ಹುಣಸೂರು: ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಸೇರಿದಂತೆ 18 ಮಂದಿಗೆ ತೀವ್ರ ಗಾಯಗಳಾಗಿರುವ ಘಟನೆ ಮೈಸೂರು- ವಿರಾಜಪೇಟೆ ಹೆದ್ದಾರಿಯ ದೇವಪುರದ ಬಳಿ ಡಿ.10ರ ಮಂಗಳವಾರ ನಡೆದಿದೆ.
ಹುಣಸೂರು ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಾಲಕ ದೊರೈಶ್ ಅವರ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಸಂಜೆ ಮೈಸೂರಿನಿಂದ ಹುಣಸೂರು- ಗೋಣಿಕೊಪ್ಪ ಮಾರ್ಗವಾಗಿ ತೆರಳುತ್ತಿದ್ದ ಬಸ್ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಎನ್ನಲಾಗಿದ್ದು, ಹಿನಕಲ್ ಬಳಿ ರಸ್ತೆ ಡುಬ್ಬವನ್ನು ಎಗರಿಸಿಕೊಂಡು ಹೋಗಿದ್ದಲ್ಲದೆ ಮುಂದಿನ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದ. ಎದುರಿನ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ಅನಾಹುತ ತಪ್ಪಿತ್ತು. ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ತಿತಿಮತಿ ಬಳಿಯ ದೇವಪುರ ರಸ್ತೆಯ ಹೊಂಡ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಳ್ಳುವಷ್ಟರಲ್ಲಾಗಲೇ ಅನಾಹುತ ನಡೆದಿತ್ತು.
ಬಸ್ ಪಲ್ಟಿಯಾದ ಶಬ್ದದ ಜೊತೆಗೆ ಪ್ರಯಾಣಿಕರ ಕೂಗಾಟ ಕೇಳಿದ ದೇವಪುರ ಹಾಡಿಯ ಜನರು, ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಯ ಕ್ವಾಟ್ರಸ್ ನ ಸಿಬ್ಬಂದಿಗಳು, ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳ ಪ್ರಯಾಣಿಕರನ್ನು ಹೊರಕ್ಕೆ ತೆಗೆದು, ಸಮೀಪದ ತಿತಿಮತಿ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡು ಪ್ರಥಮ ಚಿಕಿತ್ಸೆ ಕೊಡಿಸಿ, ಎಲ್ಲ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋಣಿಕೊಪ್ಪ ಹಾಗೂ ಮೈಸೂರು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ತಿತಿಮತಿಯ ಸಮೀಪದ ದೇವಪುರದಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿ, ಪ್ರಯಾಣಿಸುತ್ತಿದ್ದ 17 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಾಲಕನ ಕಾಲು ಮುರಿದಿದ್ದು, ಗೋಣಿಕೊಪ್ಪ ಆಸ್ಪತ್ರೆ ಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.