Advertisement

Hunsur: ಬಿರುಗಾಳಿ ಸಹಿತ ಭಾರೀ ಮಳೆಗೆ ಕೆರೆಯಂತಾದ ಹೊಲಗಳು

08:52 AM Jun 02, 2024 | Team Udayavani |

ಹುಣಸೂರು: ತಾಲೂಕಿನ ಹನಗೋಡು ಸುತ್ತಮುತ್ತ ಭಾರೀ ಬಿರುಗಾಳಿ ಸಹಿತ ಮಳೆಗೆ ನೂರಾರು ಮರಗಳು ನೆಲಕ್ಕುರುಳಿದೆ. ಮನೆಗಳ ಮೇಲೆ ಮರ ಬಿದ್ದಿದೆ. ಹೊಲಗಳು ಕೆರೆಯಂತಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. ಕಿರಂಗೂರು-ಹರಳಹಳ್ಳಿ ರಸ್ತೆ ಮುಚ್ಚಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದು, ಸಂಪರ್ಕ ಕಡಿತಗೊಂಡಿದೆ.

Advertisement

ಶನಿವಾರ ಸಂಜೆ ಕಿರಂಗೂರು, ಹರಳಹಳ್ಳಿ, ಅದ್ವಾಳ, ಕಲ್ಲೂರಪ್ಪನ ಗುಡ್ಡ, ನಾಗಾಪುರ ಗಿರಿಜನ ಪುನರ್ವತಿ ಕೇಂದ್ರ, ಹಿಂಡಗುಡ್ಲು, ದಾಸನಪುರ ಮತ್ತಿತರ ಕಡೆಗಳಲ್ಲಿ ಬಿರುಗಾಳಿಗೆ ಮರಗಳು ಮನೆ ಮೇಲೆ, ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದೆ.

ಕೆರೆಯಂತಾದ ಹೊಲಗಳು:

ಕಿರಂಗೂರು-ಹರಳಹಳ್ಳಿ ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿದು ಹರಳಹಳ್ಳಿ-ಅದ್ವಾಳ ರಸ್ತೆ ಸಂಚಾರ ಬಂದ್ ಆಗಿದೆ.

ನೂರಾರು ಎಕರೆ ಶುಂಠಿ, ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆಗಳ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಬೆಳೆಗಳೆ ಕೊಚ್ಚಿಕೊಂಡು ಹೋಗಿದೆ. ನೀರು ನಿಂತು ಬೆಳೆ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

Advertisement

ಉರುಳಿ ಬಿದ್ದ ಮರಗಳು:

ಬಿರುಗಾಳಿಗೆ ಅದ್ವಾಳದ ಚಂದ್ರಪ್ಪ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಅಲ್ಲದೆ ನಾಗಾಪುರ, ಹರಳ ಹಳ್ಳಿಗಳಲ್ಲಿ ಮನೆ ಮೇಲೆ ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದೆ.

ಹರಳಹಳ್ಳಿಯಲ್ಲಿ ಮನೆ ಕಡೆಗೆ ಬರುತ್ತಿದ್ದ ಹಸುವಿನ ಮೇಲೆ ರಸ್ತೆ ಬದಿಯ ಮರ ಬಿದ್ದು ತೀವ್ರಗಾಯವಾಗಿದೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಲವಾರು ಕಂಬಗಳು ಧರೆಗುರುಳಿವೆ.

ಇದೇ ರೀತಿ ಹನಗೋಡು ಹೋಬಳಿಯಾದ್ಯಂತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದನ್ನು ಸ್ಮರಿಸಬಹುದು. ಇನ್ನಾದರೂ ಸರಕಾರ ಬೆಳೆ ನಷ್ಟ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next