ಹುಣಸೂರು: ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ರೈತರೊಬ್ಬರು ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಭೋಗನಹಳ್ಳಿಯ ಚಾಮುಂಡಿಗೌಡರ ಪುತ್ರ ಸುರೇಶ್(58) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ, ಒರ್ವ ಪುತ್ರನಿದ್ದಾನೆ. ಸುರೇಶ್‌ರಿಗೆ ಗ್ರಾಮದಲ್ಲಿ ಎರಡು ಎಕರೆ ಜಮೀನಿದ್ದು, ಶ್ಯಾನುಭೋಗನಹಳ್ಳಿಯ ಸೊಸೈಟಿಯಲ್ಲಿ ಒಂದು ಲಕ್ಷ, ಬೋಳನಹಳ್ಳಿಯ ಐಓಬಿ ಬ್ಯಾಂಕಿನಲ್ಲಿ ಒಂದು ಲಕ್ಷ, ಸ್ವಸಹಾಯ ಸಂಘ ಹಾಗೂ ಕೈಸಾಲ 5 ಲಕ್ಷ ರೂ. ಸೇರಿದಂತೆ ಸೇರಿದಂತೆ ಒಟ್ಟು 7 ಲಕ್ಷರೂ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕಳೆದೆರಡು ವರ್ಷಗಳಿಂದ ನಿರೀಕ್ಷೆಯಂತೆ ಬೆಳೆ ಬಾರದೆ, ಬೆಲೆಯೂ ಸಿಗದೆ ಸಾಲ ತೀರಿಸಲಾಗದೆ ಹತಾಶರಾಗಿದ್ದ ಸುರೇಶ್ ಗುರುವಾರ ತಮ್ಮ ಜಮೀನಿನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ. ಜಮೀನಿಗೆ ತೆರಳಿದ್ದ ಪತಿ ವಾಪಸ್ ಬಾರದಿದ್ದರಿಂದ ಇವರ ಪತ್ನಿ ಜಮೀನಿನ ಬಳಿ ತೆರಳಿ ನೋಡಿದ ವೇಳೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮರಣೋತ್ತರ ಪರೀಕ್ಷೆ ನಂತರ ವಾರಸು ದಾರರಿಗೆ ಒಪ್ಪಿಸಲಾಗಿದ್ದು, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.