ಉಡುಪಿ: ಸಂಸತ್ ಅಧಿವೇಶನದಲ್ಲಿ ದೇಶದ ಸಮಸ್ಯೆ, ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು ಸದನದ ಸಮಯವನ್ನೇ ಹಾಳು ಮಾಡುವ ಮೂಲಕ ಕಾಂಗ್ರೆಸ್ ಪ್ರಜಾತಂತ್ರ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸಂಸತ್ ಕಲಾಪಕ್ಕೆ ನಿರಂತರವಾಗಿ ಭಂಗವನ್ನುಂಟು ಮಾಡಿದ ಕಾಂಗ್ರೆಸ್ ವಿರುದ್ಧ ಗುರುವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ನಡೆದ ಉಪವಾಸ ಸತ್ಯಾಗ್ರಹ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ತನ್ನ ವರ್ತನೆಗೆ ಕಾಂಗ್ರೆಸ್ ದೇಶದ ಜನರ ಬಳಿ ಕ್ಷಮೆ ಕೇಳಬೇಕಾಗಿತ್ತು, ಆದರೆ ಬಿಜೆಪಿಯೇ ಕ್ಷಮೆ ಯಾಚಿಸುತ್ತಿದೆ ಎಂದರು.
ದೇಶಾದ್ಯಂತ ಉಪವಾಸ
ಕಾಂಗ್ರೆಸ್‌ನ ಪ್ರಜಾತಂತ್ರ ವಿರೋಧಿ ನಡೆಯನ್ನು ವಿರೋಧಿಸಿ ಎಲ್ಲ ಸಚಿವರು, ಬಿಜೆಪಿಯ ಸಂಸದರು ದೇಶಾದ್ಯಂತ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಪ್ರಧಾನಿ ಕರೆ ನೀಡಿದ್ದಾರೆ. ಅದರಂತೆ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಮೋದಿಯವರು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ದೇಶದ ಜನರ ಕಣ್ಣು ತೆರೆಸಬೇಕು. ಅತ್ಯಂತ ಹಳೆಯ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ನ ಪ್ರಜಾತಂತ್ರ ವಿರೋಧಿ, ಜನವಿರೋಧಿ ನಡೆಯನ್ನು ತೋರಿಸಿ ಕಾಂಗ್ರೆಸ್ ಮುಖವಾಡ ಕಳಚಬೇಕು ಎಂಬ ಉದ್ದೇಶದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಜನರ ಪರವಾಗಿ ಚರ್ಚೆ ಮಾಡಲು ಸಾಧ್ಯವಾಗಿಲ್ಲ ಎಂಬ ನೋವು ನಮಗೆ ಕಾಡುತ್ತಿದೆ ಎಂದು ಶೋಭಾ ಹೇಳಿದರು.
ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್, ಪಕ್ಷದ ಮುಖಂಡರಾದ ಸುಕುಮಾರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕುತ್ಯಾರು ನವೀನ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಪ್ರಭಾಕರ ಪೂಜಾರಿ, ಗೀತಾಂಜಲಿ ಸುವರ್ಣ, ರೇಷ್ಮಾ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ರವಿ ಅಮೀನ್, ರಂಜಿತ್ ಸಾಲ್ಯಾನ್ ಪಾಲ್ಗೊಂಡಿದ್ದರು. ಧ್ವನಿವರ್ಧಕ ಬಳಸಿರಲಿಲ್ಲ. ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಸಂಸತ್ತು ಅನ್ನುವುದು ಪ್ರಜಾತಂತ್ರದ ದೇವಸ್ಥಾನ. ಅಲ್ಲಿ ಕುಡಿಯುವ ನೀರು, ರೈತರ ಸಮಸ್ಯೆ, ಸಾಮರಸ್ಯ ಮೊದಲಾದ ಅನೇಕ ವಿಷಯಗಳನ್ನು ಚರ್ಚಿಸಬೇಕಾಗಿತ್ತು. ಹಿಂದುಳಿದ ವರ್ಗಗಳ ಮಸೂದೆಯೂ ಚರ್ಚೆಗೆ ಬಾಕಿಯಿದೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಕಾಂಗ್ರೆಸ್ ಚರ್ಚೆಗೆ ಅವಕಾಶ ಕೊಡದೆ ಕಲಾಪದ ಸಮಯವನ್ನೇ ಹಾಳು ಮಾಡಿದೆ.
– ಶೋಭಾ ಕರಂದ್ಲಾಜೆ, ಸಂಸದೆ