ಕುಂದಾಪುರ: ಮಾನ್ಸೂನ್ ಅನಂತರ ಸಮುದ್ರದಲ್ಲಿ ತೇಲಿ ಬಂದ ಕಸದ ರಾಶಿಯಿಂದ ಬರೀ 10 ಮೀ. ಅಂತರದಲ್ಲಿ ಸಿಕ್ಕ ಪೆನ್‌ಗಳ ಸಂಖ್ಯೆ ನೂರಾರು. ಅದೆಷ್ಟೋ ಕಿಲೋ ಮೀಟರ್ ದೂರ ಸಾಗಿ ಬರುವಾಗ ಸಮುದ್ರ ದಡ ಸೇರದೆ ಇನ್ನೆಷ್ಟು ಪೆನ್‌ಗಳು ಮೂಕ ಜೀವಿಗಳ ಹೊಟ್ಟೆ ಸೇರಿದವೋ? ಕೋಡಿ ಕಡಲ ತೀರದಲ್ಲಿ ಸ್ವಚ್ಛತೆ ಅಭಿಯಾನ ಮಾಡುತ್ತಿದ್ದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡಕ್ಕೆ ಮೂಟೆಗಟ್ಟಲೆ ತ್ಯಾಜ್ಯದ ಜತೆ ಪೆನ್ನುಗಳೂ ಸಿಕ್ಕಿವೆ.
ಈ ಕುರಿತಾದ ಒಂದು ಪೋಸ್ಟ್ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದ ಸದಸ್ಯ, ಶಿಕ್ಷಕ ಸಂತೋಷ ಕೋಡಿ ಅವರು ಹಾಕಿಕೊಂಡ ಒಕ್ಕಣೆ ಹಾಗೂ ಸಿಕ್ಕಿದ ಪೆನ್ನುಗಳು ಅನೇಕ ಜಾಲತಾಣಿಗರ ಆಕರ್ಷಣೆಗೆ ಕಾರಣವಾಗಿದೆ.
ಅವರು ಬರೆದಂತೆ; ನನ್ನ ಪ್ರೀತಿಯ ಆರೂರು ಶಾಲೆಯಿಂದ ಹೊರಬಿದ್ದ ಮೇಲೆ ಮಕ್ಕಳ ಕಣ್ಣುಗಳ ಎದುರಿಸಲಾರದೇ ಆಚೆ ಕಡೆ ಹೋಗೇ ಇರಲಿಲ್ಲ. ಆದರೆ ಮನೆ ಖಾಲಿ ಮಾಡ ಹೊರಟ ಕೊನೆಯ ದಿನ ಸಿಕ್ಕ ನನ್ನ ಪ್ರೀತಿಯ ಮಕ್ಕಳು “ಸರ್ ಈಗಲೂ ಬಳಸಿಯಾದ ಪೆನ್ ಗಳು ಬಿಸಾಡದೇ ಎತ್ತಿಡ್ತಾ ಇದ್ದೀವಿ, ಅದು ಸುಮಾರಷ್ಟಾಗಿದೆ ತಂದುಕೊಡ್ಲಾ’ ಅಂತ ನನ್ನ ಉತ್ತರಕ್ಕೂ ಕಾಯದೆ ಸುಮಾರಷ್ಟು ಬಳಕೆಯಾದ ಪೆನ್‌ಗಳ ತಂದು ನನ್ನ ಕೈಗಿತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಅವರು ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದಾಗ 4 ಸಾವಿರದಷ್ಟು ಬಳಸಿ ಬಿಸಾಡಿದ ಪೆನ್ನುಗಳನ್ನು ಮಕ್ಕಳಾದ ಸಂಜನಾ, ಪೂಜಾ, ಹರ್ಷಿತ್, ರಾಕೇಶ್ ಅವರು ಸಂಗ್ರಹಿಸಿ ನೀಡಿದ್ದರು. ಬಳಸಿ ಬಿಸಾಡಿದ ಪೆನ್ನುಗಳನ್ನು ಹಕ್ಕಿಗಳು, ಮೀನು ತಿಂದು ಅದರಿಂದಾಗುವ ಅನಾಹುತವನ್ನು ಮಕ್ಕಳಿಗೆ ತಿಳಿಹೇಳಿದ್ದರು. ಇದರಿಂದ ಪ್ರೇರಣೆಗೊಂಡ ಮಕ್ಕಳು ಕ್ಯಾಂಪಸ್ಸಿನಲ್ಲಿ ಅಡ್ಡಾಡಿ ಪೆನ್ನು ಸಂಗ್ರಹಿಸಿದ್ದರು.
ಇದೀಗ ಕೋಡಿ ಕಡಲತಡಿಯ ತ್ಯಾಜ್ಯ ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ನಡೆಸುವ ಸಂದರ್ಭ ಇದೇ ಮಾದರಿಯಲ್ಲಿ ರಾಶಿ ರಾಶಿ ಪೆನ್ನುಗಳು ದೊರೆತಿವೆ. ಈಗಾಗಲೇ ಕೇಂದ್ರ ಸರಕಾರ ಕಿವಿಗೆ ಹಾಕುವ ಬಡ್, ಹಲ್ಲಿಗೆ ಹಾಕುವ ಪ್ಲಾಸ್ಟಿಕ್ ಕಡ್ಡಿ, ಚಹಾದ ಜತೆ ಸಕ್ಕರೆ ಕರಗಿಸಲು ಉಪಯೋಗಿಸುವ ಪ್ಲಾಸ್ಟಿಕ್ ಕಡ್ಡಿಯಂತಹ ಪದಾರ್ಥಗಳನ್ನು ನಿಷೇಧಿಸಿದೆ. ಇಂತಹ ಕಡ್ಡಿಗಳೇ ಮಣ್ಣಿನಲ್ಲಿ ಕರಗದೇ ತುಂಡಾಗಿ ಹಕ್ಕಿಯ ಹೊಟ್ಟೆಗೆ, ನೀರಿನಲ್ಲಿ ಸೇರಿ ಮೀನಿನ ಹೊಟ್ಟೆಗೆ ಸೇರಿ ಅನಾಹುತ ವಾಗುತ್ತಿದೆ. ಈಗ ಅಂತಹ ಪೆನ್ನುಗಳು ಸಮುದ್ರ ತಡಿಯಲ್ಲೂ ದೊರೆಯತೊಡಗಿವೆ. ಇವು ಮೀನುಗಳಿಗೆ ಅಪಾಯ. ಆದ್ದರಿಂದ ಇವುಗಳನ್ನು ಎಸೆಯುವ ಮುನ್ನ ಯೋಚಿಸಿ ಎನ್ನುವುದು ಕ್ಲೀನ್ ಕುಂದಾಪುರ ತಂಡದ ಮನವಿ.