ಹುಣಸೂರು : ಜನನಿಬಿಡ ಪ್ರದೇಶದಲ್ಲಿ ಅಕ್ರಮವಾಗಿ ಗೋ ಮಾಂಸ ಕಡಿದು ಮಾರಾಟ ಮಾಡುತ್ತಿದ್ದ ಅಂಗಡಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಕೂಡಿಹಾಕಿದ್ದ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮಾರಾಟಕ್ಕಿಟ್ಟಿದ್ದ 200 ಕೆ.ಜಿ.ಗೋಮಾಂಸ ಹಾಗೂ 31 ಗೋವುಗಳನ್ನು ರಕ್ಷಿಸಿರುವ ಘಟನೆ ನಗರದ ಶಬ್ಬೀರ್ ನಗರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಪ್ರಾಣಿದಯಾ ಸಂಘದ ತಂಡದವರು ನೀಡಿರುವ ದೂರಿನಲ್ಲಿ ನಗರದ ಶಬ್ಬೀರ್ ನಗರಕ್ಕೆ ತೆರಳಿದ್ದ ವೇಳೆ ಐದಾರು ಅಂಗಡಿಗಳಲ್ಲಿ ಗೋವುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಲ್ಲದೆ, ಅಂಗಡಿಗಳಿಗೆ ಹೊಂದಿಕೊಂಡಂತೆ ಇರುವ ಕಸಾಯಿಖಾನೆಗಳ ಶೆಡ್ ಗಳಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ನೀರು, ಆಹಾರ ನೀಡದೆ ಕೂಡಿ ಹಾಕಿರುವುದು ಕಂಡುಬಂದಿದ್ದರಿಂದ ಹುಣಸೂರು ಡಿವೈಎಸ್ಪಿ ಮತ್ತು ನಗರ ಠಾಣೆ ಇನ್ಸ್ಪೆಕ್ಟರ್ರವರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಶಬ್ಬೀರ್ ನಗರಕ್ಕೆ ಹೋಗಿ ಅಕ್ರಮವಾಗಿ ಕೂಡಿ ಹಾಕಿದ್ದ 15 ಕರು, 2 ಎಮ್ಮೆಕರು, 14 ಹಸುಗಳನ್ನು ಒಟ್ಟು 31 ದನ-ಕರುಗಳನ್ನು ವಶಕ್ಕೆ ಪಡೆದರಲ್ಲದೆ ಸುಮಾರು ಪಿಂಜಾರಾಪೋಲ್ಗೆ ಕಳುಹಿಸಿದ್ದಾರೆ.
ಅಲ್ಲದೆ 200 ಕೆ.ಜಿಯಷ್ಟು ಗೋಮಾಂಸ ಹಾಗೂ ಕತ್ತರಿಸಲು ಬಳಸುವ ಪರಿಕರ ಹಾಗೂ ತೂಕದ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲಿಕರು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಉಪ್ಪುಂದ : ಹೊಸ ಚಿನ್ನ ಮಾಡಿಸಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ
Related Articles
ಜನವಸತಿ ಪ್ರದೇಶಗಳಲ್ಲಿ ಯಾವುದೇ ಪರವಾನಿಗಿ ಪಡೆಯದೆ ಕಸಾಯಿಖಾನೆಗಳನ್ನು ತೆರೆದಿರುವುದು, ವಧೆ ಮಾಡುತ್ತಿರುವುದು, ಕೊಂದ ಜಾನುವಾರುಗಳ ತ್ಯಾಜ್ಯಗಳನ್ನು ಸುತ್ತಮುತ್ತ ಪ್ರದೇಶಗಳಲ್ಲಿ ಬಿಸಾಡುತ್ತಿರುವುದು ಮತ್ತು ಅಕ್ರಮವಾಗಿ ಜಾನುವಾರುಗಳನ್ನು ಕೂಡಿ ಹಾಕಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋ ಸಾಗಣಿಕೆ ಮತ್ತು ಹತ್ಯೆ ಪ್ರಕರಣದ ರೀತ್ಯಾ ಪ್ರಕರಣ ನೋಂದಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.