ಹುಬ್ಬಳ್ಳಿ: ರೈಲ್ವೆ ಇಲಾಖೆಯ ಆಡಳಿತ ಮಂಡಳಿ ತರಬೇತಿ ಕೋರ್ಸ್ ಪೂರ್ಣಗೊಳಿಸಿದ ಅಪ್ರಂಟೀಸ್‌ಗಳನ್ನು ನೇಮಕ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಸೋಮವಾರ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಆಕಾಂಕ್ಷಿಗಳು ಪ್ರತಿಭಟಿಸಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಸದ್ಯ ನೈಋತ್ಯ ರೈಲ್ವೆ ವಲಯದಲ್ಲಿ 5,500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿ ಕಾರ್ಯ ಮಾತ್ರ ನಡೆಯುತ್ತಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿ ವಿವಿಧ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಏನೋ ಪ್ರಯೋಜನವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳ ಹಿಂದೆ ಮೈಸೂರಿನವರಾಗಿದ್ದ ಅಭಿಷೇಕ ಎಂಬುವರು ಉದ್ಯೋಗ ದೊರಕದ ಕಾರಣ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ತುಂಬಾ ಖೇದಕರ ಸಂಗತಿ. ರಾಜ್ಯದಲ್ಲಿ ಉದ್ಯೋಗಕ್ಕಾಗಿ ಸಾವಿರಾರು ಜನರ ನಿರುದ್ಯೋಗಿಗಳು ಕಾಯುತ್ತಿದ್ದಾರೆ. ಇಲಾಖೆ ಮಾತ್ರ ಕಣ್ಣು ತೆರೆಯುತ್ತಿಲ್ಲ.
ನಮ್ಮೊಂದಿಗೆ ಅಪ್ರೇಂಟಿಸ್ ಮುಗಿಸಿದ ಬೇರೆ ರಾಜ್ಯದಲ್ಲಿ ಈಗಾಗಲೇ ಉದ್ಯೋಗ ಭರ್ತಿ ಕಾರ್ಯ ಮಾಡಲಾಗಿದ್ದು, ರಾಜ್ಯದಲ್ಲಿ ಮಾತ್ರ ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ಆರ್‌ಜಿಎಸ್ ಮೂಲಕ ಗದಗ ರಸ್ತೆಯಲ್ಲಿರುವ ಜಿಎಂ ಕಚೇರಿಗೆ ತೆರಳಿ ಧರಣಿ ನಡೆಸಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ರವಿ ಗಾಣಿಗೇರ, ಶಿವರಾಜ, ಅರವಿಂದ ಮದವಿನಕೇರಿ, ಶಿವರಾಜ ಮಗದುಮ್, ಎಂ.ಜಾಫರ್ ಭಗವಾನ, ಶ್ರೀನಿವಾಸ, ಅನಿಲ, ಪವನಕುಮಾರ, ಸುನೀಲ ಕವಟೆ, ಶ್ಯಾಮ್ ನಾಯ್ಕ, ಬಸವರಾಜ ಸಾಯಣ್ಣವರ, ನಿರಂಜನಕುಮಾರ ಎಂ.ಎಸ್., ನವೀನ, ವಸುದೇವ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.