ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ವ್ಯಾಪ್ತಿಯಲ್ಲಿ ಹುಲಿ ದಾಳಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಕಾಡಂಚಿನ ಜನರು ಭಯ ಬೀತಿಗೊಳಗಾಗಿದ್ದಾರೆ.
ನೇರಳಕುಪ್ಪೆ ಗ್ರಾ.ಪಂ. ವ್ಯಾಪ್ತಿಯ ಅಬ್ಬೂರು ಗ್ರಾಮದ ಕರಿಗೌಡರಿಗೆ ಸೇರಿದ ಕರುವಿನ ಮೇಲೆ ಗುರುವಾರ ಹಾಡುಹಗಲೇ ಹುಲಿ ಹಠಾತ್ ದಾಳಿ ನಡೆಸಿ ಕರುವನ್ನು ಗಾಯಗೊಳಿಸಿತ್ತು.
ಕರೀಗೌಡ ತಮಗೆ ಸೇರಿದ ಶೆಟ್ಟಹಳ್ಳಿಯ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಹುಲಿಯನ್ನು ಕಂಡ ಕರಿಗೌಡರು ಕಿರುಚಾಡಿದ್ದರಿಂದ ಹುಲಿ ಕರುವನ್ನು ಬಿಟ್ಟು ಪಕ್ಕದ ಕಾಡಿನೊಳಗೆ ನುಗ್ಗಿ ಪರಾರಿಯಾಗಿದೆ.
ನಾಗರಹೊಳೆ ಉದ್ಯಾನವನದಂಚಿನ ಜಮೀನಿನಲ್ಲಿ ಕಳೆದ ಒಂದು ತಿಂಗಳಿಂದ ಅಕ್ಕ ಪಕ್ಕದ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡು ಅಲ್ಲಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ಈ ಭಾಗದಲ್ಲಿ ರೈತರು ತಮ್ಮ ಜಮೀನುಗಳಿಗೆ ರಾತ್ರಿ ವೇಳೆ ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಹೋಗಲು ಭಯ ಭೀತರಾಗಿದ್ದಾರೆ.
Related Articles
ಕಾಡಂಚಿನಲ್ಲಿ ನಿಲ್ಲದ ಹುಲಿ ಅಟ್ಟಹಾಸ; 7 ಹಸುಗಳು ಬಲಿ
ಇತ್ತೀಚಿನ ದಿನಗಳಲ್ಲಿ ಹುಲಿಯು ಜಾನುವಾರುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವ ಹಿನ್ನೆಲೆ ಈ ಭಾಗದ ಜನತೆ ಆತಂಕಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕೂಲಿ- ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ತಕ್ಷಣ ಹುಲಿ ಹಿಡಿಯಲು ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ನೇರಳಕುಪ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿ.ಆರ್.ಎಫ್.ಓ. ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಸಾಕಾನೆಯ ಮೂಲಕ ಕೂಂಬಿಂಗ್ ಕಾರ್ಯ ನಡೆಸಿ ಚಲನವಲನಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.