Advertisement

ಹನೂರು ಕ್ಷೇತ್ರದಲ್ಲಿ ಕಗ್ಗಂಟಾದ ಬಿಜೆಪಿ ಅಭ್ಯರ್ಥಿಯ ಆಯ್ಕೆ

12:43 PM Mar 30, 2023 | Team Udayavani |

ಹನೂರು: ಮನೆಯೊಂದು 5 ಬಾಗಿಲಿನಂತೆ ಒಡೆದ ಮನೆಯಂತಾಗಿರುವ ಬಿಜೆಪಿಯಿಂದ ಹನೂರು ಕ್ಷೇತ್ರದ ಅಭ್ಯರ್ಥಿಯಾಗಿ ಯಾರ ಹೆಸರು ಅಂತಿಮವಾಗಲಿದೆ. ಟಿಕೆ‌ಟ್‌ ವಂಚಿತರು ಯಾವ ಪಕ್ಷದಿಂದ ಸ್ಫರ್ಧಿಸಲಿದ್ದಾರೆ ಎಂಬುದು ಕ್ಷೇತ್ರಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Advertisement

ಅತ್ಯಲ್ಪ ಮತದಿಂದ ಸೋತಿದ್ದ ಪ್ರೀತನ್‌: ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸಚಿವ ಸೋ ಮಣ್ಣ ಹಾಗೂ ಇನ್ನಿತರ ಆಕಾಂಕ್ಷಿಗಳಿಗೆ ಸೆಡ್ಡುಹೊಡೆದು ಅಂತಿಮ ಕ್ಷಣದಲ್ಲಿ ಟಿಕೆಟ್‌ ಪಡೆದು ಸ್ಫರ್ಧೆಗೆ ಇಳಿದಿದ್ದ ಪ್ರೀತನ್‌ ನಾಗಪ್ಪ ಕೇವಲ 3500 ಮತಗಳ ಅಂತರದಿಂದ ಪರಾಭವಗೊಂಡರು. ಇನ್ನು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಂಜುನಾಥ 44 ಸಾವಿರ ಮತ ಪಡೆದಿದ್ದರಿಂದ ಮತಗಳ ವಿಭಜನೆಯ ಸಂಪೂರ್ಣ ಲಾಭ ನರೇಂದ್ರ ಅವರಿಗೆ ದೊರೆತಿತ್ತು.

ಪ್ರೀತನ್‌ ಸೋಲಿಗೆ ಸೋಮಣ್ಣ ಕಾರಣ?: 2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಫರ್ಧೆ ಬಯಸಿದ್ದ ಸಚಿವ ಸೋಮಣ್ಣರಿಗೆ ನಾಗಪ್ಪ ಕುಟುಂಬ ಸ್ಥರು ಟಿಕೆಟ್‌ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೆ ಅವರ ಹಿಂಬಾಲಕ ರಾಗಿದ್ದ ಎಂ.ಆರ್‌.ಮಂಜುನಾಥ್‌ರಿಗೆ ಜೆಡಿಎಸ್‌ ಟಿಕೆಟ್‌ ಕೊಡಿಸಿ ಸ್ಫರ್ಧೆಗಿಳಿಸಿ ಮತ ವಿಭಜನೆ ಮಾಡಿಸಿ ನಾಗಪ್ಪ ಪುತ್ರ ಡಾ.ಪ್ರೀತನ್‌ ನಾಗಪ್ಪರನ್ನು ಸೋಲಿಸಿದರು ಎಂಬುದು ಜಗಜ್ಜಾಹೀರಾಗಿದೆ. ಈ ಹಿನ್ನೆಲೆ ಕ್ಷೇತ್ರದಲ್ಲಿನ 50 ಸಾವಿರಕ್ಕೂ ಹೆಚ್ಚು ವೀರಶೈವ ಮತದಾರರು ಸೋ ಮಣ್ಣರ ವಿರುದ್ಧವಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗಾಗಲಿ, ಹನೂರು ಕ್ಷೇತ್ರಕ್ಕಾಗಲಿ ಯಾವುದೇ ಕೊಡುಗೆ ನೀಡಿಲ್ಲ. ಅವರು ಕ್ಷೇತ್ರಕ್ಕೆ ಕಾಲಿಟ್ಟಾಗಲೆಲ್ಲ ಶಾಸಕ ನರೇಂದ್ರ ಅವರನ್ನು ಹೊಗಳುತ್ತಿದ್ದರಿಂದ ಅವರ ನಡೆಯ ವಿರುದ್ಧ ಬಿಜೆಪಿ ಮಂಡಲದ ಅಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿ ಕಾರಿಗಳು ಸೇರಿ ಬಹತೇಕ ವೀರಶೈವ ಮುಖಂ ಡರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹನೂ ರು ಕ್ಷೇತ್ರದಿಂದ ಸೋಮಣ್ಣ ಸ್ಫರ್ಧೆ ಮಾಡಿದ್ದಲ್ಲಿ ಗೆಲುವು ಕಷ್ಟವಾಗಲಿದೆ ಎಂಬುದು ಜನತೆ ಅಭಿಪ್ರಾಯವಾಗಿದೆ.

ದತ್ತೇಶ್‌ ಕುಮಾರ್‌ಗೆ ಟಿಕೆಟ್‌ ಡೌಟ್‌: ಇನ್ನು ಮತ್ತೋರ್ವ ಆಕಾಂಕ್ಷಿ ದತ್ತೇಶ್‌ ಕುಮಾರ್‌ ಅವರು ಕೊಳ್ಳೇಗಾಲದಲ್ಲಿ ಮಾನಸ ಶಿಕ್ಷಣ ಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದಲ್ಲದೆ ಹಲವಾರು ಜನಪರ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಸಮುದಾಯದ ಬಲ ಕಡಿಮೆಯಿದ್ದು ಯಾವುದೇ ಸಾಂಪ್ರದಾಯಿಕ ಮತ ಬರುವುದಿಲ್ಲ. ಈ ಹಿನ್ನೆಲೆ ಇವರು ಸ್ಫರ್ಧಿಸಿದರೂ ಗೆಲುವು ಲಭಿಸುವುದಿಲ್ಲ ಎಂಬುದು ಬಿಜೆಪಿ ವರಿಷ್ಠರಿಗೆ ತಿಳಿದಿದ್ದು ಇವರಿಗೆ ಬಿ-ಫಾರಂ ನೀಡುವ ಯಾವುದೇ ಸಾಧ್ಯತೆಗಳಿಲ್ಲ.

Advertisement

ವಲಸಿಗರಿಗೂ ಟಿಕೆಟ್‌ ಡೌಟ್‌: ಇನ್ನು ಹನೂರು ಕ್ಷೇತ್ರಕ್ಕೆ ವಲಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಈ ಪಟ್ಟಿಯಲ್ಲಿ ಇದೇ ಕ್ಷೇತ್ರ ಮೂಲದವರು ಎಂದು ಘೋಷಿಸಿಕೊಂಡು ಬೆಂಗಳೂರಿನಿಂದ ಬಂದಿರುವ ಜನಧ್ವನಿ ವೆಂಕಟೇಶ್‌ ಮತ್ತು ಇನ್ನೂ ಕ್ಷೇತ್ರದವರಿಗೆ ಮೂಲದ ಬಗ್ಗೆ ಮಾಹಿತಿಯೇ ಇಲ್ಲದೆ ಕಳೆದ 1 ವರ್ಷದಿಂದ ಓಡಾಡುತ್ತಿರುವ ನಿಶಾಂತ್‌ ಅವರೂ ಸ್ಫರ್ಧೆ ಬಯಸಿದ್ದಾರೆ. ಇವರಿಗೆ ಬಿಜೆಪಿಯಿಂದ ಟಿಕೆಟ್‌ ಲಭಿಸುವ ಸಾಧ್ಯತೆಗಳಿಲ್ಲ. ಕೆಲ ಮೂಲಗಳ ಪ್ರಕಾರ ನಿಶಾಂತ್‌ ಸಚಿವ ಸೋಮಣ್ಣ ಅವರ ಕಟ್ಟಾ ಬೆಂಬಲಿಗರಾಗಿದ್ದು ಅವರನ್ನು ಕಣಕ್ಕಿಳಿಸಿದ್ದಲ್ಲಿ ಅವರನ್ನು ಬೆಂಬಲಿಸುತ್ತಾರೆ. ಇಲ್ಲವಾದಲ್ಲಿ ಪಕ್ಷೇತರರಾಗಿ ಕಣಕ್ಕಿಯಲಿದ್ದಾರೆ ಎನ್ನಲಾಗುತ್ತಿದ್ದು ಇವರು ಸ್ಫರ್ಧಿಸಿದಲ್ಲಿ ವೀರಶೈವ ಮತ ವಿಭಜನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇನ್ನೋರ್ವ ಮುಖಂಡ ಜನಧ್ವನಿ ವೆಂಕಟೇಶ್‌ ಕಳೆದ 5 ವರ್ಷಗಳಿಂದ ಜನರಿಗೆ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಕೊರೊನಾ ವೇಳೆ ಆ್ಯಂಬುಲೆನ್ಸ್‌ ವ್ಯವಸ್ಥೆ, ಔಷಧಿಗಳ ವಿತರಣೆ ಮಾಡಿ, ಆಹಾರ ಕಿಟ್‌ ವಿತರಿಸಿ ನೆರವಾಗಿದ್ದರು. ಆದರೆ ಕಳೆದ 1 ವರ್ಷದಿಂದೀಚೆಗೆ ಇವರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇವರ ಅನುಮತಿ ಇಲ್ಲದೆ ವೆಂಕಟೇಶ್‌ ಅವರನ್ನು ಭೇಟಿ ಮಾಡುವುದು, ಮಾತನಾಡುವುದೇ ಕಷ್ಟ ಎಂಬುದನ್ನು ಅರಿತು ಇವರ ಬಳಿಯಿದ್ದ ಕೆಲ ಸ್ಥಳೀಯ ಮುಖಂಡರು ಇವರಿಂದ ದೂರ ಉಳಿದಿದ್ದಾರೆ. ಇವರಿಗೆ ಟಿಕೆಟ್‌ ಲಭಿಸುವ ಮಾತು ದೂರ ಎನ್ನಲಾಗುತ್ತಿದೆ.

ಟಿಕೆಟ್‌ಗಾಗಿ ಹಲವು ನಾಯಕರ ಪೈಪೋಟಿ : ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಫರ್ಧೆಗಾಗಿ ಕಳೆದ 2018ರ ಚುನಾವಣೆ ಪರಾಜಿತ ಅಭ್ಯರ್ಥಿ ಮಾಜಿ ಸಚಿವ ದಿ.ನಾಗಪ್ಪ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಪುತ್ರ ಡಾ.ಪ್ರೀತನ್‌ ನಾಗಪ್ಪ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್‌ ಕುಮಾರ್‌, ಬೆಂಗಳೂರು ಮೂಲದ ಉದ್ಯಮಿಗಳಾದ ಜನಧ್ವನಿ ವೆಂಕಟೇಶ್‌ ಮತ್ತು ನಿಶಾಂತ್‌ ಶಿವಮೂರ್ತಿ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಹನೂರು ಕ್ಷೇತ್ರದಿಂದ ಸ್ಫರ್ಧೆಗಾಗಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಸತಿ ಸಚಿವ ಸೋಮಣ್ಣ ಕೂಡ ಕಸರತ್ತು ನಡೆಸುತ್ತಿದ್ದಾರೆ.

– ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next