Advertisement

ನಾಗೂರು: ಒಡಲಲ್ಲಿದೆ ಕನಸು ನೂರಾರು

03:52 PM Aug 04, 2022 | Team Udayavani |

ಉಪ್ಪುಂದ: ಬೈಂದೂರು ತಾಲೂಕಿನಲ್ಲಿಯೇ ಭರವಸೆ ಹುಟ್ಟಿಸುವಂತೆ ಬೆಳೆಯುತ್ತಿರುವ ಗ್ರಾಮ ನಾಗೂರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗ್ರಾಮದಲ್ಲಿ ಕನಸುಗಳ ನಾಟಿ ಮಾಡಿದರೆ ಉತ್ತಮ ಬೆಳೆ ತೆಗೆಯಲು ಯಾವುದೇ ಸಮಸ್ಯೆಯಿಲ್ಲ. ಹಾಗಾಗಿ ನಾಟಿ ಮಾಡಲು ಇದು ಸಕಾಲ.

Advertisement

ಕಿರಿಮಂಜೇಶ್ವರ ಗ್ರಾ.ಪಂ.ನ ಚಿತ್ರಾಡಿ, ಗುಜ್ಜಾನುಗುಡ್ಡೆ, ನುಕ್ಕಿತಾರ್‌ ಪ್ರದೇಶಗಳನ್ನು ಹೊಂದಿರುವ ಪ್ರಮುಖ ಗ್ರಾಮ ನಾಗೂರು. ಅಭಿವೃದ್ಧಿ ಹಂಬಲದಲ್ಲಿರುವ ಈ ಗ್ರಾಮಕ್ಕೆ ದೂರದೃಷ್ಟಿಯುಳ್ಳ ಯೋಜನೆ ಬೇಕಾಗಿದೆ.

ಈ ಗ್ರಾಮದಲ್ಲಿ ಮನೆಗಳು 400, ಜನಸಂಖ್ಯೆ 2,000. ಇಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ, ಬೇಕಾದಷ್ಟು ಇವೆ. ಆದರೆ ಅಭಿವೃದ್ಧಿಗೆ ಅನುದಾನವನ್ನು ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಒದಗಿಸಬಹುದೆಂಬ ನಿರೀಕ್ಷೆಯೂ ಇದೆ.

ದೂರದೃಷ್ಟಿ ಇರಲಿ

ನಾಗೂರು ಪೇಟೆಯ ಒಳ ರಸ್ತೆ ಇಕ್ಕಟ್ಟಾಗಿದೆ. ಚರಂಡಿ ಅವ್ಯವಸ್ಥೆ ಕಣ್ಣ ಮುಂದಿದೆ. ಇದನ್ನು ಕೂಡಲೇ ತುರ್ತಾಗಿ ಸುಸಜ್ಜಿತಗೊಳಿಸಬೇಕಿದೆ. ಪ್ರಮುಖ ರಸ್ತೆಯಾದ ಈ ಪೇಟೆ ರಸ್ತೆಯ ಒಂದು ಬದಿಗೆ ಅವೈಜ್ಞಾ ನಿಕವಾಗಿ ನಿರ್ಮಿಸಿದ ಚರಂಡಿಯೇ ಇಂದು ಸಮಸ್ಯೆಯಾಗಿದೆ. ಕೊಡೇರಿಗೆ ಹೋಗುವ ರಸ್ತೆಯ ಪ್ರಾರಂಭದಲ್ಲಿ ನೀರು ತುಂಬಿಕೊಳ್ಳುತ್ತದೆ. ಇದು ನಿಷ್ಪÅಯೋಜಕ ವಾದ ಕಾರಣ ಮತ್ತೂಂದು ಬದಿಯಲ್ಲಿ ಚರಂಡಿ ನಿರ್ಮಿಸಲಾಯಿತು. ಈಗ ಅದನ್ನು ಸರಿಯಾಗಿ ನಿರ್ವಹಿಸಬೇಕಿದೆ.

Advertisement

ಪೇಟೆಯಲ್ಲಿ ಸದಾ ಜನದಟ್ಟಣೆ ಇರುತ್ತದೆ. ಸುತ್ತಲಿನ ಗ್ರಾಮ, ವಸತಿ ಪ್ರದೇಶಗಳಿಗೂ ಈ ಪೇಟೆ ಪ್ರಮುಖ ಸಂಪರ್ಕ ಕೊಂಡಿ. ಪ್ರಸ್ತುತ ಪೇಟೆಯಲ್ಲಿ ಎಲ್ಲೂ ಶೌಚಾಲಯವಿಲ್ಲ. ಇದು ಈಡೇರಿದರೆ ನಿತ್ಯವೂ ಪೇಟೆಗೆ ಬರುವ ನೂರಾರು ಜನರಿಗೆ ಅನುಕೂಲವಾಗಲಿದೆ.

ಬೇಡಿಕೆ ಈಡೇರಲಿ

ನಾಗೂರಿನಲ್ಲಿ ವಾರದ ಸಂತೆ ನಡೆಯುತ್ತದೆ. ಈಗ ಅದು ಸಣ್ಣ ಪ್ರಮಾಣದಲ್ಲಿದ್ದು, ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸದರೆ ನೆರೆಹೊರೆ ಗ್ರಾಮಗಳ ಜನರನ್ನು, ವ್ಯಾಪಾರಿಗಳನ್ನೂ ಆಕರ್ಷಿಸಬಹುದು. ಪೇಟೆಯಲ್ಲಿ ವಾಹನ ನಿಲುಗಡೆಗೆ ಸ್ಪಷ್ಟ ವ್ಯವಸ್ಥೆ ಜಾರಿಗೆ ಬರಬೇಕಿದೆ.

ಈಗಿರುವ ಬಸ್‌ ನಿಲ್ದಾಣ ಸುಸಜ್ಜಿತವಾಗಿಲ್ಲ. ಇದರ ಸುತ್ತಲೂ ಗಿಡಗಂಟಿಗಳು, ಪೊದೆಗಳು ಬೆಳೆದಿವೆ. ಇದನ್ನು ಸರಿಪಡಿಸಬೇಕಿದೆ.

ಅಪಘಾತಕ್ಕೆ ಬೇಕಿದೆ ಕಡಿವಾಣ

ನಾಗೂರಿನಲ್ಲಿ ರಾ.ಹೆದ್ದಾರಿ 66 ಹಾದು ಹೋಗುತ್ತದೆ. ಇಲ್ಲಿನ ಮಸೀದಿ ಎದುರು ಯೂ ಟರ್ನ್ ನೀಡಲಾಗಿದೆ. ಇಲ್ಲಿ ಅಪಘಾತ ಹೆಚ್ಚುತ್ತಿವೆ. ಕಿರಿಮಂಜೇಶ್ವರ ರಾ.ಹೆ‌ದ್ದಾರಿ 66ರ ಅಂಡರ್‌ ಪಾಸ್‌ನಿಂದ ನಾಗೂರು ಸಂದೀಪನ್‌ ಶಾಲೆಯ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಹಲವು ಮನವಿ ಸಲ್ಲಿಸಿದ್ದು, ಇನ್ನೂ ಈಡೇರಿಲ್ಲ. ಕೂಡಲೇ ಜನಪ್ರತಿನಿಧಿಗಳು ಇದರತ್ತ ಗಮನಹರಿಸಬೇಕಿದೆ. ಇದರೊಂದಿಗೆ ಬೀದಿ ದೀಪಗಳ ನಿರ್ವಹಿಸದಿರುವುದೂ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸಲು ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

ಸ್ವಚ್ಛತೆಗೆ ಬೇಕಿದೆ ಆದ್ಯತೆ

ರಸ್ತೆಯ ಬದಿಗಳಲ್ಲಿ ಕಸಗಳ ರಾಶಿ ಬೀಳುತ್ತಿದ್ದು, ನಾಗೂರು ಪೇಟೆಯಲ್ಲೂ ಇದೇ ಪರಿಸ್ಥಿತಿ ಇದೆ. ರಸ್ತೆಗಳಿಗೆ ದಾರಿ ದೀಪ ಅಳವಡಿಕೆಯ ಅಗತ್ಯವಿದೆ. ಗ್ರಾಮದ 27 ಜನರು 94ಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಹಕ್ಕು ಪತ್ರ ವಿತರಣೆಯಾಗಿಲ್ಲ, 1ಎಕ್ರೆ ಜಾಗದಲ್ಲಿ ಹಿಂದು ರುದ್ರಭೂಮಿ ಇದ್ದು ಆರ್‌ಟಿಸಿ ಇದರ ಹೆಸರಿಗೆ ಆಗಬೇಕಿದೆ.

ಕೃಷಿಕ ಸಮಸ್ಯೆಗೆ ಬೇಕಿದೆ ಮುಕ್ತಿ

ಗ್ರಾಮದಲ್ಲಿ ಕಲ್ಲಂಗಡಿ, ಭತ್ತ, ನಲೆಗಡಲೆ ಪ್ರಮುಖ ಬೆಳೆ. ಕೃಷಿಕರ ದೊಡ್ಡ ಸಮಸ್ಯೆ ಹೇರೂರು, ಕಂಬದಕೋಣೆ ಮಾರ್ಗವಾಗಿ ಎಡಮಾವಿನ ಹೊಳೆಗೆ ಸಂಪರ್ಕ ಕಲ್ಪಿಸುವ ತೋಡು.ಇದು ಇಕ್ಕಟ್ಟಾಗಿರುವುದು ಒಂದು ಸಮಸ್ಯೆಯಾದರೆ, ಹೂಳನ್ನು ತೆಗೆಯದಿರುವುದು ಮತ್ತೂಂದು ಸಮಸ್ಯೆ. ಇದರಿಂದ ಗ್ರಾಮದ ಸುಮಾರು 250 ಎಕ್ರೆ ಕೃಷಿ ಭೂಮಿ ನೆರೆ ಹಾವಳಿಯಿಂದ ತತ್ತರಿಸುತ್ತಿದೆ. ಹೂಳನ್ನು ಎತ್ತಿ, ತೋಡನ್ನು ಅಗಲಗೊಳಿಸಿ, ಬದಿ ಗೋಡೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಇದು ಕೂಡಲೇ ಈಡೇರಬೇಕೆಂಬುದು ರೈತರ ಬೇಡಿಕೆ.

ಮೂಲ ಸೌಕರ್ಯಕ್ಕೆ ಆದ್ಯತೆ: ಬೋದು ನೀರು ನಿರ್ವಹಣ ಯೋಜನೆಯಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ನಾಗೂರು ಗ್ರಾಮದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಇನ್ನಷ್ಟು ಆದ್ಯತೆ ನೀಡಲಾಗುವುದು. –ಗೀತಾ, ಅಧ್ಯಕ್ಷರು, ಕಿರಿಮಂಜೇಶ್ವರ ಗ್ರಾ.ಪಂ.

ಸೂಕ್ತ ಅನುದಾನ ಒದಗಿಸಿ ಪೇಟೆಯಲ್ಲಿ ಶೌಚಾಲಯ ಅಗತ್ಯ, ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ರೈತರಿಗೆ ಎಡಮಾವಿನ ಹೊಳೆಯ ತೋಡಿನಿಂದಾಗಿ ಸಮಸ್ಯೆ ಎದುರಾಗಿದ್ದು, ಸೂಕ್ತ ಅನುದಾನ ಒದಗಿಸಿ ಅಭಿವೃದ್ಧಿಪಡಿಸಬೇಕಿದೆ. –ದಿನೇಶ ದೇವಾಡಿಗ, ನಾಗೂರು.

-ಕೃಷ್ಣ ಬಿಜೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next