ಹುಣಸೂರು: ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಕೊಡಗಿನ ದಂಪತಿ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ರಂಗಯ್ಯನಕೊಪ್ಪಲು ಗೇಟ್ ಬಳಿ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಹಿರಿಕರ ಗ್ರಾಮದ ನಿವೃತ್ತ ಪ್ರಾಚಾರ್ಯ ಎಚ್.ಬಿ.ಬೆಳ್ಳಿಯಪ್ಪ(65), ಪತ್ನಿ ವೀಣಾ(56) ಸಾವನ್ನಪ್ಪಿದವರು.ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬೆಳ್ಳಿಯಪ್ಪನವರು ಮಡಿಕೇರಿ ತಾಲೂಕಿನ ಮರಗೋಡು ಸರಕಾರ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿಯಾಗಿದ್ದರು.
ಉತ್ತರ ಪ್ರದೇಶದ ಅಲಹಾಬಾದ್‌ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪುತ್ರಿ ವಿಜ್ಞಾನಿ ಶೃತಿಯವರನ್ನು ಸ್ವಗ್ರಾಮಕ್ಕೆ ಕರೆತರಲು ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಬೆಳ್ಳಿಯಪ್ಪ ದಂಪತಿ ತೆರಳುತ್ತಿದ್ದ ಕಾರಿಗೆ ಮೈಸೂರು ಕಡೆಯಿಂದ ಬರುತ್ತಿದ್ದ ಹುಣಸೂರು ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದರೆ, ಬಸ್ ಮುಂಭಾಗ ಸಹ ಹಾನಿಯಾಗಿದ್ದು, ಬಸ್‌ನಲ್ಲಿದ್ದವರು ಅದೃಷ್ಟಾವಶಾತ್ ಪಾರಾಗಿದ್ದಾರೆ. ತೀವ್ರಗಾಯಗೊಂಡಿದ್ದ ಬೆಳ್ಳಿಯಪ್ಪ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡಿದ್ದ ವೀಣಾರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಅಂತ್ಯಕ್ರಿಯೆ
ಶವಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಒಪ್ಪಿಸಲಾಗಿದ್ದು, ಸ್ವಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಗಳನ್ನು ನೋಡಲು ಹೊರಟಿದ್ದವರು ಬಾರದ ಲೋಕಕ್ಕೆ ಪಯಣ ಬೆಳೆಸಿದರು
ದೂರದ ಅಲಹಾಬಾದ್‌ನಿಂದ ವಿಮಾನದಲ್ಲಿ ಮೈಸೂರಿಗೆ ಆಗಮಿಸುತ್ತಿದ್ದ ಪುತ್ರಿ ಶೃತಿಯನ್ನು ಕರೆತರಲು ಖುಷಿಯಿಂದಲೇ ಊರಿನಿಂದ ಹೊರಟ ದಂಪತಿ ಅಪಘಾತದಲ್ಲಿ ಹೆಣವಾಗಿದ್ದು ದುರ್ದೈವ. ಇವರ ಅಪಾರ ಶಿಷ್ಯ ವೃಂದ ಕಂಬನಿ ಮಿಡಿದಿದ್ದಾರೆ.