತ್ತಂತೆ ನಡೆದುಕೊಂಡಿಲ್ಲ. ಇದೀಗ ಖರೀದಿ ಕಂಪನಿಗಳ ಲಾಭಿಗೆ ಮಣಿದಿರಬಹುದೆಂಬ ಅನುಮಾನವಿದ್ದು, ತಂಬಾಕು ಬೆಳೆಗಾರರು ಮತ್ತೆ ಪ್ರತಿಭಟನೆ ಹಾದಿ ಹಿಡಿಯಬೇಕಾದೀತೆಂದು ಎಚ್ಚರಿಸಿದರು.
ಮಾರುಕಟ್ಟೆ ಬಂದ್ ಎಚ್ಚರಿಕೆ:
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಮೊದಲೇ ಬೆಳೆ ಪ್ರಮಾಣ ಕಡಿಮೆಯಾಗಿ ತೊಂದರೆ ಅನುಭವಿಸುತ್ತಿದ್ದು, ಮಾರುಕಟ್ಟೆ ಕುಸಿತದಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಇದೀಗ ಮಂಡಳಿ ಉಪಾಧ್ಯಕ್ಷರು, ಸದಸ್ಯರು ಎರಡು ದಿನಗಳ ಕಾಲಾವಕಾಶ ಕೇಳಿದ್ದು, ಬೆಲೆ ಏರಿಕೆಯಾಗದಿದ್ದಲ್ಲಿ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದ್ದಾರೆ.
ಮಂಡಳಿ ಸದಸ್ಯ ಹಬ್ಬನಕುಪ್ಪೆ ದಿನೇಶ್, ರೈತ ಸಂಘದ ಕಾರ್ಯದರ್ಶಿ ರಾಮೇಗೌಡ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿಸಂಘದ ಅಧ್ಯಕ್ಷ ಮೋದೂರು ಶಿವಣ್ಣೇ ಗೌಡ, ಗೌರವಾಧ್ಯಕ್ಷ ಚಂದ್ರೇಗೌಡ, ಮುಖಂಡರಾದ ನಾಗರಾಜಪ್ಪ, ನಿಲುವಾಗಿಲು ಪ್ರಭಾಕರ್ ಮಾತನಾಡಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಮಹದೇವ್, ಸತೀಶ್, ಜಯಶಂಕರ್ ಮತ್ತಿತರರಿದ್ದರು.