Advertisement

ಆರು ತಿಂಗಳು ನೂರು ಸಿನಿಮಾ; ಸ್ಯಾಂಡಲ್ ವುಡ್ ನಲ್ಲಿ ಶತಕ ಸಂಭ್ರಮ

02:44 PM Jul 01, 2022 | Team Udayavani |

ಕನ್ನಡ ಚಿತ್ರರಂಗಕ್ಕೆ ಇಂದು ನೂರರ ಸಂಭ್ರಮ! ಈ ಸಂಭ್ರಮದಲ್ಲಿ ಅನೇಕರು ಗೆದ್ದಿದ್ದಾರೆ, ಇನ್ನು ಕೆಲವರು ನೆಲೆ ಕಂಡುಕೊಂಡಿದ್ದಾರೆ, ಮತ್ತೂಂದಿಷ್ಟು ಮಂದಿಗೆ ಕಹಿ ಅನುಭವವೂ ಆಗಿದೆ.

Advertisement

– ಏನಿದು ನೂರರ ಸಂಭ್ರಮ ಎಂದು ನೀವು ಕೇಳಬಹುದು. 2022ರ ಮೊದಲ ಆರು ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಇಂದಿಗೆ (ಜು.1) 100 ಆಗುತ್ತದೆ.

ಇಂದು ಬಿಡುಗಡೆಯಾಗುತ್ತಿರುವ ಶಿವರಾಜ್‌ಕುಮಾರ್‌ ಅವರ “ಬೈರಾಗಿ’ ಈ ವರ್ಷದ ನೂರನೇ ಸಿನಿಮಾ. ಇದರಲ್ಲಿ ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ “ಫ್ಯಾಮಿಲಿ ಪ್ಯಾಕ್‌’, “ಮ್ಯಾನ್‌ ಆಫ್ ದಿ ಮ್ಯಾಚ್‌’ ಹಾಗೂ “ಡಿಯರ್‌ ವಿಕ್ರಂ’ ಚಿತ್ರಗಳು ಕೂಡಾ ಸೇರುತ್ತವೆ. ಅಲ್ಲಿಗೆ ಆರು ತಿಂಗಳಲ್ಲಿ ಕನ್ನಡ ಚಿತ್ರರಂಗ ನೂರು ಸಿನಿಮಾಗಳಿಗೆ ಸಾಕ್ಷಿಯಾದಂತಾಗಿದೆ.

ಮೂರು ವರ್ಷಗಳ ಹಿಂದೆ ಅಂದರೆ ಕೋವಿಡ್‌ ಬರುವ ಮುಂಚೆ ಬಿಡುಗಡೆ ಕಂಡ ಚಿತ್ರಗಳ ಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆಯೇನೂ ದೊಡ್ಡದ್ದಲ್ಲ. ಆದರೆ, ಕೋವಿಡ್‌ ನಂತರ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ ಕನ್ನಡ ಚಿತ್ರರಂಗ ಮತ್ತೆ ಚೇತರಿಕೆಯ ಹಾದಿಯಲ್ಲಿದೆ ಎಂಬುದಕ್ಕೆ ಈ ಸಂಖ್ಯೆ ಹೆಚ್ಚು ಮಹತ್ವ ಪಡೆಯುತ್ತದೆ.

ಬದಲಾದ ಗೆಲುವಿನ ಮಾನದಂಡ: ಬಿಡುಗಡೆಯಾದ ನೂರು ಸಿನಿಮಾಗಳಲ್ಲಿ ಎಷ್ಟು ಸಿನಿಮಾಗಳು ಗೆದ್ದಿವೆ ಎಂದರೆ ಉತ್ತರಿಸೋದು ಕಷ್ಟ. ಏಕೆಂದರೆ ಇವತ್ತು ಗೆಲುವಿನ ಮಾನದಂಡ ಬದಲಾಗಿದೆ. ಕೆಲವು ವರ್ಷಗಳ ಹಿಂದೆ ಚಿತ್ರ ಮಂದಿರಗಳಲ್ಲಿ ಓಡಿ, ಹಣ ಮಾಡಿದ ಸಿನಿಮಾಗಳಷ್ಟೇ ಹಿಟ್‌ ಸಿನಿಮಾಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಕಾಲ ಬದಲಾದಂತೆ, ತಂತ್ರಜ್ಞಾನ ಮುಂದುವರೆದು, ಮನರಂಜನೆಗೆ ಹೊಸ ಹೊಸ ವೇದಿಕೆಗಳು ಸಿಗುತ್ತಿದ್ದಂತೆ ಸಿನಿಮಾದ ಗೆಲುವಿನ ಮಾನದಂಡ ಕೂಡಾ ಬದಲಾಗಿದೆ. ಇದರಿಂದಾಗಿ ಸಿನಿಮಾ ಬಿಡುಗಡೆಗೆ ಮುನ್ನವೇ ದೊಡ್ಡ ಮಟ್ಟದ ಬಿಝಿನೆಸ್‌ ಮಾಡಿ, ನಿರ್ಮಾಪಕನ ಜೇಬು ತುಂಬಿಸಿದ ಅನೇಕ ಸಿನಿಮಾಗಳು ನಮ್ಮ ಕಣ್ಣ ಮುಂದಿವೆ.

Advertisement

ಇದನ್ನೂ ಓದಿ:ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್‌’ ಜರ್ನಿ ಶುರು

ಹಾಗಂತ ಈ ಸಿನಿಮಾಗಳು ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ, ಗೆಲುವು-ಸೋಲನ್ನು ನಿರ್ಧರಿಸೋದು ಕಷ್ಟ. ಆದರೆ, 2022 ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ಹಾಗೂ ದೊಡ್ಡ ಗೆಲುವು ತಂದುಕೊಟ್ಟ ವರ್ಷ ಎಂಬುದರಲ್ಲಿ ಎರಡು ಮಾತಿಲ್ಲ. “ಕೆಜಿಎಫ್-2′, “777 ಚಾರ್ಲಿ’ ಚಿತ್ರಗಳು ಪರಭಾಷೆ ಕೂಡಾ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದರೆ, ಇನ್ನೊಂದಿಷ್ಟು ಕನ್ನಡ ಚಿತ್ರಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.

ಭರ್ಜರಿ ಓಟ: ಸದ್ಯ ಬೇರೆ ಚಿತ್ರರಂಗಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಚಿತ್ರರಂಗದ ಓಟ ಜೋರಾಗಿಯೇ ಇದೆ. ಹೊಸಬರ, ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್‌ ಸಿನಿಮಾಗಳು ಹಾಗೂ ಹೊಸಬರ ನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಲಿವೆ. ಆ ಚಿತ್ರಗಳು ಕೂಡಾ ಕಮಾಲ್‌ ಮಾಡಿದರೆ, ಕನ್ನಡ ಚಿತ್ರರಂಗ ಮತ್ತಷ್ಟು ಯಶಸ್ಸನ್ನು ತನ್ನದಾಗಿಸಿಕೊಳ್ಳಲಿದೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next